ಬೆಳಗಾವಿ : ಸಚಿವ ಪ್ರಿಯಾಂಕ್ ಖರ್ಗೆ ಅವರು ಅಲ್ಪಸಂಖ್ಯಾಕ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿ.ವೈ.ವಿಜಯೇಂದ್ರ ಅವರು 150 ಕೋಟಿ ರೂ. ಲಂಚದ ಆಮಿಷ ಒಡ್ಡಿರುವ ಆರೋಪ ಮಾಡಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಸೋಮವಾರ(ಡಿ16) ಒತ್ತಾಯಿಸಿದೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ, ಕಳೆದ ಗುರುವಾರ ಸದನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಂಭೀರ ಆರೋಪದ ಬಗ್ಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
“ಸಚಿವ ಪ್ರಿಯಾಂಕ್ ಖರ್ಗೆ ನನ್ನ ಅನುಪಸ್ಥಿತಿಯಲ್ಲಿ ಸದನದಲ್ಲಿ ಆರೋಪ ಮಾಡಿದ್ದರು, ಅದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು. ಇದೊಂದು ಆಧಾರ ರಹಿತ ಆರೋಪ. ತಮ್ಮ ಹೇಳಿಕೆಗೆ ಸಚಿವರು ಕ್ಷಮೆಯಾಚಿಸಬೇಕು’ ಎಂದು ವಿಜಯೇಂದ್ರ ಆಕ್ರೋಶ ಹೊರ ಹಾಕಿದರು.
150 ಕೋಟಿ ಆಫರ್ ಮಾಡಿರುವ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿ ಎಂದು ಮುಖ್ಯಮಂತ್ರಿಗೆ ಸವಾಲು ವಿಜಯೇಂದ್ರ ಹಾಕಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಖರ್ಗೆ ಆರೋಪ ಮಾಡಿರುವ ಕುರಿತು ಆಕ್ರೋಶ ಹೊರ ಹಾಕಿದರು. ಇದಕ್ಕೆ ಉತ್ತರಿಸಿದ ಖರ್ಗೆ, ”ಕೆಲವು ವರ್ಷಗಳ ಹಿಂದೆ ಮಾಣಿಪ್ಪಾಡಿ ಅವರ ಸಂದರ್ಶನ ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿ ನಾನು ಹೇಳಿಕೆಯನ್ನು ನೀಡಿದ್ದೇನೆ” ಎಂದರು. ಇದೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ತೀವ್ರ ವಾಗ್ವಾದ ನಡೆಯಿತು.
ಪ್ರಿಯಾಂಕ್ ಖರ್ಗೆ ಏನು ಶ್ರೀರಾಮ ಚಂದ್ರನಾ?
ಸದನದ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ಹೊರ ಹಾಕಿ, ”ಅವರೇನು ಶ್ರೀರಾಮ ಚಂದ್ರನಾ? ಇತ್ತೀಚೆಗೆ ಅವರ ಬಂಡವಾಳ ಬಯಲಾಗಿದೆ. ನೂರಾರು ಕೋಟಿ ಬೆಲೆಬಾಳುವ ಐದು ಎಕರೆ ನಿವೇಶನವನ್ನು KIADB ಅವರು ಅಕ್ರಮವಾಗಿ ಹಂಚಿಕೆ ಮಾಡಿದ್ದರು. ಅದನ್ನು ಹಿಂದಿರುಗಿಸಲ್ಲವೇ? ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಾ” ಎಂದು ಪ್ರಶ್ನಿಸಿದರು.