Advertisement

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

09:53 PM Nov 05, 2024 | Esha Prasanna |

ವಿಜಯಪುರ: ರಾಜ್ಯದಲ್ಲಿ ವಕ್ಫ್ ಆಸ್ತಿ ಕುರಿತು ಅನ್ವರ್‌ ಮಾಣಿಪ್ಪಾಡಿ ವರದಿ ಪ್ರಕಾರ ಕಾಂಗ್ರೆಸ್‌ ನಾಯಕರು ಸುಮಾರು 2.70 ಲಕ್ಷ ಕೋಟಿ ಮೌಲ್ಯದಷ್ಟು ವಕ್ಫ್ ಆಸ್ತಿ ಕಬಳಿಸಿದ್ದಾರೆ. ಈ ವರದಿಯಲ್ಲಿ ಈಗಿನ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಖಮರುಲ್‌ ಇಸ್ಲಾಂ, ರೆಹಮಾನ್‌ ಖಾನ್‌, ಸಿ.ಎಂ.ಇಬ್ರಾಹಿಂ, ಬೆಂಗಳೂರಿನ ಶಾಸಕ ಹ್ಯಾರಿಸ್‌ ಹೆಸರುಗಳಿವೆ. ವಕ್ಫ್ ನಿಂದ ಯಾವುದೇ ಮುಸ್ಲಿಮರಿಗೆ ಅನುಕೂಲವಾಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Advertisement

ಸೋಮವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯ 2ನೇ ದಿನವಾದ ಮಂಗಳವಾರ ಮಾತನಾಡಿ, ವಕ್ಫ್ ಆಸ್ತಿ ರಕ್ಷಣೆ ಮಾಡಿ ಕ್ರೋಡೀಕರಣ ಮಾಡುತ್ತೇವೆಂದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹಾಕಿದ್ದು ನಿಜ. ಇದರರ್ಥ ಬೇಕಾಬಿಟ್ಟಿಯಾಗಿ ಕಾಂಗ್ರೆಸ್‌ ನಾಯಕರು ನುಂಗಿರುವ ಆಸ್ತಿಯ ವಾಪಸ್‌ ಪಡೆದು ರಕ್ಷಣೆ ಮಾಡುವುದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ವಕ್ಫ್  ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ಅದನ್ನು ತಡೆಯಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಈ ಕಾಯ್ದೆಗೆ ಅಂಗೀಕಾರ ಪಡೆಯುವುದರೊಳಗೆ ವಕ್ಫ್ ಸಚಿವ ಜಮೀರ್‌ ಅಹ್ಮದ್‌ ರಾತ್ರೋರಾತ್ರಿ ವಿಜಯಪುರ, ಬೀದರ, ಕಲಬುರಗಿ, ಯಾದಗಿರಿಗೆ ಧಾವಿಸಿ ರಾಜ್ಯದಲ್ಲಿ ಲಕ್ಷಾಂತರ ಎಕರೆ ವಕ್ಫ್ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದರು.

ಯಾವುದೇ ನೋಟಿಸ್‌ ಕೊಡದೇ ರೈತರ ಜಮೀನು, ಮಠಗಳು, ಸಂಘ-ಸಂಸ್ಥೆಗಳ ದಾಖಲೆಗಳಲ್ಲಿ ವಕ್ಫ್ ಎಂದು ಸೇರಿಸುತ್ತಿದ್ದಾರೆ. ಹೀಗಾಗಿ ಜನರು ಹೊರಗಡೆ ಬಂದು ಹೋರಾಟ ಮಾಡಿ ನಮ್ಮ ದೇಶ, ಧರ್ಮ, ಭೂಮಿ ರಕ್ಷಣೆ ಮಾಡಿಕೊಳ್ಳಬೇಕು. ವಕ್ಫ್ ಆಸ್ತಿ ಒತ್ತುವರಿಯಾಗಿದ್ದನ್ನು ತೆರವು ಮಾಡಿ ಮೂಲ ಮಾಲೀಕರಿಗೆ ನೀಡಬೇಕು. ಎಲ್ಲ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡಬೇಕು. ವಕ್ಫ್ ಆಸ್ತಿ ರಾಷ್ಟ್ರೀಕರಣವೇ ಎಲ್ಲ ಸಮಸ್ಯೆಗೂ ಪರಿಹಾರ ಎಂದರು.

ಧರಣಿ ಸ್ಥಳಕ್ಕೆ ಕೆ.ಎಸ್‌.ಈಶ್ವರಪ್ಪ ಭೇಟಿ:
ವಕ್ಫ್‌ ನೋಟಿಸ್‌ ವಿರುದ್ಧದ  2ನೇ ದಿನವಾದ ಮಂಗಳವಾರದಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಭೇಟಿ ನೀಡಿ ಅಹೋರಾತ್ರಿ ಧರಣಿ ಬೆಂಬಲಿಸಿದರು.  ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ರೊಂದಿಗೆ ಕೆಲಹೊತ್ತು ಸಮಾಲೋಚಿಸಿದರು.

ಹೆಬ್ಬಾಳ್ಕರ್ ರಾಜೀನಾಮೆ ನೀಡಲಿ; ಆಪ್ತ ಸಹಾಯಕನ ವಶಕ್ಕೆ ಪಡೆಯಲಿ:

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ  ಸಹಾಯಕ ಸೋಮು  ನಿರಂತರ ಮಾನಸಿಕ ಕಿರುಕುಳ ನೀಡಿ ಹಿಂಸೆ ನೀಡಿದ ಪರಿಣಾಮ ಬೆಳಗಾವಿಯಲ್ಲಿ ಸರ್ಕಾರಿ ನೌಕರರೊಬ್ಬರು ತಹಶೀಲ್ದಾರ್‌ ಕಚೇರಿಯಲ್ಲಿ  ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕಾಂಗ್ರೆಸ್‌ ಸರ್ಕಾರದಲ್ಲಿ ಇದು ಮೊದಲನೇ ಆತ್ಮಹತ್ಯೆ ಏನಲ್ಲ. ವಾಲ್ಮೀಕಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರನ್ ಕೂಡ ಸಚಿವ ನಾಗೇಂದ್ರ ಮಾನಸಿಕ ಹಿಂಸೆ ತಾಳಲಾಗದೆ ಆತ್ಮಹತ್ಯೆಗೆ ಶರಣಾಗಿದ್ದರು. ಸಚಿವೆ ಹೆಬ್ಬಾಳ್ಕರ್ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಆಪ್ತ ಸಹಾಯಕ ಸೋಮುರನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸಿದರೆ ಮಾತ್ರ ಸತ್ಯ ಹೊರಬರಲಿದೆ ಎಂದು ಶಾಸಕ ಯತ್ನಾಳ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next