ಚಿಕ್ಕಮಗಳೂರು: ಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನರ ಪಾಲಿಗೆ ಭಸ್ಮಾಸುರನಂತೆ ವರ್ತಿಸುತ್ತಿದೆ. ಸಚಿವ ಜಮೀರ್ ಅಹಮದ್ ನಿಮಿತ್ತ ಮಾತ್ರ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ, ದೇವಸ್ಥಾನ, ಸ್ಮಶಾನ, ರೈತರ ಜಮೀನು ನಮ್ಮದು ಎಂದು ಹೇಳಿಕೊಳ್ಳಲು ವಕ್ಫ್ ಬೋರ್ಡ್ಗೆ ಪರಮಾಧಿಕಾರ ಸಿಕ್ಕಿದ್ದು ಜನರು ಕಾಂಗ್ರೆಸ್ಗೆ ಮತ ನೀಡಿದ್ದರಿಂದ. ಶಿವನ ರೂಪಿಯಾಗಿ ವರ ಕೊಟ್ಟವರು ಜನ. ಶಿವನ ತಲೆಯ ಮೇಲೆ ಕೈ ಇಡಲು ಮುಂದಾಗಿರುವುದು ಕಾಂಗ್ರೆಸ್ ಸರ್ಕಾರ ಎಂದು ಜರಿದರು.
ರಾಷ್ಟ್ರ ಉಳಿಯಬೇಕಾದರೆ ಹಿಂದೂ ಸಂಘಟಿತನಾಗಬೇಕು. ಆಗ ಮಾತ್ರ ನಮ್ಮ ಸಂವಿಧಾನ ಉಳಿಯುತ್ತದೆ. ಹಿಂದೂ ಯಾವತ್ತು ನಾಶವಾಗುತ್ತಾನೋ ಅಂದು ಈ ದೇಶದಲ್ಲಿ ಸಂವಿಧಾನ ಇರಲ್ಲ. ಅಲ್ಲಿ ಕೇವಲ ಷರಿಯಾ ಮಾತ್ರ ಉಳಿಯುತ್ತದೆ. ಸಂವಿಧಾನ, ಭಾರತ, ದೇವಸ್ಥಾನ, ರೈತರ ಜಮೀನು, ವಿಧಾನಸೌಧ, ಸಂಸತ್ತು ಉಳಿಯಬೇಕೆಂದರೆ ಹಿಂದುತ್ವ ಉಳಿಯಬೇಕು ಎಂದು ಹೇಳಿದರು.
ದತ್ತಪೀಠ ಮುಕಿ ಒಂದೇ ಉದ್ದೇಶ
ಭಜರಂಗದಳ, ವಿಶ್ವಹಿಂದೂ ಪರಿಷತ್ ಸಂಘಟನೆ ಮತ್ತು ಶ್ರೀರಾಮಸೇನೆ ಸಂಘಟನೆ ಸಂಕಲ್ಪ ದತ್ತಪೀಠ ಮುಕ್ತಿಯಾಗಬೇಕೆನ್ನುವುದು. ಇಬ್ಬರ ಉದ್ದೇಶದಲ್ಲಿ ದ್ವಂದ್ವವಿಲ್ಲ, ಸಂಘಟನೆ ಎರಡು ಆಗಿರಬಹುದು. ಆದರೆ ಉದ್ದೇಶ ಎರಡಾಗಿಲ್ಲ. ಹಿಂದೂಗಳನ್ನು ಸಂಘಟಿಸಬೇಕೆಂಬ ಪ್ರಯತ್ನ ಯಾರೇ ಮಾಡಿದರೂ ಅದು ನಮ್ಮ ಪ್ರಯತ್ನವೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಹಿಂದೂಗಳನ್ನು ಸಂಘಟಿಸುವ ಅವಶ್ಯಕತೆ ಇದೆ. ಒಂದು ವೇಳೆ ಸಂಘಟಿಸದಿದ್ದರೇ ಏನಾಗುತ್ತದೆ ಎಂಬುದನ್ನು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ವರ್ತಮಾನದಲ್ಲಿ ನೆಮ್ಮದಿ ಮತ್ತು ಭವಿಷ್ಯದಲ್ಲಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ ಎಂದ ಅವರು, ಅಖಂಡ ಭಾರತ ಹರಿದು ಹಂಚಿ ಹೋಗಿದೆ. ಗಾಂಧಾರಿಯ ತವರು ಮನೆ ಇಂದು ಅಪಘಾನಿಸ್ತಾನವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಿಂದೂಗಳು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.