Advertisement

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

12:17 AM Nov 17, 2024 | Team Udayavani |

ಹುಬ್ಬಳ್ಳಿ: ಬಿಜೆಪಿಯಿಂದ ವಕ್ಫ್ ಕುರಿತು ಹಮ್ಮಿಕೊಂಡಿರುವ ʼನಮ್ಮ ಭೂಮಿ, ನಮ್ಮ ಹಕ್ಕುʼ ಅಧ್ಯಯನ ತಂಡದಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ ಕೈಬಿಡುವ ಮೂಲಕ ಒಬ್ಬೊಬ್ಬರನ್ನೇ ಬಿಡುತ್ತಿದ್ದಾರೆ. ಅಪ್ಪ-ಮಕ್ಕಳು ಇದೇ ದಂಧೆ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹರಿಹಾಯ್ದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯಪುರದಲ್ಲಿ ನಮ್ಮ ದೊಡ್ಡ ಹೋರಾಟ ನೋಡಿ ಅವರು 3 ತಂಡ ರಚಿಸಿದ್ದಾರೆ. ಅದಕ್ಕೇ ಡೇಟ್‌, ಏನೂ ಇಲ್ಲ. ಅವ್ವ-ಅಪ್ಪ ಇಲ್ಲ. ಯತ್ನಾಳ್‌ ಮಾಡಿದ್ದಾರೆ ಅಂಥ ಅವರದ್ದು ಒಂದು ಟೀಮ್‌ ಮಾಡಿದ್ದಾರೆ. ಅವರಿಗೆ ವಕ್ಫ್ ಬೋರ್ಡ್‌, ಮುಡಾ, ವಾಲ್ಮೀಕಿ ಕಾಳಜಿ ಇಲ್ಲ. ಅವರ ಕಾಳಜಿ ಏನಿದ್ದರೂ ಸಿಎಂ ಹೇಗೆ ಆಗಬೇಕು. ಅಪ್ಪನ ಹಾಗೇ ಹೇಗೆ ಲೂಟಿ ಮಾಡಬೇಕೆಂಬುದಷ್ಟೇ ಎಂದು ಹರಿಹಾಯ್ದರು.

ನಾವು ನ.25ರಿಂದ ಡಿ. 25ರವರೆಗೆ ಜನಜಾಗೃತಿ ಯಾತ್ರೆ ಮಾಡುತ್ತೇವೆ. ನಮ್ಮದು ಇದರಲ್ಲಿ ಕ್ಲಿಯರ್‌ ಇದೆ ಎಂದು ಕುಟುಕಿದರು. ಯಡಿಯೂರಪ್ಪ, ಬೊಮ್ಮಾಯಿ ಇಬ್ಬರೂ ನನ್ನ ಜೊತೆ ನಾಟಕ ಕಂಪನಿ ಮಾಡಿದರು. ಬೊಮ್ಮಾಯಿ ಹೇಳುತ್ತಿದ್ದರು ನಿಮ್ಮನ್ನು ಮಂತ್ರಿ ಮಾಡುತ್ತೀವಿ ಅಂತ. ಆಪರೇಷನ್‌ ಕಮಲಕ್ಕೆ ನನ್ನದಂತೂ ಒಪ್ಪಿಗೆ ಇಲ್ಲ ಎಂದರು.

ತೇರದಾಳದಲ್ಲಿ ಯತ್ನಾಳ ಅರ್ಧಕ್ಕೆ ಭಾಷಣ ಬಿಟ್ಟು ಹೋಗಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಜೊತೆ ನಮ್ಮದು ಹೊಂದಾಣಿಕೆ ರಾಜಕಾರಣ ಇಲ್ಲ. ಬಸವನಗೌಡ ಪಾಟೀಲ ಯತ್ನಾಳ ಯಾವುದೇ ಕಾಂಗ್ರೆಸ್‌ ಭಿಕ್ಷೆಯಿಂದ ಎಂಎಲ್‌ಎ ಆಗಿಲ್ಲ. ನನ್ನ ಸ್ವಂತ ತಾಕತ್ತಿನ ಮೇಲೆ ಆರಿಸಿ ಬಂದಿದ್ದೇನೆ. ಕಾಂಗ್ರೆಸ್‌ನ ಭಿಕ್ಷೆಯಿಂದ ಎಂಎಲ್‌ಎ ಆದವರಿಗೆ ಈ ಪ್ರಶ್ನೆ ಕೇಳಿ ಎಂದರು.

ಜಮೀರ್‌ ಅಹ್ಮದ್‌ ಅಯೋಗ್ಯ: 

ಸಚಿವ ಜಮೀರ ಅಹ್ಮದ್‌ ವಿರುದ್ಧ ಸಿ.ಪಿ.ಯೋಗೇಶ್ವರ್‌ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಮೀರ್‌ ಅಹ್ಮದ್‌ ತನ್ನನ್ನು ತಾನು ಏನೆಂದು ತಿಳಿದುಕೊಂಡಿದ್ದಾರೋ ಏನೋ? ಬಣ್ಣದ ಬಗ್ಗೆ ಮಾತನಾಡಿದ್ದಾರೆ. ಹಿಂದೂ ಧಾರ್ಮಿಕ ದತ್ತಿಯಿಂದ ಬಂದಂತಹ ಹಣದಲ್ಲಿ ಖಬರಸ್ತಾನ್‌ ಕಾಂಪೌಂಡ್‌ ಕಟ್ಟಿದ್ದಾರೆ. ಜಮೀರ್‌ ಅಹ್ಮದ್‌ ನಮ್ಮೆಲ್ಲರಿಗೂ ಸೈತಾನ್‌ ಅಂತಾರೆ. ಇಂತಹ ಅಯೋಗ್ಯನನ್ನು ಮುಖ್ಯಮಂತ್ರಿ ಮುಂದುವರಿಸಿದ್ದಾರೆ. ಹಿಂದೂಗಳು ಕೊಟ್ಟಂತಹ ಜಾಗ ವಕ್ಫ್  ಮಾಡಿಕೊಂಡಿದ್ದಾರೆ. ದೇವಸ್ಥಾನಕ್ಕಾಗಿ ಅವರ ದೇಣಿಗೆ ತಗೊಂಡರೆ ಆ ದೇವಸ್ಥಾನ ಕೂಡ ಅವರದೇ ಆಗುತ್ತದೆ ಎಂದರು.

ಮುಡಾ ಪ್ರಕರಣ ಸಿಬಿಐಗೆ ಕೊಟ್ಟರೆ ಎಲ್ಲ ಪಕ್ಷದವರು ಹೊರಗೆ ಬರುತ್ತಾರೆ. ಎಲ್ಲ ಪಕ್ಷದಲ್ಲೂ ಕಳ್ಳರಿದ್ದಾರೆ. ಯಾರೂ ಸತ್ಯಹರಿಶ್ಚಂದ್ರನ ಎರಡನೇ ಸಂತತಿ ಅಲ್ಲ. ಸಿದ್ದರಾಮಯ್ಯ ಒಬ್ಬರೇ ತಗೊಂಡಿಲ್ಲ, ಎಲ್ಲ ಪಕ್ಷದವರು ಸೈಟ್‌ ತೆಗೆದುಕೊಂಡಿದ್ದಾರೆ. ಎಲ್ಲ ಪಕ್ಷದವರು ಎಂದ ಮೇಲೆ ಬಿಜೆಪಿ ಬೇರೆ ಇರುತ್ತಾ? ಸಿದ್ದರಾಮಯ್ಯ ಅವರೆಲ್ಲರನ್ನು ರಕ್ಷಣೆ ಮಾಡುತ್ತಿದ್ದಾರೆ. ಎಂತಹ ಒಳ್ಳೆಯ ಮನುಷ್ಯ ಸಿದ್ದರಾಮಯ್ಯ. ಅಡ್ಜ್ಸ್ಟಮೆಂಟ್‌ಗಾಗಿ ಸಿದ್ದರಾಮಯ್ಯ ಬಲಿ ಆಗುತ್ತಿದ್ದಾರೆ ಎಂದರು.

Advertisement

ಎಂಎಲ್‌ಎ, ಮಂತ್ರಿ ಯಾರು ಬೇಡ: 
ಆಪರೇಷನ್‌ ಕಮಲ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಹತ್ತಿರ ಇದಕ್ಕೆ ಆಧಾರವೇನಿದೆ. ರೆಕಾರ್ಡಿಂಗ್‌ ಇದೆಯಾ? ಹಾಗೇನಾದರೂ ಇದ್ದರೆ ಅರೆಸ್ಟ್‌ ಮಾಡಲಿ. ನಮಗೆ ಕಾಂಗ್ರೆಸ್‌ ಸರ್ಕಾರದಲ್ಲಿರುವ ಎಂಎಲ್‌ಎ, ಮಂತ್ರಿ ಯಾರು ಬೇಡ. ಇವರನ್ನು ತಗೊಂಡು ನಾವು ಸರ್ಕಾರ ಮಾಡಿದರೆ ಮುಗಿಯಿತು. ಕಾಂಗ್ರೆಸ್‌ ಸರ್ಕಾರ ಈಗಲೇ ಪತನವಾದರೆ, ಬಿಜೆಪಿ 150 ಸೀಟ್‌ ಬರುತ್ತದೆ. ನಾವ್ಯಾಕೆ ಅಂತಹ ಹಲ್ಕಾ ಕೆಲಸ ಮಾಡುವುದು. ಯಾವುದೇ ಕಾರಣಕ್ಕೂ ಆಪರೇಷನ್‌ ಕಮಲ ಮಾಡುವುದು ಬೇಡವೆಂದು ಪಕ್ಷದ ಹೈಕಮಾಂಡ್‌ ನಾಯಕರಿಗೆ ಹೇಳಿದ್ದೇನೆ. ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅವರಿಗೆ ಗಡಿಬಿಡಿ ಇದೆ ನಮಗಿಲ್ಲ. ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next