Advertisement

War: ಮಾನವ ಸಂಕುಲದ ಬಿಡಿಸಲಾಗದ ಒಗಟು ಯುದ್ಧ

01:00 AM Dec 06, 2023 | Team Udayavani |

ಲಂಡನಿನ ವಿಜ್ಞಾನ ಪ್ರದರ್ಶನಾಲಯ (London Science Museum) ದಲ್ಲಿ ಅತ್ಯಂತ ರೋಚಕವಾಗಿ ಈ ಜಗತ್ತು ಉದಿಸಿ ಬಂದ ಬಗೆಗೆ ವಿವರಣೆ ನೀಡಲಾಗಿತ್ತು. ಅದೇ ರೀತಿ ಮುಂದೊದು ದಿನ ಇದು “ಇಲ್ಲ’ವಾಗುವ ಸಾಧ್ಯತೆಗಳ ಕಾರಣವನ್ನೂ ಅತ್ಯಂತ ನಾಜೂಕಿನಲ್ಲಿ, ಪ್ರಾಯೋಗಿಕವಾಗಿ ಪೋಣಿಸಿದ ಬಗೆಗೆ ಅಚ್ಚರಿ ಯಾಯಿತು. ಭೂಮಿಯೇ ಅಮೂಲಾಗ್ರವಾಗಿ ಕಂಪಿಸುವಿಕೆ, ಭೂಗರ್ಭದಿಂದ ಅಗ್ನಿ ಜ್ವಾಲಾಮುಖೀ ಯಾಗಿ ಹೊಮ್ಮುವ ಸಾಧ್ಯತೆ, ಮೂರನೇ ಎರಡಂಶದಷ್ಟು ತುಂಬಿ ನಿಂತ ಸಾಗರವೇ ಭೂಭಾಗವನ್ನು ಆಪೋಶನ ತೆಗೆದುಕೊಳ್ಳುವ ಸಾಧ್ಯತೆ, ಅದೇ ರೀತಿ ಚಂಡಮಾರುತ ಅಬ್ಬರಕ್ಕೆ ಮನುಕುಲ ವಿನಾಶದ ಸಾಧ್ಯತೆ, ಮಹಾ ಪ್ರಳಯ- ಹೀಗೆ ಪ್ರಕೃತಿಯ ವಿಕೋಪ ಅಥವಾ ನಿಸರ್ಗದ ಮುನಿಸುಗಳ ಬಹುವಿಧ ಸಾಧ್ಯತೆಗಳ ಸರಣಿಯೇ ಪ್ರಾತ್ಯಕ್ಷಿಕೆಯ ರೂಪದಲ್ಲಿ ಕಂಡು ಬಂತು. ಅದೇ ರೀತಿ ಮಾನವ ನಿರ್ಮಿತ ದುರಂತಗಳಲ್ಲಿ ಯುದ್ಧದ ಮೂಲಕವೇ ಈ ಭೂಮಿಯ ಅವಸಾನವಾಗುವ ಸಾಧ್ಯತೆ ಇದೆ ಎಂಬುದಾಗಿ ಬೆಚ್ಚಿ ಬೀಳಿಸುವ ವಿವರಣೆ ಕಂಡುಬಂತು.

Advertisement

ಯುದ್ಧ ಒಂದು, ಮಾನವ ಜನಾಂಗದ ಆದಿಯಿಂದಲೂ ಬಗೆಹರಿಸಲಾಗದ ಒಗಟು, ಪರಿಹರಿಸಲಾಗದ ಪಿಡುಗು, ಸರ್ವನಾಶದ ದುರಂತ. ಬೆವರು, ರಕ್ತ ಹಾಗೂ ಪ್ರಾಣ ಹರಣದ ಘೋರ ಸಾಧನ, ರಚನಾತ್ಮಕತೆಗಲ್ಲ ಬದಲಾಗಿ ವಿನಾಶಕ್ಕೆ ವಿಜ್ಞಾನದ ರಹದಾರಿ- ಹೀಗೆ ಹತ್ತಾರು ವ್ಯಾಖ್ಯಾನಗಳಿವೆ. “ಎಲ್ಲ ಯುದ್ಧಗಳೂ ಮೊದಲು ಮನುಜನ ಮನದಲ್ಲೇ ನಡೆದು ಹೋಗುತ್ತದೆ; (All wars are fought in the minds of Men) ವಾಸ್ತವಿಕ ಯುದ್ಧ ಆಮೇಲೆಯೇ ಘಟಿಸುತ್ತದೆ” ಎಂಬ ಉಕ್ತಿಯೂ ಚಾಲ್ತಿಯಲ್ಲಿದೆ. ಜರ್ಮನಿಯ ವಾನ್‌ ಬೆನ್‌ ಹಾರ್ಡಿ ಎಂಬಾತ “ಯುದ್ಧ ಮನುಷ್ಯನ ಸಹಜ ಪ್ರವೃತ್ತಿಯ, ದೈಹಿಕ ಪ್ರದರ್ಶನದ ಮೂರ್ತ ಸ್ವರೂಪ” ಎಂದಿದ್ದಾನೆ. ಮಾನವ ಇತಿಹಾಸದ ಮೊದಲ ಪುಟದಿಂದಲೇ “ಯುದ್ಧ ನಿತ್ಯ ಸಂಗಾತಿ” ಎಂಬುದಾಗಿ ವಿಶ್ಲೇಷಿಸಲಾಗಿದೆ. ವಿಶ್ವದ ಯಾವುದೇ ಮೂಲೆಯೂ, ಇತಿಹಾಸದ ಸಂಪುಟವೂ ರಕ್ತರಂಜಿತ ವಾಗದೆ ಉಳಿದಿಲ್ಲ ಎಂಬುದು ಕಟುಸತ್ಯ. ಯುದ್ಧಗಳು ಒಂದಲ್ಲ ಹಲವು ವಿಧಗಳ ವಿಶ್ವರೂಪ-ಪ್ರಾದೇಶಿಕ ಯುದ್ಧ, ಜಾಗತಿಕ ಯುದ್ಧ, ಗೆರಿಲ್ಲಾ ಯುದ್ಧ, ಪ್ರಚಾರ ಯುದ್ಧ(Propaganda War) , ಛದ್ಮ ಯುದ್ಧ (War in Disguise) ಅಥವಾ ವೈರಿ ನೆಲೆಯಲ್ಲಿ ಕ್ಷೋಭೆ ತಂದೊಡ್ಡುವ ಕೃತ್ಯ, ಭಯೋತ್ಪಾದಕತೆ – ಹೀಗೆ ಬಹುವಿಧದಲ್ಲಿ ಯುದ್ಧ ಸ್ಫೋಟಿಸಬಲ್ಲುದು.

ಯುದ್ಧವನ್ನು ಈ ತನಕವೂ ಅಂತರಾಷ್ಟ್ರೀಯ ಕಾನೂನು ಕಾನೂನು ಬಾಹಿರ ಎಂದು ನಿಷೇಧಿಸಿಯೇ ಇಲ್ಲ! ಏಕೆಂದರೆ ಆ ರೀತಿ ವಿರೋಧಿಸುವ ಅಥವಾ ನಿಷೇಧಿಸುವ ಸಾಹಸ ನಿಷ್ಪ್ರಯೋಜಕ ಎಂದೇ ಜಾಗತಿಕ ಕುಟುಂಬ ಕೈ ಚೆಲ್ಲಿದೆ. ಏಕೆಂದರೆ, ಪ್ರತಿಯೊಂದು ರಾಷ್ಟ್ರಕ್ಕೂ ತಂತಮ್ಮ ಸಾರ್ವಭೌಮತೆಯನ್ನು  ಕಾಯ್ದುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಮಾತ್ರವಲ್ಲ, ಪ್ರಾದೇಶಿಕ ಸಮಗ್ರತೆಯಿಂದ ಹಿಡಿದು ದೇಶದ ಎಲ್ಲ ಹಿತಾಸಕ್ತಿಗಳನ್ನು ರಕ್ಷಿಸಲೇಬೇಕಾದ ಕರ್ತವ್ಯವೂ ಹೌದು. ಹಾಗಾಗಿ “ಯಾರು ಯಾರಿಗೂ ಶಾಶ್ವತ ಮಿತ್ರರೂ ಎನಿಸುವುದಿಲ್ಲ; ಶಾಶ್ವತ ಶತ್ರಗಳೂ ಎನಿಸುವುದಿಲ್ಲ”. ದೇಶಕ್ಕೆ ಆಪತ್ತು, ವಿದೇಶಿ ಆಕ್ರಮಣ ಒದಗಿ ಬಂದಾಗ ತಂತಮ್ಮ ರಕ್ಷಣ ಪಡೆಗಳನ್ನು ಪ್ರತಿಯೊಂದು ರಾಷ್ಟ್ರವೂ ಹೊಂದಲೇ ಬೇಕಾಗಿದೆ. ತತ್ಪರಿಣಾಮವಾಗಿ, ಯಾವುದೇ ರಾಷ್ಟ್ರ ಅಪಾರ ವೆಚ್ಚವನ್ನು ಮಿಲಿಟರಿ ವ್ಯವಸ್ಥೆಗೆ ವ್ಯಯಿಸುವ ಆವಶ್ಯಕತೆ ಇದ್ದೇ ಇದೆ. ಏಕೆಂದರೆ ನಾವು ಅಪನಂಬಿಕೆಯ ಪರಸ್ಪರ ಸುಳಿ ಹೊಂದಿದ ಭುವಿಯಲ್ಲಿ ವಾಸಿಸುತ್ತಿದ್ದೇವೆ. “ನಾವು ಶಾಂತಿಪ್ರಿಯರು; ಹಾಗಾಗಿ ನಮಗೆ ಭೂಸೈನ್ಯ, ನೌಕಾ ಪಡೆ, ವಾಯುಬಲ, ಶಸ್ತ್ರಾಸ್ತ್ರಗಳು ಯಾವುದೂ ಬೇಡ’ ಎಂದು ಯುದ್ಧ ಸನ್ಯಾಸವನ್ನು ಎಂದೆಂದಿಗೂ ಯಾವುದೇ ರಾಷ್ಟ್ರ ಮಾಡುವಂತೆಯೇ ಇಲ್ಲ!

ಹೀಗಾಗಿ, ಶಾಂತಿ ಮತ್ತು ಯುದ್ಧದ ನೆರಳುಬೆಳಕಿನ ಆಟದಲ್ಲೇ ಸಮಗ್ರ ಪ್ರಪಂಚ ಕಳೆದ ನಿನ್ನೆಗಳ ಉದ್ದಕ್ಕೂ ಸಾಗಿ ಬಂದಿದೆ; ಬರುವ ನಾಳೆಗಳಲ್ಲಿಯೂ “ಒಂದು ಭೂಮಿ; ಒಂದು ಕುಟುಂಬ ಹಾಗೂ ಒಂದು ಭವಿಷ್ಯ’ದ ಸ್ಲೋಗನ್‌ ಒಂದು ಕಾಲದ “ಹಿಂದೀ- ಚೀನೀ ಭಾಯಿ ಭಾಯಿ’ಯಂತೆ ಸಮುದ್ರದ ಮರಳಿನ ಮೇಲಿನ ಬರಹದಂತೆ ಉಳಿದೀತು! ಆಪತ್ಕಾಲದಲ್ಲಿ “ನಮ್ಮ ತಲೆಗೆ ನಮ್ಮದೇ ಕೈ; ನಮ್ಮ ಕಾಲ ಮೇಲೆಯೇ ನಾವು ನಿಲ್ಲಬೇಕು’ ಎಂಬ ಸಾರ್ವಕಾಲಿಕ ಸತ್ಯವೇ ಎಲ್ಲ ನಾಡಿನ ಗೋಡೆ ಬರಹ; ಗಡಿ ಬರಹ ಕೂಡ. ರಾಬರ್ಟ್‌ ಪ್ರಾಸ್ಟ್‌ ಎಂಬ ನೊಬೆಲ್‌ ಪುರಸ್ಕೃತ ಅಮೆರಿಕನ್‌ ಕವಿ ತನ್ನ ‘Mending Wall’ ಕವನದಲ್ಲಿ “ನಾವೇಕೆ ಈ ಭೂಮಿಯನ್ನು ತುಂಡರಿಸಿ ಗೋಡೆ ರಚಿಸುತ್ತಾ ಸಾಗುತ್ತಿದ್ದೇವೆ’ ಎಂಬುದಾಗಿ ಮಾರ್ಮಿಕವಾಗಿ “ವಿಶ್ವಶಾಂತಿಯ ಸಂದೇಶ’ ನೀಡುತ್ತಾನೆ. ಆದರೆ ಎಲ್ಲ ಶಾಂತಿ ಮಂತ್ರಗಳು ಯುದ್ಧದ ತೋಫ‌ುಗಳ ಅಲ್ಲ, ಅಣುಬಾಂಬಿನ ಮಹಾಸ್ಫೋಟದಲ್ಲಿ ಉಡುಗಿ ಹೋಗುತ್ತದೆ.

ಹಾಗಾದರೆ ಶಾಂತಿ ಸಂಧಾನದ ಮೇಜು, ಪರಸ್ಪರ ವಿಚಾರ ವಿನಿಮಯದ ಜಾಗತಿಕ ವೇದಿಕೆ ಇವೆಲ್ಲವೂ ನಿಷ್ಪ್ರಯೋಜಕವೇ? ಒಂದನೇ ವಿಶ್ವ ಸಮರದ ಬಳಿಕ ಶುಭಾರಂಭಗೊಡ ವುಡ್ರೋ ವಿಲ್ಸನ್‌ನ 14 ಸೂತ್ರಗಳನ್ನು ಹೊತ್ತು ಮೆರೆದ 1919ರ ‘League of Nations’ ಮುಂದೆ 1939ರ ದ್ವಿತೀಯ ಮಹಾಸಮರದ ಸಿಡಿತಕ್ಕೆ ‘League of Notions’; ಆಗಿ ಚರಿತ್ರೆಯ ಪುಟಕ್ಕೆ ಸಂದು ಹೋಯಿತೇಕೆ? ಅದೇ ರೀತಿ ಇದೀಗ 1945ರ ಬಳಿಕ ಭದ್ರ, ವಿಶಾಲ ಪೀಠದಲ್ಲಿ ಅರಳಿದ ವಿಶ್ವಸಂಸ್ಥೆಗೆ ಬಾನೆತ್ತರಕ್ಕೆ ಏರುತ್ತಲೇ ಇರುವ ರಷ್ಯಾ- ಉಕ್ರೇನ್‌, ಇಸ್ರೇಲ್‌-ಹಮಾಸ್‌ಗಳ ಸಮರ ಧೂಮಕ್ಕೆ ತಂಪು ಮಳೆಗರೆಯಲು ಸಾಧ್ಯವಾಗುತ್ತಿಲ್ಲವೇಕೆ? ಒಂದು ತೆರದಲ್ಲಿ ವಿಶ್ವಸಂಸ್ಥೆ ಅದರಲ್ಲೂ ಭದ್ರತಾ ಸಮಿತಿ ಹಾಗೂ ಅದರ 5 ಶಾಶ್ವತ ರಾಷ್ಟ್ರಗಳ ವಿಟೋ ಚಲಾಯಿಸುವ ಅಧಿಕಾರ ವಿಶ್ವಸಂಸ್ಥೆಯನ್ನೇ “ಹಲ್ಲಿಲ್ಲದ” ಸಂಸ್ಥೆಯಾಗಿಸಿದೆ! ಜಾಗತಿಕ ಕುಟುಂಬದ ಒಂದು ವರ್ಷದ ಮಿಲಿಟರಿ ಬಜೆಟನ್ನು ಸ್ಥಗಿತಗೊಳಿಸಿದರೆ, ಸಮಗ್ರ ವಿಶ್ವದ ಜನತೆಗೆ ಧರ್ಮಾರ್ಥವಾಗಿ ಹತ್ತು ವರ್ಷ ಆಹಾರ ಸರಬರಾಜು ಮಾಡಬಹುದು ಎಂದು ಅಂದಾಜಿಸಲಾಗಿದೆ. ಆದರೆ ಸ್ವರಕ್ಷಣ ಕಾರ್ಯ ಸ್ಥಗಿತಗೊಳಿಸಲು ಯಾವುದೇ ರಾಷ್ಟ್ರ ಸಿದ್ಧವಾಗಿಲ್ಲ ತಾನೇ?

Advertisement

ಈ ಎಲ್ಲದರ ಮಧ್ಯೆ ಮೂಲ ಪ್ರಶ್ನೆಯೊಂದು ಹಾಗೆಯೇ ಉಳಿದುಕೊಳ್ಳುತ್ತದೆ. ಸಮರ ಯಾವತ್ತೂ ಜೀವ ಅಪಹರಿಸುವ, ರಕ್ತ ಚೆಲ್ಲುವ ದಾರುಣ ಪ್ರಸಂಗಗಳೇ ಆದರೂ ಅದರ ಘೋರ ಪರಿಣಾಮಗಳ ಅರಿವು ಹೊಂದಿಯೂ ಯುದ್ಧ ಸರಣಿ ಇತಿಹಾಸದ ಉದ್ದಕ್ಕೂ ಏಕೆ ಸರಿದು ಬಂತು? ಎಲ್ಲ ಸಂಧಾನದ ಮೇಜುಗಳೂ, ಶಾಂತಿಯ ಧಾರೆಗಳೂ ಬರಿದಾದಾಗ ಮಾತ್ರ ಸಂಗ್ರಾಮದ ಕಹಳೆ ಅನಿವಾರ್ಯ. ಇದು ಅತ್ಯಂತ ಪ್ರಾಚೀನ ಭಾರತದ ಪರಂಪರೆಯೂ ಆಗಿತ್ತು ಎಂಬುದನ್ನು ಪುರಾಣ ಹಾಗೂ ಇತಿಹಾಸ ಶ್ರುತ ಪಡಿಸುತ್ತವೆ. ಪರಸ್ತ್ರೀಯನ್ನು ಅಪಹರಿಸಿದವರಿಗೆ ಮರಣ ದಂಡನೆಯೇ ಶಿಕ್ಷೆ ಎನ್ನುವುದನ್ನು ವಾಲಿ ಹಾಗೂ ರಾವಣ ಸಂಹಾರದಲ್ಲಿ ರಾಮಾಯಣದ ಮೂಲಕ ವಾಲ್ಮೀಕಿ ಮಹರ್ಷಿಗಳು ಅಭಿವ್ಯಕ್ತಗೊಳಿಸುತ್ತಾರೆ. “ಪಂಚ ಗ್ರಾಮಗಳನ್ನೂ ನೀಡುವುದಿಲ್ಲ” ಎಂಬ ಕೌರವನ ಛಲಕ್ಕೆ, ಪ್ರತಿಯಾಗಿ ಕುರುಕ್ಷೇತ್ರದ ರಣವೀಳ್ಯ, ಸಿದ್ಧವಾದುದನ್ನೂ ಮಹಾಭಾರತದಲ್ಲಿ ವೇದವ್ಯಾಸರು ಚಿತ್ರಿಸುತ್ತಾರೆ. ಹೀಗೆ ಯುದ್ಧದ ಮಹತ್ವ ಪೌರಾಣಿಕ ಕಾಲಘಟ್ಟದಿಂದ ಕಾರ್ಗಿಲ್‌ ಕದನದ ವರೆಗೆ “ತನ್ನತನವನ್ನು ಉಳಿಸಲು, ಧರ್ಮ, ಶಾಂತಿ, ಸುಭಿಕ್ಷೆ ನೆಲೆಸಲು” ಇರುವ ಏಕೈಕ ಹಾಗೂ ಕೊನೆಯ ಸಾಧನ ಎಂಬುದು ಋಜು ಮಾತು ಎನಿಸಿದೆ. ಆದರೂ ಓಲಿವ್‌ ರೆಂಬೆ ಹೊತ್ತ ಪಾರಿವಾಳವನ್ನೂ ಸ್ವತ್ಛಂದ ಆಗಸದಲ್ಲಿ ಹಾರಿಸಲು ಯತ್ನಿಸಬೇಕಾದುದು ವಿಶ್ವಕುಟುಂಬದ ಸಾಮೂಹಿಕ ಕರ್ತವ್ಯ.

ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next