Advertisement

Childhood: ಮತ್ತೆ ಮರಳಬೇಕು ಬಾಲ್ಯಕ್ಕೆ….

03:38 PM Feb 25, 2024 | Team Udayavani |

ಅದೊಂದು ದಿನಗಳಿತ್ತು. ಹೇಗೆಂದರೆ ಕ್ಲಾಸ್‌ ರೂಮಿನ ಒಳಗಿನವರೆಗೆ ಅಣ್ಣ ಕೈ ಹಿಡಿದು ಕರೆದುಕೊಂಡು ಹೋಗಿ ಕೂರಿಸಿ ಬರುತ್ತಿದ್ದ,10 ಗಂಟೆಗೆ ಪ್ರಾರಂಭವಾಗುತ್ತಿದ್ದ ಕ್ಲಾಸಿಗೆ 9.55ಕ್ಕೆ ತರಗತಿಯೊಳಗೆ ಹೋಗುತ್ತಿದ್ದೆ. ನನ್ನ ಹೈಸ್ಕೂಲ್‌ ಪೂರ್ತಿ ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಮಹಾಜನ ಸಂಸ್ಕೃತ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಕಳೆದಿದ್ದು.

Advertisement

ನಮ್ಮ ಮನೆಯಿಂದ 4ಕಿಲೋ ಮೀಟರ್‌ ದೂರದಲ್ಲಿದ್ದ ಶಾಲೆಯಾಗಿತ್ತು ಅದು. ಬಸ್ಸಿನಲ್ಲಿ ಶಾಲೆಗೆ ಬೆಳಗ್ಗೆ ಪ್ರಯಾಣಿಸಿದ ದಿನಗಳು ಎಂದರೆ ತೀರಾ ಕಡಿಮೆಯೇ. ದಿನಾಲೂ ನಾನು ಮತ್ತು ಅಣ್ಣ ಒಟ್ಟಿಗೆ ಬೈಕಿನಲ್ಲಿ ತೆರಳುವುದಾಗಿತ್ತು. ಕಾಸರಗೋಡಿಗೆ ಕೆಲಸಕ್ಕೆ ತೆರಳುವ ಅಣ್ಣ, ಹೋಗುವ ದಾರಿ ಮಧ್ಯದ ಶಾಲೆಯಲ್ಲಿ ಓದುವ ತಂಗಿಯ ಪ್ರಯಾಣ ಎಂದೂ ಜತೆಯಾಗಿರುತ್ತಿತ್ತು.

ಶಾಲೆಯ ಎದುರಿನಲ್ಲಿ ಬೈಕಿನಿಂದ ಇಳಿದು ರಸ್ತೆ ದಾಟುವ ಧಾವಂತದಲ್ಲಿದ್ದ ನನಗೆ ಅಂದು ಎದುರುಗಡೆಯಿಂದ ಬಂದಿದ್ದ ಒಂದು ಕಾರು ಕಾಣಿಸಲೇ ಇಲ್ಲ… ಕೂದಲೆಳೆಯ ಅಂತರಲ್ಲಿ ನಾನು ಅಂದು ಪಾರಾಗಿದ್ದೆ. ನಿಮಿಷಗಳವರೆಗೆ ಆ ಜಾಗ ಬಿಟ್ಟು ನಾನು ಕದಲಿಯೇ ಇರಲಿಲ್ಲ ಅಷ್ಟು ಹೆದರಿದ್ದೆ. ಅಂದಿನಿಂದ ಪ್ರತಿನಿತ್ಯ ಅಣ್ಣ ನನ್ನನ್ನ ಕ್ಲಾಸ್‌ ರೂಮ್‌ನ ವರೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಹೊತ್ತಿದ್ದ…

ಎಲ್ಲ ಹುಡುಗಿಯರು ನನ್ನ ನೋಡಿ ಹೇಳುತ್ತಿದ್ದರು  ಶ್ರೇಯಾ ಅಂದ್ರೆ ಅವಳ ಅಣ್ಣನಿಗೆ ಎಷ್ಟು ಇಷ್ಟ… ಯಾವತ್ತೂ ಶಾಲೆಗೆ ಕರಕೊಂಡು ಬಂದು ಬಿಟ್ಟು, ಮತ್ತೆ ಸಂಜೆ ಕರಕೊಂಡು ಹೋಗ್ತಾರಲ್ಲಾ…ಎಂದು. ಅಂದಿಗೆ ಈ ಮಾತುಗಳು ನನ್ನಲ್ಲಿ ಯಾವ ಬದಲಾವಣೆಯನ್ನೂ ಉಂಟು ಮಾಡದೇ ಇದ್ದರೂ ಕೂಡ ಇಂದಿಗೆ ನಾನೆಂದರೆ ಮನೆಯವರಿಗೆಲ್ಲಾ ಎಷ್ಟು ಪ್ರೀತಿ ಎಂದೆನಿಸುತ್ತದೆ.

ಹಾಸ್ಟೆಲ್‌ನಲ್ಲಿ ನಾಲ್ಕನೇ ಮಹಡಿಯಲ್ಲಿರುವ ನನಗೆ ಹಸಿವಾದರೂ ಕೆಲವೊಮ್ಮೆ ಊಟ, ತಿಂಡಿಗೆ ಕೆಳಗಡೆ ಹೋಗಲು ಬೇಜಾರು…ಇಂತಹಾ ಹಲವಾರು ಸಂದರ್ಭದಲ್ಲಿ ಮನೆಯಲ್ಲಿ ಪ್ರತಿಯೊಂದನ್ನೂ ಕೂತಲ್ಲಿಗೇ ತಂದು ಬಾಯಿಗೆ  ತುತ್ತಿಡುತ್ತಿದ್ದ ಅಮ್ಮ, ದೊಡ್ಡಮ್ಮಂದಿರು,ಅತ್ತೆಯನ್ನು ನೆನೆದರೆ ಕಣ್ಣಂಚು ಆಗಾಗ ಒದ್ದೆಯಾಗುತ್ತದೆ. ಅಷ್ಟು ಮುದ್ದಿನಿಂದ ತುತ್ತಿಟ್ಟಿದ್ದಕ್ಕೂ ನನ್ನದು ಏನಾದ್ರೂ ಒಂದು ಕೊರತೆಯಂತೂ ಇದ್ದೇ ಇತ್ತು. ಆದರೂ ಕೂಡ ಎಲ್ಲರೂ ನಾನು ಹೇಳಿದ ಮಾತುಗಳಿಗೆ ಎದುರಾಡದೇ ಊಟ-ತಿಂಡಿ ವಿಷಯದಲ್ಲಿ ನನಗೆ ಬೇಕು ಬೇಕಾದುದನ್ನೇ ಮಾಡಿ ಬಡಿಸುತ್ತಿದ್ದರು.

Advertisement

ಇಂದಿನ ಹಾಸ್ಟೆಲ್‌ ಜೀವನ ನನಗೆ ಮತ್ತೆ ನಾನು ಆ ದಿನಗಳಿಗೆ ಮರಳಬೇಕು ಎಂದು ಹೇಳುವಂತೆ ಮಾಡುತ್ತಿದೆ. ನಡೆದ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುವುದಕ್ಕೆ ಅಕ್ಕ, ಜಗಳವಾಡುವುದಕ್ಕೆ ಅಣ್ಣಂದಿರು, ತಿದ್ದುವುದಕ್ಕೆ ಅಪ್ಪ, ದೊಡ್ಡಪ್ಪ, ಮುದ್ದು ಮಾಡುತ್ತಿದ್ದ ಅತ್ತೆ, ದೊಡ್ಡಮ್ಮಂದಿರು… ಎಲ್ಲರೊಂದಿಗೆ ಅಂದು ಕಳೆಯುತ್ತಿದ್ದ ಕ್ಷಣಗಳು ಮಾತ್ರ ತುಂಬಾ ಬೇಲೆ ಬಾಳುವಂತಹದ್ದು.

ಬಹುಶಃ ಶಿಕ್ಷಣ, ಕೆಲಸ ಎಂದೇ ಇನ್ನು ಮುಂದುವರೆಯುವ ಈ ಸಂದರ್ಭದಲ್ಲಿ ಬಾಲ್ಯದಲ್ಲಿ ಕಳೆದಂತಹ ಚಿನ್ನದಂತಹ ಸಮಯ, ಸಂದರ್ಭಗಳು ಮತ್ತೂಮ್ಮೆ ಮರುಕಳಿಸಲು ಸಾಧ್ಯವೇ ಇಲ್ಲ. ರಜೆಗೆಂದು ಮನೆಗೆ ಹೋದರೂ ಹೆಚ್ಚೆಂದರೆ ಒಂದು ವಾರ, ಹತ್ತು ದಿನ ಅಷ್ಟೇ. ಬಾಲ್ಯದ ಹಲವಾರು ಘಟನೆಗಳನ್ನು ನೆನೆಸಿಕೊಳ್ಳುತ್ತಾ ಬಂದರೆ ಮತ್ತೆ ಆ ದಿನಗಳು ಮರುಕಳಿಸಬೇಕು, ಮತ್ತೆ ಬಾಲ್ಯಕ್ಕೆ ಮರಳುವಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನಿಸುತ್ತಿದೆ….

-ಶ್ರೇಯಾ ಮಿಂಚಿನಡ್ಕ

ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next