ಬೆಂಗಳೂರು: ಡ್ರಗ್ ಮಾಫಿಯಾ ವಿರುದ್ಧದ ಸಮರ ನಿರಂತರವಾಗಿರಬೇಕು. ಬುಡಸಮೇತ ನಿರ್ಮೂಲನೆಗೆ ಪೊಲೀಸ್ ಅಧಿಕಾರಿಗಳು ಶ್ರಮಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಟನ್‌ಗಟ್ಟಲೆ ಮಾದಕ ದ್ರವ್ಯ ಜಪ್ತಿಯಾಗಿರುವುದು ನೋಡಿದರೆ ಆತಂಕವಾಗುತ್ತದೆ. ಇದು ಸಮಾಜಕ್ಕೆ ತಲುಪಿದ್ದರೆ ಏನೆಲ್ಲ ಅಪಾಯಕಾರಿ ಎಂಬುದು ಮನದಟ್ಟಾಗಿದೆ. ಹೀಗಾಗಿ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದವರು ಹಿರಿಯ ಅಧಿಕಾರಿಗಳ ಸಭೆಯ ಬಳಿಕ ತಿಳಿಸಿದರು.
ಪೊಲೀಸ್ ಇಲಾಖೆ ಮಲಗಬಾರದು. ದಿನದ 24 ಗಂಟೆ ಕೆಲಸ ಮಾಡಬೇಕು. ಸಾರ್ವಜನಿಕರು ನೆಮ್ಮದಿಯಾಗಿ ಮಲಗುವಂತಾಗಲು ಪೊಲೀಸರ ಶ್ರಮ ಹೆಚ್ಚಾಗಿದೆ. ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ಮಾಡುವ ನೂರಾರು ಪೊಲೀಸ್ ಅಧಿಕಾರಿಗಳು ನಮ್ಮಲ್ಲಿ ಇದ್ದಾರೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ತಗ್ಗಿದ ಕೋವಿಡ್ : ಇಂದು 1186 ಪ್ರಕರಣ ಪತ್ತೆ| 24 ಜನರ ಸಾವು
ಇಲಾಖೆಯಲ್ಲಿ ಸಿಬಂದಿ ಕೊರತೆ ನೀಗಿಸಲಾಗುವುದು. 16 ಸಾವಿರ ಪೇದೆಗಳ ನೇಮಕಕ್ಕೆ ತೀರ್ಮಾನವಾಗಿದ್ದು ಈಗಾಗಲೇ ನಾಲ್ಕು ಸಾವಿರ ಪೇದೆಗಳ ನೇಮಕವಾಗಿದೆ. ಇನ್‌ಸ್ಪೆಕ್ಟರ್ ಹುದ್ದೆ ಸಹ ಭರ್ತಿ ಮಾಡಲಾಗುವುದು ಎಂದು ಹೇಳಿದರು.