Advertisement

ಪಿಂಚಣಿ, ಬಡ್ಡಿ ಹಣಕ್ಕಾಗಿ ನಿವೃತ್ತ ಪ್ರಾಂಶುಪಾಲರ ಅಲೆದಾಟ; ಶಿಕ್ಷಣ ಇಲಾಖೆ ನಿರ್ಲಕ್ಷ್ಯ

10:06 AM Feb 14, 2023 | Team Udayavani |

ಉಡುಪಿ: ನಿವೃತ್ತರಾಗಿ 21 ವರ್ಷ ಕಳೆದರೂ ಅಲೆವೂರಿನ ರಘುಪತಿ ಭಟ್‌ ಅವರಿಗೆ ನಿವೃತ್ತಿ ಅನಂತರದ ಸೌಲಭ ಸಿಕ್ಕಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೀಗಾಗಿದ್ದು, ಸವಲತ್ತು ಪಡೆಯಲು ನಿತ್ಯ ಅಲೆದಾಡುವಂತಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ್‌ ಶಾನುಭಾಗ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಈ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಅವಗಣಿಸಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಪ್ಪು ಅಫಿದವಿತ್‌ ನೀಡುವ ಮೂಲಕ ನ್ಯಾಯಾಲಯದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಕಾರ್ಕಳ ವೆಂಕಟರಮಣ ಪ.ಪೂ.ಕಾಲೇಜಿನಲ್ಲಿ 33 ವರ್ಷ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ 2002ರಲ್ಲಿ ರಘುಪತಿ ಭಟ್‌ ನಿವೃತ್ತರಾಗಿದ್ದರು. ಅವಶ್ಯ ದಾಖಲೆಗಳನ್ನು ಪಿಂಚಣಿ ಇಲಾಖೆಗೆ ಕಳುಹಿಸುವಂತೆ ನಿವೃತ್ತಿಗೆ 3 ತಿಂಗಳ ಮೊದಲೇ ಕಾಲೇಜು ಆಡಳಿತ ಮಂಡಳಿಗೆ ವಿನಂತಿಸಿದ್ದರು. ಆದರೆ ಇಲಾಖೆಯ ನಿರ್ಲಕ್ಷದಿಂದ 15 ವರ್ಷ ಗಳ ಪಿಂಚಣಿ ಹಣ ಮಂಜೂರು ಆಗಲೇ ಇಲ್ಲ. ಸಾಕಷ್ಟು ಬಾರಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸಿ ಸತಾಯಿಸಿದ್ದಾರೆ. ಅನಂತರ ಜಿಲ್ಲಾ ನ್ಯಾಯಾಲಯ ಹೈಕೋರ್ಟ್‌ ವರೆಗೂ ಸುದೀರ್ಘ‌ ನ್ಯಾಯಾಂಗ ಹೋರಾಟ ನಡೆಸಿ 2017ರಲ್ಲಿ 177 ತಿಂಗಳ ಪಿಂಚಣಿಯನ್ನು ಒಂದೆ ಗಂಟಿನಲ್ಲಿ ಸಂದಾಯ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಬಡ್ಡಿಹಣ ಕೊಡಲೇ ಇಲ್ಲ
ಪಿಂಚಣಿ ಮೊತ್ತವನ್ನು ತಡವಾಗಿ ಪಾವತಿಸಿರುವುದಕ್ಕೆ ನಿಯಮಾನುಸಾರ ಇಲಾಖೆ 15 ವರ್ಷಗಳ ಬಡ್ಡಿ ಸೇರಿಸಬೇಕಿತ್ತು. ಇದನ್ನು ಕೇಳಿದಾಗ ಪಿಂಚಣಿ ಇಲಾಖೆ ಅವರಲ್ಲಿ ವಿಚಾರಿಸಿ ದಾಗ ಪಿಂಚಣಿ ಬಾಕಿ ನೀಡಿದ್ದೇವೆ. ಇದರ ಬಡ್ಡಿಗಾಗಿ ನೀವು ಶಿಕ್ಷಣ ಇಲಾಖೆಯನ್ನೇ ಸಂಪರ್ಕಿಸಬೇಕು ಎಂದು ಹೇಳಿದ್ದರು.

ಅಸಹಾಯಕರಾದ ಭಟ್‌ 2 ವರ್ಷಗಳ ಕಾಲ ಪಿಯುಸಿ ಬೋರ್ಡ್‌ನ ನಿರ್ದೇಶಕರಿಂದ ಹಿಡಿದು ಶಿಕ್ಷಣ ಇಲಾಖೆ ಕಾರ್ಯದರ್ಶಿ ವರೆಗೆ ಹತ್ತಾರು ಪತ್ರ ಬರೆದರೂ ಯಾರೂ ಉತ್ತರಿಸಿಲ್ಲ. 2019ರಲ್ಲಿ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದರು. 18 ತಿಂಗಳ ವಿಚಾರಣೆ ನಡೆಸಿದ ಕೋರ್ಟ್‌ 2021ರ ಜನವರಿಯಲ್ಲಿ ತೀರ್ಪು ನೀಡಿ ಪಿಂಚಣಿ ಬಾಕಿ ಅವಧಿಗೆ ಶೇ. 8ರಂತೆ ಬಡ್ಡಿ ನೀಡುವಂತೆ ಆದೇಶಿಸಿತು. ಬಡ್ಡಿ ಪಾವತಿಗೆ 4 ವಾರಗಳ ಗಡುವು ವಿಧಿಸಿತು. ಮಾತ್ರವಲ್ಲ ಸರಕಾರವು ಮೊತ್ತವನ್ನು ವಿಳಂಬಕ್ಕೆ ಕಾರಣರಾದವರಿಂದಲೇ ವಸೂಲು ಮಾಡುವಂತೆ ನಿರ್ದೇಶನ ನೀಡಿತು.

Advertisement

ಬಂಧನ ಭೀತಿಯಿಂದ ಎಚ್ಚೆತ್ತ ಅಧಿಕಾರಿಗಳು
ಕೋರ್ಟ್‌ ತೀರ್ಪು ನೀಡಿ 9 ತಿಂಗಳು ಕಳೆದರು ಆದೇಶ ಪಾಲನೆಯಾಗಲೇ ಇಲ್ಲ. ಈ ಬಗ್ಗೆ ನ್ಯಾಯಾಂಗ ನಿಂದನೆಯ ದಾವೆ ಹೂಡಲಾಯಿತು. ನ್ಯಾಯಾಲಯಕ್ಕೆ ಹಾಜರಾದ ಸರಕಾರಿ ವಕೀಲರು ಹಣಕಾಸು ಸಚಿವಾಲಯದಿಂದ ಒಪ್ಪಿಗೆ ಪಡೆಯಲು 3 ವಾರಗಳ ಅವಧಿ ಕೇಳಿದರು. ಗಡುವು ಮುಗಿದು 10 ತಿಂಗಳಾದರೂ ಬಡ್ಡಿ ಪಾವತಿಸಿರಲಿಲ್ಲ. 2022ರಲ್ಲಿ ಈ ಬಗ್ಗೆ ಕೋರ್ಟ್ ಗೆ ಮೆಮೊ ಸಲ್ಲಿಸಲಾಯಿತು. ಇಲಾಖೆಯ ಅಧಿಕಾರಿಗಳು ಬಂಧನ ಆದೇಶದ ಭೀತಿಯಿಂದ ತಮ್ಮದೇ ರೀತಿಯಲ್ಲಿ ಲೆಕ್ಕಹಾಕಿ ನ್ಯಾಯವಾಗಿ ನೀಡಬೇಕಾದ ಬಡ್ಡಿಮೊತ್ತದ ಅರ್ಧಕ್ಕಿಂತಲೂ ಕಡಿಮೆ ಹಣವನ್ನು ಅವರ ಖಾತೆಗೆ ಜಮಾ ಮಾಡಿದ್ದಾರೆ. ಅವರಿಗೆ ಪೂರ್ಣ ಮೊತ್ತ ಸಿಗುವವರೆಗೆ ಪ್ರತಿಷ್ಠಾನ ಈ ಹೋರಾಟದಲ್ಲಿ ಸಂಪೂರ್ಣ ಸಹಕಾರ ಮುಂದುವರಿಸಲಿದೆ ಎಂದು ಶ್ಯಾನುಭಾಗ್‌ ಹೇಳಿದರು.

80 ವರ್ಷದ ನಾನು 21 ವರ್ಷಗಳ ಹೋರಾಟ ನಡೆಸಿದ್ದೇನೆ. ಸಾಯುವವರೆಗೂ ನ್ಯಾಯಾಲಯಕ್ಕೆ ದಾವೆ ದಾಖಲಿಸುತ್ತಲೇ ಇರಬೇಕೇ ಎಂದು ರಘುಪತಿ ಭಟ್‌ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ತಪ್ಪಿತಸ್ಥರಿಂದ ಹಣ ವಸೂಲಾಗಲಿ
ನ್ಯಾಯಾಲಯದ ಆದೇಶ ಪಾಲನೆ ಕಾರ್ಯಾಂಗದ ಕರ್ತವ್ಯ. ಆದೇಶ ಪಡೆದ ಮೇಲೂ ಪಾಲನೆಯಾಗುತ್ತಿಲ್ಲ. ಬಡ್ಡಿಯ ಮೊತ್ತ ಹಾಗೂ ದಾವೆಗೆ ತಗಲಿದ ಖರ್ಚನ್ನು ಈ ಅನ್ಯಾಯಕ್ಕೆ ಕಾರಣರಾದವರಿಂದ ವಸೂಲಿ ಮಾಡಬೇಕು ಎಂದು ಕೋರ್ಟ್‌ ಸೂಚಿಸಿದೆ. ಪ್ರತಿಷ್ಠಾನ ಈಗಾಗಲೇ ಈ ಸಮಸ್ಯೆಗೆ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿ ಎಷ್ಟು ಕಾರಣ ಎಂಬ ತನಿಖೆ ನಡೆಸುತ್ತಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲೂ ಅರ್ಜಿ ಸಲ್ಲಿಸಿದ್ದೇವೆ. ಅಧಿಕಾರಿಗಳು, ಮಾಡಿರುವ ಅನ್ಯಾಯಕ್ಕೆ ಜನರ ತೆರಿಗೆ ಹಣ ಏಕೆ ಪೋಲಾಗಬೇಕು? ಅನ್ಯಾಯ ಮಾಡಿದವರು ತಕ್ಕ ಬೆಲೆ ತೆರಲೇಬೇಕು ಎಂದು ರವೀಂದ್ರನಾಥ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next