ವಿದೇಶದ ಹೊಟೇಲ್ ಒಂದರಲ್ಲಿ ತಿಂಡಿ ತಿನ್ನಲು ಸ್ಥಿತಿವಂತರು ಕೌಂಟರ್‌ನಲ್ಲಿ ಕೂಪನ್ ಕೊಳ್ಳುವಾಗ ತಮಗೆ ಅಗತ್ಯವಿರುವುದಕ್ಕಿಂತ ಒಂದು ಹೆಚ್ಚು ಕೂಪನ್ ಖರೀದಿಸುತ್ತಾರೆ. ಹೆಚ್ಚುವರಿ ಕೂಪನ್‌ನ್ನು ಅಲ್ಲೇ ಗೋಡೆಗೆ ಅಂಟಿಸಿ ಹೋಗುತ್ತಾರೆ. ಕಾಸಿಲ್ಲದ ಬಡವರು ಹೊಟೇಲಿಗೆ ಬಂದು ಈ ಕೂಪನ್‌ನ್ನು ಗೋಡೆಯಿಂದ ತೆಗೆದು ಉಪಯೋಗಿಸುತ್ತಾರೆ. ದಾನದ ಉತ್ಕೃಷ್ಟ ಮಾದರಿಯೊಂದು ಇಲ್ಲಿ ಪ್ರದರ್ಶಿತವಾದಂತಾಗಿದೆ.
ಹಿಂದೊಬ್ಬ ಗುರು ಸ್ವರ್ಗಕ್ಕೆ ಯಾರು ಹೋಗುತ್ತೀರಿ ಎಂಬ ಪ್ರಶ್ನೆಯನ್ನು ತನ್ನ ಶಿಷ್ಯಗಣದ ಮುಂದಿಟ್ಟರಂತೆ. ಅದಕ್ಕೆ ಆ ಶಿಷ್ಯರಲ್ಲೊಬ್ಬ “ನಾನು’ ಹೋದರೆ ಹೋಗ ಬಹುದು ಎಂದು ಉತ್ತರಿಸಿದನಂತೆ. ಅಹಂಭಾವವನ್ನು ತ್ಯಜಿಸುವ ಅಗತ್ಯ ಮತ್ತು ಸ್ವಾರ್ಥ ರಹಿತ ಪರಮಾರ್ಥ ಜೀವನದ ಸಂದೇಶ ಈ ಕಥಾ ತುಣುಕಿನಲ್ಲಿದೆ. ನಮ್ಮ ಭಾರತ ದೇಶ ಇಂತಿರುವ ಪರಂಪರೆಯ ತಾಯಿಬೇರಿನಿಂದ ಚಿಗುರಿ ಬೆಳೆದಿದೆ. ವೇದ, ಪುರಾಣ, ಉಪನಿಷತ್ತುಗಳೆಲ್ಲದರ ಬೀಜಮಂತ್ರವೆಂದರೆ ನಿಸ್ವಾರ್ಥ ಹೃದಯಶೀಲತೆ. ಕುರಾನ್, ಬೈಬಲ್‌ಗಳ ಅಂತಃಶಕ್ತಿಯೂ ಇದೇ. ಈ ಗುಣ ಇದ್ದಲ್ಲಿ ಪ್ರಾಮಾಣಿಕತೆ, ತ್ಯಾಗ, ಸತ್ಯಸಂಧತೆ, ಪರೋಪಕಾರ ಇತ್ಯಾದಿ ಮಾನವೀಯ ಮೌಲ್ಯಗಳು ಸಹಜರೂಪದಲ್ಲಿ ಮೇಳೈಸಿರುತ್ತವೆ. 1947 ಆಗಸ್ಟ್ 15ರಂದು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಐತಿಹಾಸಿಕ ಸಾಧನೆಗೆ ಪ್ರೇರಕ ಶಕ್ತಿಯೇ ದೇಶಭಕ್ತರ ನಿಸ್ವಾರ್ಥ ಸೇವೆ. ಹೀಗೆ ಭಾರತೀಯರ ನಿಸ್ವಾರ್ಥ, ಹೃದ್ಯ ಮನೋಭಾವನೆಯಿಂದ ದೇಶ ಜಗತ್ತಿನಲ್ಲೇ ವಿಶಿಷ್ಟ ಸ್ಥಾನ ಸಂಪಾದಿಸಿತು.
ಆದರೆ ವರ್ತಮಾನದ ಆಗುಹೋಗುಗಳನ್ನು ಅವಲೋಕಿಸಿದರೆ ಹೃದಯವಂತಿಕೆಯ ಅವಶೇಷವೂ ಇಲ್ಲಿ ಕಾಣಸಿಗುವುದಿಲ್ಲ. ಜಾತಿ ಧರ್ಮಗಳ ಮೇಲಿನ ಅಂಧಾಭಿಮಾನ ಹೃದಯವಂತಿಕೆಯನ್ನು ಮರೆಮಾ ಚಿದೆ. ವಿದೇಶದ ಹೊಟೇಲ್ ಒಂದರಲ್ಲಿ ತಿಂಡಿ ತಿನ್ನಲು ಸ್ಥಿತಿವಂತರು ಕೌಂಟರ್‌ನಲ್ಲಿ ಕೂಪನ್ ಕೊಳ್ಳುವಾಗ ತಮಗೆ ಅಗತ್ಯವಿರುವುದಕ್ಕಿಂತ ಒಂದು ಹೆಚ್ಚು ಕೂಪನ್ ಖರೀದಿಸುತ್ತಾರೆ. ಹೆಚ್ಚುವರಿ ಕೂಪನ್‌ನ್ನು ಅಲ್ಲೇ ಗೋಡೆಗೆ ಅಂಟಿಸಿ ಹೋಗುತ್ತಾರೆ. ಕಾಸಿಲ್ಲದ ಬಡವರು ಹೊಟೇಲಿಗೆ ಬಂದು ಈ ಕೂಪನ್‌ನ್ನು ಗೋಡೆಯಿಂದ ತೆಗೆದು ಉಪಯೋಗಿಸುತ್ತಾರೆ. ದಾನದ ಉತ್ಕೃಷ್ಟ ಮಾದರಿಯೊಂದು ಇಲ್ಲಿ ಪ್ರದರ್ಶಿತವಾದಂತಾಗಿದೆ. ದಾನ ಕೊಟ್ಟವರ ಹೆಸರಾಗಲಿ ಪಡೆದವರ ಹೆಸರಾಗಲಿ ಎಲ್ಲೂ ದಾಖಲಾಗಲು ಅವಕಾಶವಿಲ್ಲ. ಆದರೆ ಹೃದಯಶೀಲತೆಯ ಸಂವಹನವೊಂದು ಇಲ್ಲಿ ಸದ್ದಿಲ್ಲದೆ ನಡೆದಿದೆ. ಭಾರತೀಯರಾದ ನಾವು ವಿದೇಶೀ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ ಎಂಬ ಮಾತು ಇಂದು ಸಾಮಾನ್ಯವಾಗಿ ಕೇಳಿಬರುತ್ತಿದೆ. ಆದರೆ ಅ ಸಂಸ್ಕೃತಿಯನ್ನು ಅನುಸರಿಸುವ ನಮ್ಮ ಕಣ್ಣಿಗೆ ಅದರೊಳಗೆ ಅಡಕವಾದ ಹೃದಯ ಕಟ್ಟುವ ಮಾನವೀಯ ಮೌಲ್ಯಗಳು ಗೋಚರವಾಗದಿರುವುದು ವಿಪರ್ಯಾಸ.
ಇಂದು ನಮ್ಮೊಳಗೆ ಉದ್ಭವಿಸುವ ಸಾಮಾಜಿಕ, ಧಾರ್ಮಿಕ , ಆರ್ಥಿಕ, ಶೈಕ್ಷಣಿಕ ಹೀಗೆ ಯಾವುದೇ ಸಮಸ್ಯೆ ರಾಜಕೀಯ ತಿರುವು ಪಡೆದು ಇಡೀ ಸಮಾಜದ ಸ್ವಾಸ್ಥ್ಯವನ್ನು ಅಲ್ಲೋಲಕಲ್ಲೋಲಗೊಳಿಸುತ್ತಿರುವುದನ್ನು ಕಾಣಬಹುದು. ದೇಶ ಸ್ವತಂತ್ರಗೊಂಡು ಆಡಳಿತಕ್ಕಾಗಿ ರಾಜಕೀಯ ವ್ಯವಸ್ಥೆ ಸೃಷ್ಟಿಗೊಂಡಾಗ ಈ ಸೃಷ್ಟಿಯ ಹಿಂದೆ ದೇಶಾಭಿವೃದ್ಧಿಯ ಮಹತ್ತರವಾದ ಉದ್ದೇಶವಿತ್ತು. ಜನಸಾಮಾನ್ಯರಿಗೂ ಅನೇಕ ಮಹತ್ವಾಂಕಾಕ್ಷೆಗಳಿದ್ದವು. ಆದರೆ ಕಾಲಕ್ರಮದಲ್ಲಿ ಇಲ್ಲಿನ ರಾಜಕೀಯ ತನ್ನ ಉದ್ದೇಶವನ್ನು ಬದಲಿಸಿದೆ. ಸ್ವಾರ್ಥ ಪೀಡಿತ ಕುಟುಂಬ ರಾಜಕಾರಣ ಈ ದೇಶದಲ್ಲಿ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿದೆ. ದೇಶ ಸೇವೆಗಾಗಿ , ಜನಸಾಮಾನ್ಯರಿಗಾಗಿ ಎಂದೆಲ್ಲ ಕೊಚ್ಚಿಕೊಂಡು ರಾಜಕೀಯ ಪಕ್ಷಕ್ಕೆ ಸೇರುವವರು ಅಥವಾ ಹೊಸ ಪಕ್ಷ ಕಟ್ಟುವವರು ಅಧಿಕಾರ ಗದ್ದುಗೆಯ ಹಿಡಿತ ಸಿಕ್ಕಿದ ಕೂಡಲೇ ಬದಲಾಗುತ್ತಾರೆ. ದಿನವೊಂದಕ್ಕೆ ಲಕ್ಷ ಲಕ್ಷ ಸರಕಾರಿ ಭತ್ಯೆ ಪಡೆದು ಜನಪರವಾದ ಯಾವೊಂದು ಕಾರ್ಯವನ್ನೂ ಮಾಡದೆ ಸ್ವಂತ ಆದಾಯವನ್ನು ಏರಿಸಿಕೊಳ್ಳುತ್ತಾರೆ. ಚುನಾವಣೆ ಮತ್ತು ಜನಪ್ರತಿನಿಧಿಗಳ ಖರ್ಚು ವೆಚ್ಚಕ್ಕೆ ತೆರಿಗೆ ಸಂಗ್ರಹದ ದೊಡ್ಡ ಮೊತ್ತ ವ್ಯಯವಾಗುತ್ತಿದ್ದು ಜನಪ್ರತಿನಿಧಿಗಳ ಪಂಗಡದಲ್ಲಿ ಪ್ರಾಮಾಣಿಕ ಹೃದಯವಂತ ವ್ಯಕ್ತಿ ದುರ್ಬೀನು ಹಿಡಿದು ಹುಡುಕಿದರೂ ಕಾಣಿಸುವುದಿಲ್ಲ. ರಾಜಕೀಯ ವಲಯದಲ್ಲಿ ಮಂದಿರ- ಮಸೀದಿ, ಗೋಪುರ-ಗೋರಿ ಕಟ್ಟುವವರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ ಹೃದಯ ಕಟ್ಟುವ ಒಬ್ಬನೇ ಒಬ್ಬ ಕಾಣಸಿಗುವುದಿಲ್ಲ. ಇಂದು ಸಮಾಜದ ಎಲ್ಲಾ ಸಮಸ್ಯೆಗಳು ರಾಜಕೀಯದಲ್ಲೇ ಅಂತ್ಯಗೊಳ್ಳುವುದರಿಂದ ಈ ಕ್ಷೇತ್ರದಲ್ಲಿ ಪ್ರಾಮಾಣಿಕರ ವಂಶ ಬೆಳೆಯಬೇಕಿದೆ.
ನಾವು ಮಕ್ಕಳನ್ನು ಬಹಳ ಮಹತ್ವಾಕಾಂಕ್ಷೆಯಿಂದ ಬೆಳೆಸುತ್ತೇವೆ. ಅವರು ಮುಂದೆ ಡಾಕ್ಟರೋ ಎಂಜಿನಿಯರೋ ಆಗಬೇಕು, ಚೆನ್ನಾಗಿ ಹಣ ಸಂಪಾದನೆ ಮಾಡಬೇಕೆಂಬುದು ಪ್ರತಿಯೊಬ್ಬ ತಂದೆ ತಾಯಿಯ ಆಸೆಯಾಗಿರುತ್ತದೆ. ಅದಕ್ಕಾಗಿ ಅವರನ್ನು ಯಂತ್ರದ ರೀತಿಯಲ್ಲಿ ಬಳಸಿಕೊಂಡು ತಯಾರುಗೊಳಿಸುತ್ತೇವೆ. ಮಕ್ಕಳು ಯಂತ್ರಗಳಾಗಿಯೇ ತಯಾರುಗೊಳ್ಳುತ್ತಾರೆ. ಸಾಫ್ಟ್ವೇರ್ ಎಂಜಿನಿಯರ್‌ಗಳ್ಳೋ, ಸರ್ಜರಿ ಸ್ಪೆಷಲಿಷ್ಟ್ ಗಳ್ಳೋ ಆಗಿ ಸಂಪತ್ತಿನ ಮಹಲು ಕಟ್ಟುತ್ತಾರೆ. ಆದರೆ ಮಾನವ ಸಂಬಂಧಗಳ ಬಗ್ಗೆ , ಹೃದಯವಂತಿಕೆಯ ಬಗ್ಗೆ ಅವರಿಗೆ ತಿಳಿದೇ ಇರುವುದಿಲ್ಲ. ಇದೇ ಕಾರಣದಿಂದ ಮಾನವನ ಸಾಮಾಜಿಕ ಸಂಬಂಧದ ಬೆಸುಗೆಯ ಕಸುವು ದಿನದಿಂದ ದಿನಕ್ಕೆ ಕುಂದುತ್ತಿದೆ. ಕೂಡು ಕುಟುಂಬವಿದ್ದಾಗ ನೆಲೆಸಿದ್ದ ಸಾಮಾಜಿಕ ಶಾಂತಿ ನೆಮ್ಮದಿ ಈಗಿನ ಪ್ಲಾಟ್ ಸಂಸ್ಕೃತಿಯಲ್ಲಿ ಕಾಣಿಸುತ್ತಿಲ್ಲ. ವಾರಾನ್ನವಿದ್ದಾಗ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಜೀವನ ಪಾಠ ಈಗಿನ ಪೇಯಿಂಗ್‌ಗೆಸ್ಟ್ ಸಂಸ್ಕೃತಿಯಿಂದ ಸಿಗುತ್ತಿಲ್ಲ. ಜೀವನ ಮೌಲ್ಯದ, ಹೃದಯವಂತಿಕೆಯ ಪಾಠಗಳನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಯಾವ ತಂದೆ ತಾಯಿಯೂ ಕಾಳಜಿ ವಹಿಸುವುದಿಲ್ಲ.
ಸಾಮಾಜಿಕ ಜೀವನವೂ ಬಹಳಷ್ಟು ಬದಲಾಗಿದೆ. ಈ ಬದಲಾವಣೆಯನ್ನು ಅಭಿವೃದ್ಧಿ ಎಂದು ಪೂರ್ತಿ ಒಪ್ಪಿಕೊಳ್ಳಲಾಗದು. ಹೊಲದಲ್ಲಿ ಉಳುವ ರೈತನೋ , ಕಾಶ್ಮೀರದ ಶೀತಲ ಗಡಿಯಲ್ಲಿ ಪಹರೆ ಕಾಯುವ ಸೈನಿಕನೋ ಇವತ್ತು ಯುವ ಜನರಿಗೆ ಬಿಗ್‌ಬಾಸ್ ಅನ್ನಿಸುವುದಿಲ್ಲ. ರಾಮಾಯಣ ಮಹಾಭಾರತದಂತಹ ಮೌಲ್ಯಭರಿತ ಸೀರಿಯಲ್‌ಗಳಿಗೆ ಪ್ರೇಕ್ಷಕರಿಲ್ಲ. ಖಳ ವ್ಯಕ್ತಿತ್ವ , ಋಣಾತ್ಮಕ ಧೋರಣೆಗಳನ್ನೇ ಮಾದಕದ್ರವ್ಯದಂತೆ ಸ್ವೀಕರಿಸುವ ಯುವ ಜನಾಂಗದೊಳಗೆ ಹೃದಯವಂತರೇ ಅಪರೂಪವಾಗುತ್ತಿದ್ದಾರೆ.
ಭಾರತದಂತಹ ಬಹುಸಂಸ್ಕೃತಿಯಿರುವ ದೇಶದಲ್ಲಿ ಪರರನ್ನು ಅರಿತು ಬಾಳುವ ಹೃದಯವಂತಿಕೆ ಹೊಂದಿರಬೇಕಾದುದು ಅತ್ಯವಶ್ಯಕ. ಇದೀಗ ಸಪ್ತ ದಿಕ್ಕುಗಳಿಂದಲೂ ಸಮಾಜವನ್ನು ಆಕ್ರಮಿಸಲು ದುಷ್ಟ ಶಕ್ತಿಗಳು ಹವಣಿಸುತ್ತಿರುವ ಪರಿಸ್ಥಿತಿ ಇಲ್ಲಿದೆ. ಮಾನವೀಯ ಸಂಬಂಧದ ಪ್ರೀತಿಯ ಎಳೆಗಳಿಂದ ಹೃದಯ -ಹೃದಯವನ್ನು ಬಂಧಿಸಿಕೊಂಡು ಒಗ್ಗಟ್ಟಿನಿಂದ ಬದುಕಿದಾಗ ಸಮಾಜವನ್ನು ಒಡೆಯಲು ಪ್ರಯತ್ನಿಸುವ ಶಕ್ತಿಗಳಿಗೆ ಹಿನ್ನೆಡೆಯಾಗುವುದರಲ್ಲಿ ಅನುಮಾನವಿಲ್ಲ. ಇದಕ್ಕಾಗಿ ಹೃದಯದ ಭಾಷೆಯನ್ನು ತಿಳಿಯುವ ತರಬೇತಿ ಮಾನವನಿಗೆ ಪ್ರಾಥಮಿಕ ಶಿಕ್ಷಣದೊಂದಿಗೇ ಸಿಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಚಿಂತಿಸಬೇಕು. ಇಲ್ಲದೇ ಹೋದರೆ ಮುಂದೊಂದು ದಿನ ಹೃದಯ ಕಟ್ಟುವವರು ಬೇಕಾಗಿದ್ದಾರೆ ಎಂಬ ಜಾಹೀರಾತಿಗೆ ಮನುಷ್ಯರೆಂಬ ಮೃಗಗಳ ಸಮಾಜ ಕಿವುಡಾಗಿರಬಹುದು. ಈ ವಿಚಾರವಾಗಿ ಕವಿ ಅಮೃತ ಸೋಮೇಶ್ವರರು “ಎನಿತು ಭಾಷೆಗಳ ಕಲಿತೊಡೇನು ಹೃದಯದ ಭಾಷೆ ಅರಿಯದನ್ನಕ…’ ಎಂದು ಹಾಡಿರುವುದು ಬಹಳ ಅರ್ಥಪೂರ್ಣವಾಗಿದೆ.
ಭಾಸ್ಕರ ಕೆ. ಕುಂಟಪದವು