Advertisement

ಸರ್ಕಾರಿ ಆಂಗ್ಲ ಶಾಲೆ ದಾಖಲಾತಿಗೆ ಪರದಾಟ

11:33 AM Jun 11, 2019 | Team Udayavani |

ಕುದೂರು: ಒಂದೆಡೆ ಪೋಷಕರಿಗೆ ಇಂಗ್ಲಿಷ್‌ ವ್ಯಾಮೋಹ, ಮತ್ತೂಂದೆಡೆ ಡೊನೇಷನ್‌ ಹಾವಳಿ. ಶುಲ್ಕ ಎನ್ನುವ ಹೆಸರಿನಲ್ಲಿ ಹಣ ಮಾಡುತ್ತಿರುವ ಖಾಸಗಿ ಶಾಲೆಗಳು. ಇಂತಹ ಸಂದ‌ರ್ಭಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದೆ. ಈ ಪ್ರಯೋಗದಿಂದಾಗಿ ಎಲ್ಲೆಲ್ಲಿ ಸರ್ಕಾರಿ ಇಂಗ್ಲಿಷ್‌ ಶಾಲೆಗಳು ಆರಂಭವಾಗುತ್ತಿದ್ದೆಯೋ ಅಲ್ಲಿ ವಿದ್ಯಾರ್ಥಿಗಳು ಸಾಕು ಸಾಕು ಎನ್ನುವಷ್ಟು ದಾಖಲಾಗುತ್ತಿದ್ದಾರೆ. ಅಲ್ಲದೇ ದಾಖಲಾತಿಗೆ ಪರದಾಡುತಿದ್ದಾರೆ.

Advertisement

ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಒಂದನೇ ತರಗತಿಗೆ ಸೀಟ್ ಖಾಲಿ ಇಲ್ಲ ಎಂದು ಪೋಷಕರನ್ನು ವಾಪಸ್ಸು ಕಳುಹಿಸಲಾಗುತ್ತಿದೆ. ಎಲ್ಕೆಜಿ ತರಗತಿಗೆ ಕೇವಲ 30 ಮಕ್ಕಳಿಗೆ ಮಾತ್ರ ಎಂಬ ಸರ್ಕಾರದ ನಿಯಮವಿದೆ. ಹೆಚ್ಚು ಮಕ್ಕಳು ಸೇರ್ಪಡೆಯಾದರೂ ಎರಡು ವಿಭಾಗ ಮಾಡುವಂತಿಲ್ಲ. 30 ಮಕ್ಕಳು ಸಾಕು ಎಂದು ಕಟ್ಟಪ್ಪಣೆ ಮಾಡಲಾಗಿದೆ. ಆದರೆ, ಕುದೂರು ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಸೇರ್ಪಡೆಯಾಗಲು ಮುಂದೆ ಬಂದಿದ್ದಾರೆ.

80 ಅರ್ಜಿಗಳು ವಿಲೇವಾರಿ: ಒಂದನೇ ತರಗತಿಗೆ ಈಗಾಗಲೇ 80 ಅರ್ಜಿಗಳು ವಿಲೇವಾರಿಯಾಗಿದೆ. ಮಕ್ಕಳನ್ನು ಸೇರಿಸಿಕೊಳ್ಳಲು ಶಾಲೆಯ ಮುಖ್ಯಸ್ಥರು ಮೀನಾಮೇಷ ಎಣಿಸುತ್ತಿದ್ದಾರೆ. ಸಮರ್ಪಕವಾದ ಕೊಠಡಿಗಳ ಅವಶ್ಯಕತೆಯಿದೆ. ಶಿಕ್ಷಕರ ನೇಮಕಾತಿ ಸಮಸ್ಯೆಯಿದೆ. ಹೆಚ್ಚು ಮಕ್ಕಳನ್ನು ಸೇರಿಸಿಕೊಂಡು ಉತ್ತಮ ಶಿಕ್ಷಣ ನೀಡದೆ ಹೋದರೆ ಬರುವ ವರ್ಷಗಳಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಜನರಲ್ಲಿ ಬೇಸರ ಉಂಟಾಗಿ ಮತ್ತೆ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಾರೆ ಎಂಬ ಆತಂಕ ಆರಂಭವಾಗಿದೆ.

ಹೀಗೆ ಹೆಚ್ಚುವರಿ ಬಂದ ಮಕ್ಕಳನ್ನು ಸೀಟು ಖಾಲಿ ಇಲ್ಲ ಎಂದು ವಾಪಸ್ಸು ಕಳುಹಿಸಿದರೆ ಮಕ್ಕಳ ಪೋಷಕರು ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು, ಸಚಿವರಿಂದ ಪೋನ್‌ ಮಾಡಿಸುತ್ತಾರೆ. ಇದರಿಂದಾಗಿ ಸರ್ಕಾರಿ ಶಾಲೆಯ ಶಿಕ್ಷಕರ ಮುಖದಲ್ಲಿ ಸಂತಸ ಮೂಡುತ್ತಿದೆ. ಅಂತೂ ಇಂತೂ ಸರ್ಕಾರಿ ಶಾಲೆಗಳಿಗೂ ಒಳ್ಳೆಯ ಕಾಲ ಬಂತು ಎಂದು ಸಂತೋಷ ಪಡುತ್ತಾರೆ.

ಪ್ರತಿ ಪಂಚಾಯ್ತಿಗೂ ಆಂಗ್ಲ ಶಾಲೆ: ಸದ್ಯಕ್ಕೆ ಮಾಗಡಿ ತಾಲೂಕಿನಲ್ಲಿ ಎರಡು ಶಾಲೆಗಳಿಗೆ ಮಾತ್ರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಎಲ್ಕೆಜಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಇದರಿಂದ ಇತರೆ ಗ್ರಾಮಗಳ ಪೊಷಕರು ಬೆಸರ ವ್ಯಕ್ತಪಡಿಸಿ, ತಾಲೂಕಿಗೆ ಎರಡು ನೀಡಿರುವುದು ಯಾವ ಮೂಲೆಗೂ ಸಾಕಾಗುವುದಿಲ್ಲ. ಕನಿಷ್ಠ ಪಕ್ಷ ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಒಂದರಂತೆ ಆಂಗ್ಲ ಮಧ್ಯಮ ಶಾಲೆ ಆರಂಭಿಸಿದರೆ ಚನ್ನಾಗಿರುತ್ತಿತ್ತು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಪೋಷಕರು ಅಗ್ರಹಿಸಿದ್ದಾರೆ.

Advertisement

ಯೋಗ್ಯ ಶಿಕ್ಷಕರ ನೇಮಕ: ಎನ್‌ವಿಟಿ ತರಬೇತಿ ಹೊಂದಿದ ಆಯಾ ಗ್ರಾಮದ ಪ್ರತಿಭಾವಂತ ನಿರುದ್ಯೋಗಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅವರು ಆ ಗ್ರಾಮದಲ್ಲಿ ಲಭ್ಯವಿಲ್ಲದೇ ಹೋದರೆ ಇತರೆ ಗ್ರಾಮದ ಜನರು ಅರ್ಜಿ ಹಾಕಿಕೊಳ್ಳಬಹುದು. ಪ್ರತಿಭೆಯ ಮಾನದಂಡದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಶಿಕ್ಷಕಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಸೇವಕಿಯನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಆಯಾ ಶಾಲೆಯ ಮುಖ್ಯಸ್ಥರಿಗೆ ವಹಿಸಲಾಗಿದೆ. ಅವರು ಎಸ್‌ಡಿಎಂಸಿ ಸದಸ್ಯರೊಂದಿಗೆ ಚರ್ಚಿಸಿ ಯೋಗ್ಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು.

● ಕೆ.ಎಸ್‌.ಮಂಜುನಾಥ್‌ ಕುದೂರು

Advertisement

Udayavani is now on Telegram. Click here to join our channel and stay updated with the latest news.

Next