ಮಾಗಡಿ: ಕಾಡಂಚಿನಲ್ಲಿರುವ ಗೊಲ್ಲರಹಟ್ಟಿಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ತಾಲೂಕು ಆಡಳಿತ ಇನ್ನೂ ಲೋಕಸಭೆ ಚುನಾವಣೆ ಗುಂಗಿನಿಂದ ಹೊರಬಂದಿಲ್ಲ. ಬೇಸಿಗೆಯ ಬಿಸಿಲಿಗೆ ಅಂತರ್ಜಲ ಕುಸಿದಿದೆ. ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಮಾಗಡಿ ತಾಲೂಕಿನ ತಿಪ್ಪಸಂದ್ರ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ 6 ಕುಡಿಯುವ ನೀರಿನ ಮಿನಿ ಟ್ಯಾಂಕ್‌ಗಳಿವೆ. ಯಾವುದರಲ್ಲೂ ನೀರಿಲ್ಲ, ಎಲ್ಲಾ ಟ್ಯಾಂಕ್‌ಗಳು ಖಾಲಿ, ಖಾಲಿ. ದಿನನಿತ್ಯ ಕೊಡ ಹಿಡಿದು ನೀರಿಗಾಗಿ ರೈತರ ಹೊಲ, ಗದ್ದೆ, ತೋಟಗಳನ್ನು ಅವಲಂಬಿಸಬೇಕಿದೆ. ಈ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಬೇಸಿಗೆ ಕಾಲದಲ್ಲಿ ನೀರಿಗಾಗಿ ಅಲೆಯುವಂತ ಪರಿಸ್ಥಿತಿ ಎದುರಿಸುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಓಟಿಗಾಗಿ ಎಡತಾಕುವ ಮಂದಿಗೇನು ಕಡಿಮೆಯಿಲ್ಲ. ನೀರು ಸಮಸ್ಯೆ ಎದುರಿಸುತ್ತಿದ್ದರೂ ಪರಿಹಾರ ಹುಡುವ ಕೆಲಸ ಮಾಡುತ್ತಿಲ್ಲ. ಇತ್ತ ಅಧಿಕಾರಿಗಳು ಸಹ ಅಗತ್ಯ ನೀರಿನ ಸೌಕರ್ಯ ಕಲ್ಪಿಸುವಲ್ಲಿ ಮೀನಮೇಶ ಎಣಿಸುತ್ತಿದ್ದಾರೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನಿ ನೀರು ತುಂಬಿಸಿಲ್ಲ: ಕಳೆದ 10 ವರ್ಷಗಳ ಹಿಂದೆ ಜನಸಂಖ್ಯೆಯ ಆಧಾರದ ಮೇಲೆ ಇಲ್ಲಿ ನೀರಿನ ಮಿನಿ ಟ್ಯಾಂಕ್‌ಗಳನ್ನು ಸ್ಥಾಪನೆ ಮಾಡಿದ್ದರೂ ಇಲ್ಲಿಯವರಿಗೂ ಒಂದು ಹನಿ ನೀರನ್ನು ತುಂಬಿಸಿಲ್ಲ. ಅಧಿಕಾರಿಗಳಿಂದ ಎನ್‌ಒಸಿ ಪಡೆದು ಬಿಲ್ ಮಾಡಿಕೊಂಡು ಜೇಬು ತುಂಬಿಸಿಕೊಂಡಿದ್ದು ಬಿಟ್ಟರೆ, ಜನರಿಗೆ ನೀರು ಕೊಡುವ ಪ್ರಯತ್ನ ಮಾಡುತ್ತಿಲ್ಲ. ಇಲ್ಲಿನ ಸಾರ್ವಜನಿಕರು ಫ್ಲೋರೈಡ್ ನೀರು ಕುಡಿದು ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ಎರಡು- ಮೂರು ವರ್ಷಗಳ ಹಿಂದೆಯಷ್ಟೆ ಕೊಳವೆ ಬಾವಿ ಕೊರೆಸಲಾಗಿದೆ. ಅಲ್ಲಿಂದ ಇಲ್ಲಿಯವರಿಗೂ ಪಂಪ್, ಮೋಟರ್ ಅಳವಡಿಸಿಲ್ಲ. ಪಂಪ್, ಮೋಟರ್ ಅಳವಡಿಸಲು ಅನುದಾನವಿಲ್ಲ ಎಂಬ ಹಾರಿಕೆ ಉತ್ತರ ಪಂಚಾಯ್ತಿ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.
8 ವರ್ಷದಿಂದ ಹುದ್ದೆ ಖಾಲಿ: ಗೊಲ್ಲರಹಟ್ಟಿ ಇತರೆ ಭಾಗಗಳಿಗೆ ನೀರು ಬಿಡುವ ನೀರುಗಂಟಿ ನಿವೃತ್ತಿಯಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಯಾರನ್ನು ನೇಮಿಸಿಲ್ಲ. ಕಳೆದ 8 ವರ್ಷಗಳಿಂದ ಖಾಲಿ ಇರುವ ಹುದ್ದೆಗೆ ನೇಮಕ ಮಾಡಲು ಇನ್ನೂ ಕ್ರಮ ಕೈಗೊಂಡಿಲ್ಲ. ನಿವೃತ್ತಿಯಾಗಿರುವ ನೀರುಗಂಟಿಗೆ ವೇತನವೂ ಸಹ ನೀಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನಾದರೂ ಪಂಚಾಯ್ತಿ ಪಿಡಿಒ ಎಚ್ಚೆತ್ತು ನೀರುಗಂಟಿ ನೇಮಕ ಮಾಡಬೇಕು. ಗೊಲ್ಲರಹಟ್ಟಿ ನೀರಿನ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಗ್ರಾಮದ ಜನರ ದಾಹ ಇಂಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
● ತಿರುಮಲೆ ಶ್ರೀನಿವಾಸ್