Advertisement

ಗೃಹಲಕ್ಷ್ಮೀ ಬೇಕೇ? ಎಪಿಎಲ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಸಿ

10:32 PM Jul 31, 2023 | Team Udayavani |

ಬೆಂಗಳೂರು: ರಾಜ್ಯದ ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿದಾರರೊಂದಿಗೆ ಎಪಿಎಲ್‌ ಕಾರ್ಡ್‌ದಾರರಿಗೂ ಸರ್ಕಾರ “ಗೃಹಲಕ್ಷ್ಮೀ’ ಭಾಗ್ಯ ಕಲ್ಪಿಸಿದೆ. ಬಹುತೇಕ ಎಪಿಎಲ್‌ ಕಾರ್ಡ್‌ಗಳೇ ಅಮಾನತು ಅಥವಾ ರದ್ದುಗೊಂಡಿರುವುದರಿಂದ ಆತಂಕದಲ್ಲಿದ್ದಾರೆ. ಆದರೆ, ಆ ವರ್ಗದ ಆತಂಕವನ್ನೂ ದೂರಮಾಡುವ ನಿಟ್ಟಿನಲ್ಲಿ ಸರ್ಕಾರ ಎಪಿಎಲ್‌ ಕಾರ್ಡ್‌ಗಳನ್ನು ಆಯಾ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲೇ ಅಪ್‌ಡೇಟ್‌ ಮಾಡಲು ಅವಕಾಶ ನೀಡಿದೆ.

Advertisement

2020-21ರಲ್ಲಿ “ಒಂದು ದೇಶ- ಒಂದು ಪಡಿತರ ಚೀಟಿ’ ಅಡಿ ಪಡಿತರ ಚೀಟಿಗಳನ್ನು ಅಪ್‌ಡೇಟ್‌ ಮಾಡಿ, ಹೊಸದಾಗಿ ಕಾರ್ಡ್‌ ಸಂಖ್ಯೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ನಿಯಮಿತವಾಗಿ ಪಡಿತರ ತೆಗೆದುಕೊಳ್ಳುವ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ದಾರರು ಆಯಾ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಿನ ಗುರುತು ನೀಡಿ, ಆಧಾರ್‌ ಸಂಖ್ಯೆ ಜೋಡಣೆ ಮಾಡಿಸಿದ್ದಾರೆ. ಎಪಿಎಲ್‌ನವರು ನ್ಯಾಯಬೆಲೆ ಅಂಗಡಿಗಳ ಹತ್ತಿರ ಸುಳಿಯಲೇ ಇಲ್ಲ. ಹಾಗಾಗಿ, ಅಪ್‌ಡೇಟ್‌ ಆಗದೆ ಉಳಿದಿವೆ.

“ಎಪಿಎಲ್‌ ಸೇರಿದಂತೆ ಯಾರೂ ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಬೆರಳಿನ ಗುರುತು ಮತ್ತು ಆಧಾರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆಯೊಂದಿಗೆ ಎಲ್ಲ ಕಾರ್ಡ್‌ಗಳನ್ನೂ ಸಕ್ರಿಯಗೊಳಿಸಲು ಅವಕಾಶ ಇದೆ. ಆಯಾ ನ್ಯಾಯಬೆಲೆ ಅಂಗಡಿ ಅಥವಾ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆ ಮುಗಿಸಬಹುದು ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಅಂತ್ಯೋದಯ ಮತ್ತು ಆದ್ಯತಾ ಕುಟುಂಬ (ಬಿಪಿಎಲ್‌ ಕಾರ್ಡ್‌ದಾರರು)ಗಳಲ್ಲೂ ಕೆಲ ಫ‌ಲಾನುಭವಿಗಳು ಬ್ಯಾಂಕ್‌ ಖಾತೆ ಸಂಖ್ಯೆ ಹೊಂದಿದ್ದರೂ, ಅವುಗಳು ಸಕ್ರಿಯವಾಗಿಲ್ಲ. ಈಗ ಕೆವೈಸಿ ಮೂಲಕ ಸಕ್ರಿಯಗೊಳಿಸುವ ಪ್ರಕ್ರಿಯೆ ನಡೆದಿದೆ. ಅಲ್ಲಿ ಅಂತಹ ಯಾವುದೇ ಸಮಸ್ಯೆ ಆಗಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆ ಕುರಿತು
ಚುನಾವಣೆ ಪೂರ್ವ ಕಾಂಗ್ರೆಸ್‌ ಘೋಷಿಸಿದಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ತಲಾ ಎರಡು ಸಾವಿರ ರೂ. ಪಾವತಿಸುವ “ಗೃಹಲಕ್ಷ್ಮೀ’ ಯೋಜನೆಗೆ ಹೆಸರು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಂತ್ಯೋದಯ, ಬಿಪಿಎಲ್‌ ಮಾತ್ರವಲ್ಲ; ಎಪಿಎಲ್‌ ಪಡಿತರ ಚೀಟಿ ಹೊಂದಿದವರಿಗೂ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ.

Advertisement

ಸಮಸ್ಯೆ ಆಗಿದ್ದು ಎಲ್ಲಿ?
ಸಾಮಾನ್ಯವಾಗಿ ಈ ವರ್ಗಗಳು ಪಡಿತರಕ್ಕಾಗಿ ಕಾರ್ಡ್‌ ಹೊಂದುವುದು ತುಂಬಾ ವಿರಳ (ಈಗ ಪಡಿತರವನ್ನೂ ನೀಡುತ್ತಿಲ್ಲ). ಮುಖ್ಯವಾಗಿ ವಿಳಾಸ ಗುರುತಿಗಾಗಿ ಹೊಂದಿರುತ್ತಾರೆ. ನಾಲ್ಕಾರು ವರ್ಷಗಳಿಂದ ಎಪಿಎಲ್‌ ಕಾರ್ಡ್‌ದಾರರು ನ್ಯಾಯಬೆಲೆ ಅಂಗಡಿಗಳ ಕಡೆಗೆ ಬಂದಿದ್ದೇ ಇಲ್ಲ. ಹಾಗಾಗಿ, ಆ ವರ್ಗಗಳ ಕೆವೈಸಿ ಲಭ್ಯವಾಗಿಲ್ಲ. ಪರಿಣಾಮ ಅಮಾನತುಗೊಂಡಿವೆ. ಹಲವು ರದ್ದು ಕೂಡ ಆಗಿವೆ. ಗೃಹಲಕ್ಷ್ಮೀ ಯೋಜನೆ ಘೋಷಿಸಿದ ಬೆನ್ನಲ್ಲೇ ಎಪಿಎಲ್‌ ಕಾರ್ಡ್‌ಗಳಿಗೆ ಮಹತ್ವ ಬಂದಿದ್ದು, ಸೇವಾ ಕೇಂದ್ರಗಳಿಗೆ ನೋಂದಣಿಗಾಗಿ ಧಾವಿಸುತ್ತಿದ್ದಾರೆ. ಆದರೆ, ಅಲ್ಲಿ ರದ್ದುಗೊಂಡಿರುವುದು ಅಥವಾ ಅಮಾನತುಗೊಂಡಿರುವುದನ್ನು ತಿಳಿದು ನಿರಾಸೆ ಉಂಟಾಗುತ್ತಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 25 ಲಕ್ಷ ಎಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿದ್ದು, ಅಂದಾಜು 86 ಲಕ್ಷ ಸದಸ್ಯರಿದ್ದಾರೆ. ಇದರಲ್ಲಿ ಹಲವರು ಈಗ ತಾಲ್ಲೂಕು ಕಚೇರಿಗಳಿಗೆ ಅಪ್‌ಡೇಟ್‌ ಮಾಡಲು ಧಾವಿಸುತ್ತಿದ್ದಾರೆ. ಇನ್ನೂ ಕೆಲವರಿಗೆ ಇದರ ಬಗ್ಗೆ ಮಾಹಿತಿಯೂ ಇಲ್ಲ.

ಕೆಲವರು ಸಕಾಲದಲ್ಲಿ ಅಪ್‌ಡೇಟ್‌ ಮಾಡಿಕೊಳ್ಳದೆ ಇರುವುದರಿಂದ ಅಂತಹ ಎಪಿಎಲ್‌ ಕಾರ್ಡ್‌ಗಳು ಅಮಾನತುಗೊಂಡಿರುವುದು ನಿಜ. ಅವುಗಳನ್ನು ಮತ್ತೆ ಸಕ್ರಿಯಗೊಳಿಸಲು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ. ಆತಂಕಪಡುವ ಅಗತ್ಯವಿಲ್ಲ.
– ಎಂ. ಕನಗವಳ್ಳಿ, ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ

Advertisement

Udayavani is now on Telegram. Click here to join our channel and stay updated with the latest news.

Next