Advertisement

ಮನೆಗಳ ತೆರವಿಗೆ ವಕ್ಫ್ ನೋಟಿಸ್‌-ಆಕ್ರೋಶ

06:09 PM Nov 26, 2021 | Team Udayavani |

ಬೆಳಗಾವಿ: ನಗರದ ಹೊರವಲಯದ ಆನಂದವಾಡಿಯ 40 ಮನೆಗಳನ್ನು ತೆರವು ಮಾಡಬೇಕೆಂಬ ವಕ್ಫ್ ಮಂಡಳಿ ಆದೇಶ ಹೊರಡಿಸಿದ್ದನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಸುಮಾರು 100 ವರ್ಷಗಳಿಂದ ನಿರ್ಮಾಣಗೊಂಡಿರುವ 40 ಮನೆಗಳನ್ನು ತೆರವುಗೊಳಿಸಲು ಆದೇಶ ಬಂದಿರುವುದು ಖಂಡನಾರ್ಹ. ಮನೆಗಳಿಗೆ ತೆರಿಗೆ ಪಾವತಿಸುತ್ತ ಬರಲಾಗಿದೆ. ಈಗ ಏಕಾಏಕಿ ಮನೆಗಳನ್ನು ತೆರವುಗೊಳಿಸಿ ಎಂದರೆ ಹೇಗೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಆನಂದವಾಡಿಯ ಜಾಗಕ್ಕಾಗಿ ಈ ಎಲ್ಲ ಮನೆಗಳನ್ನು ತೆರವುಗೊಳಿಸುವಂತೆ ವಕ್ಫ್ ಮಂಡಳಿ ಆದೇಶ ಹೊರಡಿಸಿದ್ದಕ್ಕೆ ಪೊಲೀಸರು ಸಂಬಂಧಿಸಿದ ಸ್ಥಳಿಯ ನಿವಾಸಿಗಳಿಗೆ ನೋಟಿಸ್‌ ನೀಡಲು ಗುರುವಾರ ಬಂದಿದ್ದಾರೆ.

ನೋಟಿಸ್‌ ನೀಡುತ್ತಿದ್ದಂತೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಜನರನ್ನು ಸಮಾಧಾನಪಡಿಸಲು ಯತ್ನಿಸಿದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿಮಾಣವಾಗಿತ್ತು.

ಈಗ ಏಕಾಏಕಿ ನೋಟಿಸ್‌ ನೀಡಿ ಮನೆಗಳನ್ನು ತೆರವುಗೊಳಿಸಿ ಎಂದು ಹೇಳಿದರೆ ನಾವು ಬದುಕುವುದಾದರೂ ಹೇಗೆ. ಇಂಥ ಅವೈಜ್ಞಾನಿಕ ಹಾಗೂ ರಾಜಕೀಯ ಪ್ರೇರಿತ ನೋಟಿಸ್‌ಗಳಿಂದಾಗಿ ನಾವು ಮನೆ ಕಳೆದುಕೊಂಡು ಬೀದಿಗೆ ಬರಬೇಕಾ? ಯಾವುದೇ ಕಾರಣಕ್ಕೂ ನಮ್ಮ ಮನೆಗಳನ್ನು ಬಿಟ್ಟು ಕೊಡುವುದಿಲ್ಲ. ಸರ್ಕಾರಕ್ಕೆ ನೀರಿನ ತೆರಿಗೆ, ಮನೆ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಪ್ರತಿ ತಿಂಗಳು ತುಂಬುತ್ತಿದ್ದೇವೆ. ಈಗ ಮನೆಗಳನ್ನು ತೆರವುಗೊಳಿಸಿ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಪೊಲೀಸರ ವಿರುದ್ಧ ವಾಗ್ಧಾಳಿ ನಡೆಸಿದರು.

ಅನೇಕ ವರ್ಷಗಳಿಂದ ನಾವು ಆನಂದವಾಡಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದೇವೆ. ಈ ಜಾಗ ನಮಗೆ ಸೇರಿದೆ. ಒತ್ತುವರಿ ಜಾಗ ಎಂದು ಹೇಳಿ ವಕ್ಫ್  ಮಂಡಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದೆ. ಯಾವುದೇ ಕಾರಣಕ್ಕೂ ನಮ್ಮ ಜಾಗ ಬಿಟ್ಟು ಕೊಡುವುದಿಲ್ಲ. ಇನ್ನು ಮುಂದೆ ನಾವು ನೋಟಿಸ್‌ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Advertisement

ಸ್ಥಳಕ್ಕೆ ಟಿಳಕವಾಡಿ ಇನ್ಸಪೆಕ್ಟರ್‌ ರಾಘವೇಂದ್ರ ಹವಾಲ್ದಾರ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಇದಕ್ಕೆ ಒಪ್ಪದ ಸ್ಥಳೀಯರು ಪೊಲೀಸರ ವಿರುದ್ಧವೇ ವಾಗ್ಧಾಳಿ ನಡೆಸಿದರು. ಆಗ ಇನ್ಸಪೆಕ್ಟರ್‌ ಹವಾಲ್ದಾರ, ವಕ್ಫ್ ಮಂಡಳಿಯ ಆದೇಶದ ನೋಟಿಸ್‌ ನಿಮಗೆ ಕೊಡಲು ಬಂದಿದ್ದೇವೆ ಹೊರತು ತೆರವುಗೊಳಿಸಲು ಬಂದಿಲ್ಲ. ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು. ನಂತರ ಮಹಾನಗರ ಪಾಲಿಕೆ ಸದಸ್ಯ ನಿತಿನ್‌
ಜಾಧವ, ಶ್ರೀರಾಮಸೇನೆ ಹಿಂದೂಸ್ಥಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ, ಶುಭಂ ಶೇಳಕೆ ಸೇರಿದಂತೆ ವಿವಿಧ ಮುಖಂಡರೊಂದಿಗೆ ಪೊಲೀಸರು ಮಾತುಕತೆ ನಡೆಸಿದರು.

ವಕ್ಫ್ ನೋಟಿಸ್‌ಗೆ ಹೆದರಿದ ಜನರು
ಅನೇಕ ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಆನಂದವಾಡಿಯ ನಿವಾಸಿಗಳು ದಿಗಿಲುಗೊಂಡಿದ್ದಾರೆ. ಈ ಎಲ್ಲ 40 ಮನೆಗಳನ್ನು ತೆರವುಗೊಳಿಸುವಂತೆ ವಕ್ಫ್ ಮಂಡಳಿಯ ನೋಟಿಸ್‌ ಬಂದಿದೆ. ಬುಧವಾರವೇ ಈ ನೋಟಿಸ್‌ ಜಾರಿಗೊಂಡಿದ್ದು, ಬುಧವಾರ ಬೆಳಗ್ಗೆ ಪೊಲೀಸರು ನೋಟಿಸ್‌ಗಳನ್ನು ಮನೆ ಮನೆಗೆ ನೀಡಲು ಆಗಮಿಸುತ್ತಿದ್ದಂತೆ ನಿವಾಸಿಗಳು ಆತಂಕಗೊಂಡಿದ್ದಾರೆ. ಈ ನೋಟಿಸ್‌ ವಿರುದ್ಧ ಎಲ್ಲರೂ ಸೇರಿ ಗುರುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next