Advertisement

ಕಾಶ್ಮೀರಿಗರ ರಕ್ತ ರಸ್ತೆಯಲ್ಲಿ ಹರಿಯುತ್ತಿದೆ;ನೂತನ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಪ್ರಲಾಪ

02:23 AM Apr 12, 2022 | Team Udayavani |

ಇಸ್ಲಾಮಾಬಾದ್‌: ಕಾಶ್ಮೀರದ ಜನರ ರಕ್ತ ಅಲ್ಲಿನ ರಸ್ತೆಗಳಲ್ಲಿ ಹರಿಯುತ್ತಿದೆ. 2019ರಲ್ಲಿ ಭಾರತ ಸರಕಾರ ಕಾಶ್ಮೀರದ 370ನೇ ವಿಧಿ ರದ್ದು ಪಡಿಸಿದ್ದಕ್ಕೆ ನಮ್ಮಿಂದ ರಾಜತಾಂತ್ರಿಕವಾಗಿ ಪ್ರತಿರೋಧ ವ್ಯಕ್ತವೇ ಆಗಲಿಲ್ಲ…

Advertisement

– ಇದು ಪಾಕಿಸ್ಥಾನ ಪ್ರಧಾನಿ ಶಹಬಾಜ್‌ ಷರೀಫ್ ಅವರ ಮೊದಲ ಮಾತುಗಳು. ಈ ಮೂಲಕ ಪಾಕಿಸ್ಥಾನದ ಆಡಳಿತಗಾರರಿಗೆ ಕಾಶ್ಮೀರ ವಿಚಾರ ಪ್ರಸ್ತಾವ ಮಾಡದೆ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂಬ ಹಿಂದಿನ ಪ್ರಧಾನಿಗಳ ಕ್ರಮವನ್ನೇ ನೂತನ ಪ್ರಧಾನಿ ಮುಂದುವರಿಸಿದಂತಾಗಿದೆ.

ಆಯ್ಕೆಯ ವಿಚಾರವಲ್ಲ
ನೆರೆಹೊರೆಯವರು ಎಂದರೆ ಆಯ್ಕೆಯ ವಿಚಾರ ಅಲ್ಲ ಎಂದಿದ್ದಾರೆ ಪಾಕಿಸ್ಥಾನದ ನೂತನ ಪ್ರಧಾನಿ. ಹೀಗಾಗಿ ಇರುವ ನೆರೆಹೊರೆಯವರ ಜತೆಗೆ ಇದ್ದು ಜೀವಿಸಬೇಕು ಎಂಬ ವೈರಾಗ್ಯದ ಮಾತುಗಳನ್ನೂ ಆಡಿದ್ದಾರೆ. ಭಾರತದ ಜತೆಗೆ ಉತ್ತಮ ಸಂಬಂಧ ಬಯಸುತ್ತೇವೆ. ಆದರೆ ಕಾಶ್ಮೀರ ವಿವಾದ ಬಗೆಹರಿಯದೆ ಶಾಂತಿ ಸಾಧ್ಯವಿಲ್ಲ ಎಂದಿದ್ದಾರೆ.

ಕಾಶ್ಮೀರ ವಿಚಾರವಾಗಿ ಹೋರಾಟ ಮಾಡುವ ನಮ್ಮ ಸಹೋದರ ಸಹೋದರಿಯರಿಗೆ ನಮ್ಮ ಸರಕಾರ ರಾಜತಾಂತ್ರಿಕವಾಗಿ ಮತ್ತು ನೈತಿಕವಾಗಿ ಬೆಂಬಲ ಮುಂದುವರಿಸಲಿದೆ ಎಂದಿರುವ ಶಹಬಾಜ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಿಗರ ಸಮಸ್ಯೆ ಆಲಿಸಬೇಕು ಎಂದಿದ್ದಾರೆ.

ಭ್ರಷ್ಟರು, ಕಳ್ಳರ ಜತೆಗೆ ಸೇರುವುದಿಲ್ಲ : ಇಮ್ರಾನ್‌
ಸಂಸತ್‌ನಲ್ಲಿ ಭ್ರಷ್ಟರು ಮತ್ತು ಕಳ್ಳರ ಜತೆಗೆ ಸೇರುವುದಿಲ್ಲ. ಹೀಗಾಗಿ ನಾನು ಸೇರಿದಂತೆ ಪಿಟಿಇ ಪಕ್ಷದ ಸಂಸದರು ರಾಜೀನಾಮೆ ನೀಡುತ್ತಿದ್ದೇವೆ ಎಂದು ಇಮ್ರಾನ್‌ ಖಾನ್‌ ಪ್ರಕಟಿಸಿದ್ದಾರೆ. ಹೊಸ ಪ್ರಧಾನಿ ಆಯ್ಕೆಯ ಮುನ್ನ ಖಾನ್‌, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಷಾ ಮೆಹಮೂದ್‌ ಖುರೇಷಿ ಸಹಿತ ಹಲವರು ರಾಜೀನಾಮೆ ನೀಡಿದ್ದಾರೆ.

Advertisement

ಮೋದಿ ಅಭಿನಂದನೆ
ಪಾಕಿಸ್ಥಾನದ ನೂತನ ಪ್ರಧಾನಿ ಶಹಬಾಜ್‌ ಷರೀಫ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಪಾಕ್‌ ಜತೆಗೆ ಶಾಂತಿ ಮತ್ತು ಸಹಬಾಳ್ವೆ, ಉಗ್ರರಿಂದ ಮುಕ್ತವಾದ ವಾತಾವರಣವನ್ನು ಹೊಂದಲು ಭಾರತ ಬಯಸುತ್ತದೆ ಎಂದು ಮೋದಿಯವರು ಟ್ವೀಟ್‌ ಮಾಡಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next