ಸಹರಣ್ ಪುರ್ : ಜುಲೈ ತಿಂಗಳ ಆರಂಭದಲ್ಲಿ ಗ್ಯಾಸ್ ಏಜೆನ್ಸಿಯಲ್ಲಿ ದರೋಡೆ ನಡೆಸಿದ ಆರೋಪಿಯನ್ನು ಶನಿವಾರ ಪೊಲೀಸರು ಎನ್‌ಕೌಂಟರ್ ನಡೆಸಿದ ನಂತರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿ ದೀಪಕ್ ಎನ್ನುವವನಾಗಿದ್ದು, ಮುಂಜಾನೆ ನಡೆದ ಎನ್‌ಕೌಂಟರ್ ವೇಳೆ ಓರ್ವ ಪೊಲೀಸ್ ಸಹ ಗಾಯಗೊಂಡಿದ್ದಾರೆ ಬಂಧಿತ ಆರೋಪಿಯ ಸಹಚರ ಪರಾರಿಯಾಗಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೀಪಕ್ ಜುಲೈ 11 ರಂದು ಗ್ಯಾಸ್ ಏಜೆನ್ಸಿಯಲ್ಲಿ ನಡೆದ ದರೋಡೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಆತನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ ಪೊಲೀಸರು 25,000 ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು. ದೀಪಕ್ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಸುಳಿವಿನ ಆಧಾರದ ಮೇಲೆ ನಕುದ್ ಮತ್ತು ಸರ್ಸಾವಾ ಪೊಲೀಸ್ ಠಾಣೆಗಳ ಎಸ್‌ಎಚ್‌ಒಗಳಾದ ರಾಜೇಂದ್ರ ಪ್ರಸಾದ್ ವಶಿಷ್ಟ್ ಮತ್ತು ಸುಬೆ ಸಿಂಗ್ ಅವರು ಶನಿವಾರ ಮುಂಜಾನೆ ಲತೀಫ್‌ಪುರ ಅರಣ್ಯಕ್ಕೆ ಮುತ್ತಿಗೆ ಹಾಕಿ ಅವರನ್ನು ಹಿಡಿಯಲು ಪ್ರಯತ್ನಿಸಿದರು. ಇಬ್ಬರು ಆರೋಪಿಗಳು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದರು, ಆಗ ಪ್ರತಿದಾಳಿ ನಡೆಸಿ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ.
ದೀಪಕ್‌ನ ಸಹಚರ ಅಂಕಿ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಶೋಧ ನಡೆಸಲಾಗಿದೆ. ಆರೋಪಿಯಿಂದ ಒಂದು ಬೈಕ್, ಪಿಸ್ತೂಲ್, ಎರಡು ಖಾಲಿ ಕಾಟ್ರಿಡ್ಜ್‌ಗಳು ಮತ್ತು 5 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ದೀಪಕ್, ತಾನು ಮತ್ತು ಆತನ ಸಹಚರ ಶುಭಂ ಜುಲೈ 11ರಂದು ದರೋಡೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.