ಸಿಯೋಲ್/ವಿಶ್ವಸಂಸ್ಥೆ: ಅಮೆರಿಕ, ಜಪಾನ್ ಗುರಿಯಾಗಿಸಿಕೊಂಡು ಉತ್ತರ ಕೊರಿಯಾ ನಡೆಸಿದ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಸಂಚಲನ ಮೂಡಿಸಿದೆ. ಈ ನಡುವೆ, ಅಮೆರಿಕಕ್ಕೆ ಸರಿಸಾಟಿಯಾಗಿ ನಿಲ್ಲುವ ದಿಶೆಯಲ್ಲಿ ನಾಗಾಲೋಟದಲ್ಲಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸ್ವಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಮಿಲಿಟರಿ ಬಲ ವರ್ಧನೆಗಾಗಿ ಶಸ್ತ್ರಾಸ್ತ್ರ ಕ್ಷಿಪಣಿ ಘಟಕದ ಉನ್ನತ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶುಕ್ರವಾರವಷ್ಟೇ ಭಾರಿ ಸಾಮರ್ಥ್ಯದ ಅಣು ಶಸ್ತ್ರಾಸ್ತ್ರ ಕ್ಷಿಪಣಿ ಪರೀಕ್ಷೆ ನಡೆಸಿದ ಬಳಿಕ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿರುವ ಕಿಮ್, ಅಮೆರಿಕ ಮಿಲಿಟರಿ ಪಡೆಗೆ ಸರಿಸಮಾನವಾಗಿ ನಿಲ್ಲಬಲ್ಲ ಸಾಮರ್ಥ್ಯ ನಮ್ಮದಾಗ ಬೇಕು. ಅಲ್ಲಿಯ ತನಕ ಮಿಲಿಟರಿ ಬಲ ಹೆಚ್ಚಿಸಿಕೊಳ್ಳಲು ಅಗತ್ಯ ಶಸ್ತ್ರಾಸ್ತ್ರ, ಅಣ್ವಸ್ತ್ರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ. ಅಮೆರಿಕ ನಾಯಕರು ಪಾಂಗ್‌ಯಾಂಗ್ ಮಿಲಿಟರಿ ಬಲದ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವ ವರೆಗೂ ಪ್ರಯತ್ನ ಮುಂದುವರಿಯಲಿ. ಅಮೆರಿಕಕ್ಕೆ ಸಡ್ಡು ಹೊಡೆದು ನಿಲ್ಲುವುದೇ ನಮ್ಮ ಗುರಿಯಾಗಲಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಉತ್ತರ ಕೊರಿಯಾ ಶುಕ್ರವಾರ ಬೆಳಗ್ಗೆ ಖಂಡಾಂತರ ಕ್ಷಿಪಣಿ ಉಡಾಯಿಸಿ ಜಪಾನ್‌ನ ದ್ವೀಪ ಹೊಕ್ಕೆ„ಡೊದಿಂದಾಚೆಗಿನ ಸಾಗರದಲ್ಲಿ ಬೀಳುವಂತೆ ಮಾಡಿ ಗಾಬರಿಗೊಳಿಸಿತ್ತು. ಈ ಮೂಲಕ ಅಮೆರಿಕದ ಗುವಾಮ್ ಮೇಲೆ ಕಣ್ಣು ನೆಟ್ಟಿದ್ದೇವೆ ಎನ್ನುವ ಸಂದೇಶವನ್ನೂ ಪರೋಕ್ಷವಾಗಿ ನೀಡಿತ್ತು. ಕ್ಷಿಪಣಿ 2,300 ಮೈಲು ದೂರಕ್ಕೆ ಕ್ರಮಿಸುವುದನ್ನೂ ಸಾಬೀತು ಪಡಿಸಿಕೊಂಡಿದೆ.
ಇದಲ್ಲದೇ ಕಿಮ್ ಜಾಂಗ್, “ಪರಮಾಣು ಕ್ಷಿಪಣಿಗಳನ್ನು ಹೊಂದಿರುವ ಅಮೆರಿಕದ ಯಾವುದೇ ಸವಾಲನ್ನು ಉತ್ತರ ಕೊರಿಯಾ ಹೊಂದಿರಬೇಕೆಂದು ಕ್ಷಿಪಣಿ ಘಟಕಕ್ಕೆ ತಾಕೀತು ಮಾಡಿದ್ದಾರೆ, ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಇದೇ ವೇಳೆ ಶುಕ್ರವಾರ “ಹ್ವಾಸಂಗ್-12′ ಹೆಸರಿನ ಕ್ಷಿಪಣಿ ಉಡಾಯಿಸಿದ್ದಾಗಿ ಸ್ಪಷ್ಟಪಡಿಸಿದೆ.
ಪ್ರಚೋದನೆಗೆ ಅಮೆರಿಕ ಸೊಪ್ಪು ಹಾಕಲ್ಲ: ಕ್ಷಿಪಣಿ ಪರೀಕ್ಷೆ ಹಾಗೂ ಅಮೆರಿಕ ಮೇಲೆ ಪ್ರತಿಕಾರಕ್ಕೆ ತೊಡೆ ತಟ್ಟಿದವರಂತೆ ವರ್ತಿಸುತ್ತಿರುವ ಉತ್ತರ ಕೊರಿಯಾಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀಕ್ಷ್ಣವಾಗಿಯೇ ಉತ್ತರ ಕೊಟ್ಟಿದ್ದಾರೆ.
“ಉತ್ತರ ಕೊರಿಯಾದ ಪ್ರಚೋದನೆಗಳಿಗೆ ನಾವು ಸೊಪ್ಪು ಹಾಕಿಕೊಂಡು ಕೂರುವುದಿಲ್ಲ. ಕಂಗೆಟ್ಟು ಓಡುವುದೂ ಇಲ್ಲ. ಅವರ ಬೆದರಿಕೆಗಳನ್ನು ಅಮೆರಿಕ ಹಾಗೂ ಮಿತ್ರರಾಷ್ಟ್ರಗಳು ಅಷ್ಟೇ ಸಮರ್ಥವಾಗಿಯೇ ಎದುರಿಸಲಿದೆ’ ಎಂದು ಹೇಳಿರುವ ಡೊನಾಲ್ಡ್ ಟ್ರಂಪ್, ಅಮೆರಿಕ ಸಂದಭೋìಚಿತ ಪ್ರತಿಕ್ರಿಯೆ ನೀಡಲಿದೆ ಎಂದಿದ್ದಾರೆ. ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದ ಟ್ರಂಪ್, “”ನಿಮ್ಮ ಸಾಮರ್ಥ್ಯ ಹಾಗೂ ಬದ್ಧತೆಯನ್ನು ನೋಡಿದ್ದೇವೆ. ಇದರಿಂದ ನಮ್ಮ ಆತ್ಮವಿಶ್ವಾಸವೂ ಇನ್ನಷ್ಟು ವೃದ್ಧಿಸಲು ಸಾಧ್ಯವಾಗಿದೆ. ನಮ್ಮ ಬಳಿ ಏನೆಲ್ಲಾ ಅವಕಾಶಗಳು ಇವೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕಾದ ಸಮಯ ಇದಾಗಿದೆ” ಎಂದು ಅಮೆರಿಕ ವಾಯು ಪಡೆಯ 70ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.