ಬೆಂಗಳೂರು: ಅಲ್ಪಸಂಖ್ಯಾತ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಹೈಕೋರ್ಟ್ ಸೂಚನೆ ನೀಡಿರುವುದನ್ನು ಸ್ವಾಗತಿಸಿರುವ ಬಿಜೆಪಿ, ಸರ್ಕಾರ ಕೂಡಲೇ ವಿಶೇಷ ಅಧಿವೇಶನ ಕರೆದು ವರದಿ ಮಂಡಿಸಬೇಕೆಂದು ಒತ್ತಾಯಿಸಿ ಗುರುವಾರ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲು ಮುಂದಾಗಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಅನ್ವರ್ ಮಾಣಿಪ್ಪಾಡಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದಾಗ ಸುಮಾರು 2.30 ಲಕ್ಷ ಕೋಟಿ ರೂ.ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ನೀಡಿದ್ದರು. ಇಷ್ಟಾದರೂ ಸರ್ಕಾರ ಸದನದಲ್ಲಿ ವರದಿ ಮಂಡಿಸಿಲ್ಲ. ಇದೀಗ ಹೈಕೋರ್ಟ್, ಸದನದಲ್ಲಿ ವರದಿ ಮಂಡಿಸಲು ನಾಲ್ಕು ವಾರದ ಗಡುವು ನೀಡಿದ್ದು, ಇನ್ನಾದರೂ ವಿಶೇಷ ಅಧಿವೇಶನ ಕರೆದು ವರದಿ ಮಂಡಿಸಬೇಕು ಎಂದು ಒತ್ತಾಯಿಸಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿದ್ದು, ಅಲ್ಪಸಂಖ್ಯಾತರ ಮತಗಳನ್ನು ಪಡೆದು ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅಲ್ಪಸಂಖ್ಯಾತರ ಅಭಿವೃದಿಟಛಿಗೆ ಶ್ರಮಿಸುವ ಬದಟಛಿತೆಯಿದ್ದರೆ ವರದಿಯನ್ನು ತಕ್ಷಣವೇ ಸದನದಲ್ಲಿ ಮಂಡಿಸಲಿ. ಹೈಕೋರ್ಟ್ ಆದೇಶದ ನಂತರವೂ ಸರ್ಕಾರ ಮೇಲ್ಮನವಿ ಸಲ್ಲಿಸಲು ಚಿಂತಿಸಿದೆ ಎಂಬ ಮಾಹಿತಿಯಿದ್ದು, ಇದು ಸರಿಯಲ್ಲ. ವಿಶೇಷ ಅಧಿವೇಶನ ಕರೆದು ವರದಿ ಮಂಡಿಸುವಂತೆ ಒತ್ತಾಯಿಸಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ನಗರದ ಬಿಜೆಪಿ ಶಾಸಕರು ಪಾಲ್ಗೊಳ್ಳಲಿದ್ದು, ರಾಜ್ಯಾಧ್ಯಕ್ಷರು ಪಾಲ್ಗೊಳ್ಳಬೇಕೆಂದು ಕೋರಲಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ವಕ್ಫ್ ಮಂಡಳಿ ಆಸ್ತಿ ಕಬಳಿಕೆಗೆ ಸಂಬಂಧಪಟ್ಟಂತೆ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ವರದಿ ಸಲ್ಲಿಸಿದಾಗ ಅವರು ಲೋಕಾಯಕ್ತ ತನಿಖೆಗೆ ವಹಿಸಿದರು. ಬಳಿಕ, ಅಂದಿನ ಬಿಜೆಪಿ ಸರ್ಕಾರವು ಆರು ವಿಧೇಯಕ ಮಂಡಿಸಿ ಜಾರಿಗೊಳಿಸಿತು. ಇಷ್ಟಾದರೂ ವರದಿ ಮಂಡನೆ ಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಕ್ಫ್ ಆಸ್ತಿಯಲ್ಲಿ ಮೂರು ವೈದ್ಯಕೀಯ ಕಾಲೇಜು, 16 ಎಂಜಿನಿಯರಿಂಗ್ ಕಾಲೇಜು, ಹಲವು ವಸತಿಶಾಲೆ, ತಾರಾ ಹೋಟೆಲ್ ಗಳಿದ್ದು ಆಯ್ದ ಮಂದಿ ಕೋಟ್ಯಂತರ ರೂ.ಹಣ ಗಳಿಸುತ್ತಿದ್ದಾರೆ. ವಕ್ಫ್ ಆಸ್ತಿಗಳೆಲ್ಲಾ ಮಂಡಳಿಗೆ ವಾಪಸ್ ಬರುವವರೆಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಲೆಹರ್‌ಸಿಂಗ್, ದೇವೇಗೌಡ ಉಪಸ್ಥಿತರಿದ್ದರು.