‘ಒಮ್ಮೊಮ್ಮೆ ಹೀಗೆಲ್ಲಾ ಆಗಿಬಿಡುತ್ತೆ…’
– ನಿರ್ದೇಶಕ ಎಂಜಿಆರ್ ಹೀಗೆ ಹೇಳುತ್ತಾ ಹೋದರು. ಅವರು ಹಾಗೆ ಹೇಳಿದ್ದು ತಮ್ಮ ಚೊಚ್ಚಲ ಚಿತ್ರ ‘ಶೈಬ್ಯ’ ಬಗ್ಗೆ. ಮೂಲತಃ ಹೈದರಾಬಾದ್‌ನವರಾದ ಎಂಜಿಆರ್ ಅವರಿಗೆ ಇದು ಕನ್ನಡದ ಮೊದಲ ಸಿನಿಮಾ. ಇಲ್ಲೊಂದು ಚಿತ್ರ ಮಾಡಬೇಕು ಅಂತ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಇಲ್ಲಿದ್ದು, ಹಲವರ ಬಳಿ ಕೆಲಸಕ್ಕಾಗಿ ಅಲೆದಾಡಿ, ಕೊನೆಗೆ ಗೆಳೆಯರೊಬ್ಬರ ಮೂಲಕ ಒಂದು ಕಿರುಚಿತ್ರಕ್ಕೆ ಅಣಿಯಾಗುವ ಅವರಿಗೆ, ಸಣ್ಣ ಸಿನಿಮಾ ಯಾಕೆ, ದೊಡ್ಡ ಚಿತ್ರವನ್ನೇ ಮಾಡಿಬಿಡೋಣ ಎಂಬ ಸಲಹೆ ಮತ್ತು ಸೂಚನೆ ಸಿಕ್ಕಿದ್ದೇ ತಡ, ಅವರು ‘ಶೈಬ್ಯ’ ಚಿತ್ರಕ್ಕೆ ಕೈ ಹಾಕುತ್ತಾರೆ. ಅದೀಗ ಪೂರ್ಣಗೊಂಡು, ತೆರೆಗೆ ಬರಲು ಅಣಿಯಾಗಿದೆ. ಆ ಬಗ್ಗೆ ಹೇಳಿಕೊಳ್ಳಲೆಂದೇ ಪತ್ರಕರ್ತರ ಎದುರು ಬಂದಿದ್ದ ನಿರ್ದೇಶಕ ಎಂಜಿಆರ್, ಹೇಳಿದ್ದಿಷ್ಟು.
‘ಒಂದು ಕಿರುಚಿತ್ರ ಮಾಡೋಣ ಅಂತ ಮುಂದಾದೆ. ಅದಕ್ಕೆ ಮುಂದಾಗಿದ್ದು, ಹೀರೋ ಸನ್ಮಿತ್ ವಿಹಾನ್. ಕಥೆ ಕೇಳಿ, ಸಿನಿಮಾ ಮಾಡೋಣ ಅಂತ ಹೇಳಿದರು. ಚಿತ್ರವಾಯ್ತು. ಇದಕ್ಕೂ ಮುನ್ನ ಸಾಕಷ್ಟು ನಿರ್ಮಾಪಕರ ಬಳಿ ಹೋದೆ. ಆ ಹೀರೋಗೆ ಕಥೆ ಹೇಳಿ, ಒಪ್ಪಿಸಿ ಅಂದರು. ಅವರು ಹೇಳಿದ ಹೀರೋ ಬಳಿ ಹೋದರೆ, ನಿರ್ಮಾಪಕರ ಜೊತೆ ಬನ್ನಿ ಅಂದರು. ಹೀಗೆ ಅಲೆದಾಡುತ್ತಲೇ ವರ್ಷಗಳು ಕಳೆದವು. ಬೇಸರವಾಯ್ತು. ಮುಂದೇನು ಮಾಡಬೇಕು ಎಂದು ಗೊತ್ತಾಗದ ಸಂದರ್ಭದಲ್ಲಿ ಗೆಳೆಯರೊಬ್ಬರು ಬಂದು ಈ ಚಿತ್ರ ಆಗೋಕೆ ಕಾರಣರಾದರು. ಇದೊಂದು ರೊಮ್ಯಾಂಟಿಕ್ ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇನ್ನು, ಚಿತ್ರದ ಶೀರ್ಷಿಕೆ ‘ಶೈಬ್ಯ’ ಬಗ್ಗೆ ಎಲ್ಲರಿಗೂ ಪ್ರಶ್ನೆ ಇದೆ. ಇಲ್ಲಿ ಶೈಬ್ಯ ಅಂದರೆ, ನಂಬಿಕೆಗೆ ಅರ್ಹವಾದ ಹೆಂಡತಿ ಎಂದರ್ಥ. ಇಲ್ಲಿ ನಂಬಿಕೆ ಇಡುವಂತಹ ಅಂಶಗಳು ಹೆಚ್ಚಾಗಿವೆ. ಎಲ್ಲರಿಗೂ ಇಷ್ಟವಾಗುವಂತಹ ಚಿತ್ರ ಇದಾಗಲಿದೆ’ ಎಂದರು ಎಂಜಿಆರ್.
ನಾಯಕ ಸನ್ಮಿತ್‌ಗೆ ಇದು ಮೊದಲ ಚಿತ್ರ. ರಂಗಭೂಮಿಯ ಹಿನ್ನೆಲೆ ಇರುವ ಸನ್ಮಿತ್‌ಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಆ ಬಗ್ಗೆ ಹೇಳುವ ಅವರು, ‘ಜೇಬಲ್ಲಿ ಹತ್ತು ರುಪಾಯಿ ಕೂಡ ಇಲ್ಲದ, ಯಾವುದೇ ಕೆಲಸವೂ ಇಲ್ಲದ ಹುಡುಗನೊಬ್ಬ ಸಾಧನೆ ಮಾಡಬೇಕು ಅಂತ ಹೊರಡುತ್ತಾನೆ. ದಾರಿ ಮಧ್ಯೆ ಏನೋ ಒಂದು ಘಟನೆ ನಡೆಯುತ್ತದೆ. ಅಲ್ಲಿಂದ ಕಥೆ ಶುರುವಾಗುತ್ತೆ. ಅವನು ತನ್ನ ಗುರಿ ಮುಟ್ಟುತ್ತಾನೋ, ಇಲ್ಲವೋ ಅನ್ನೋದೇ ಕಥೆ’ ಎಂದರು ಸನ್ಮಿತ್.ನಾಯಕಿ ಮೇಘಶ್ರೀ ಗೌಡ ಅವರಿಗೂ ಇದು ಮೊದಲ ಅನುಭವ. ಅವರಿಲ್ಲಿ ಮಾಡರ್ನ್ ಹುಡುಗಿಯ ಪಾತ್ರ ನಿರ್ವಹಿಸಿದ್ದಾರಂತೆ. ಸದಾ ಕೆಲಸದ ಮೇಲೆ ಫೋಕಸ್ ಮಾಡುವ ಹುಡುಗಿಯ ಲೈಫಲ್ಲಿ ಲವ್ವು, ಮದುವೆ ಎಲ್ಲವೂ ಬರುತ್ತೆ. ತುಂಬಾ ಬೋಲ್ಡ್ ಹುಡುಗಿಯಾಗಿರುವ ಆಕೆಯ ಬದುಕಲ್ಲಿ ಒಂದಷ್ಟು ತಿರುವುಗಳು ಎದುರಾಗುತ್ತವೆ. ಅದೇ ಚಿತ್ರದ ಸಸ್ಪೆನ್ಸ್’ ಎಂಬುದು ಮೇಘಶ್ರೀ ಗೌಡ ಮಾತು.
ಮತ್ತೂಬ್ಬ ನಾಯಕಿ ಮಿಲನಾ ರಮೇಶ್ ಅವರಿಗೆ ಇದು ಮೊದಲ ಚಿತ್ರ. ಅವರಿಗಿಲ್ಲಿ ಮುಗ್ಧ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. ಕೆಲವರಿಂದ ಅವರಿಗೆ ಏನೆಲ್ಲಾ ಮೋಸ ಆಗುತ್ತೆ ಎಂಬುದು ಕಥೆಯಂತೆ.
‘ಕುರಿ’ ಸುನೀಲ್ ಅವರಿಗಿಲ್ಲಿ ಹಾಸ್ಯ ಪಾತ್ರ ಸಿಕ್ಕಿದೆಯಂತೆ. ಈವರೆಗೆ 112 ಚಿತ್ರಗಳಲ್ಲಿ ನಟಿಸಿರುವ ಕುರಿ ಸುನೀಲ್ಗೆ ‘ಶೈಬ್ಯ’ ಒಂದು ಹೊಸ ಬಗೆಯ ಚಿತ್ರವಂತೆ. ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇರಲಿ’ ಎಂದರು ಸುನೀಲ್.
ಯಶೋಧ ಸನ್ನಪ್ಪನವರ್ ಈ ಚಿತ್ರದ ನಿರ್ಮಾಪಕರು. ಅವರಿಗೆ ಇದು ಹೊಸ ಚಿತ್ರ. ನಮ್ಮ ಈ ಪ್ರಯತ್ನವನ್ನು ಬೆಂಬಲಿಸಬೇಕು ಎಂದಷ್ಟೇ ಹೇಳಿ ಸುಮ್ಮನಾದರು. ಚಿತ್ರಕ್ಕೆ ನಾಗರಾಜ್ ಮೂರ್ತಿ ಛಾಯಾಗ್ರಹಣವಿದೆ. ಕಾರ್ತಿಕ್ ಶರ್ಮ ಸಂಗೀತವಿದೆ. ಮಣಿ, ರಮೇಶ್ ಇತರರು ‘ಶೈಬ್ಯ’ ಕುರಿತು ಮಾತನಾಡುವ ಹೊತ್ತಿಗೆ ಸಮಯ ಮೀರಿತ್ತು. ಮಾತುಕತೆಗೂ ಬ್ರೇಕ್ ಬಿತ್ತು.