ಕೋಲಾರ: ನಗರದ ಸರ್ಕಾರಿ ಕಚೇರಿಗಳು, ಜನನಿಬಿಡ ರಸ್ತೆಗಳ ಬದಿಯ ಗೋಡೆಗಳ ಮೇಲೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಬಣ್ಣದ ಚಿತ್ತಾರ ಗಳನ್ನು ಬಿಡಲಾಗಿದೆ. ಇದು ನಾಗರಿಕರ ಗಮನ ಸೆಳೆಯುತ್ತಿದ್ದು, ನಗರದ ಅಂದವನ್ನು ಹೆಚ್ಚಿಸಿವೆ. ಮೈಸೂರಿನಿಂದ ಆಗಮಿಸಿದ್ದ ಚಿತ್ರಕಾರರು ಮಂಗಳವಾರ ನಗರಸಭೆಯ ಮುಂಭಾಗದ ಗೋಡೆಗಳ ಮೇಲೆ ಸ್ವಚ್ಛತೆಯ ಅರಿವು ಮೂಡಿಸುವ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಾಗರಿಕರ ಸಹಕಾರ ಅಗತ್ಯ ಕೋಲಾರ ನಗರ ಸಭೆಯು ಈಗಾಗಲೇ ಸ್ವಚ್ಛ ಭಾರತ ಮಿಷನ್‌ನಡಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ನಗರದ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿದೆ. ಇದು ನಗರಸಭೆಯಿಂದ ಮಾತ್ರ ಸಾಧ್ಯವಿಲ್ಲ, ನಾಗರಿಕರೂ ಕೈ ಜೋಡಿಸಿದಾಗ ಮಾತ್ರವೇ ಸಂಪೂರ್ಣ ಸ್ವಚ್ಛತೆ ಸಾಧ್ಯ ಎಂಬುದನ್ನು ಅರಿತು ಗೋಡೆ ಬರಹ, ಅರಿವು ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದೆ.
ವಿವಿಧ ಕಾರ್ಯಕ್ರಮ: ಸ್ವಚ್ಛ ಭಾರತ ಮಿಷನ್ ಯೋಜನೆಯ ಮಾಹಿತಿ ಶಿಕ್ಷಣ ಹಾಗೂ ಸಂವಹನ (ಐಇಸಿ) ಮೂಲಕ ಈ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ನಗರದಾದ್ಯಂತ ವರ್ಣರಂಜಿತ ಆಕರ್ಷಕ ಗೋಡೆ ಬರಹ, ಶಾಲಾ ಮಕ್ಕಳನ್ನೊಳಗೊಂಡಂತೆ ಜಾಥಾ, ಆಟೋ ಪ್ರಚಾರ, ಕರಪತ್ರಗಳ ವಿತರಣೆ, ವಾರ್ಡ್ ವಾರು ಸ್ವಚ್ಛತಾ ಅಭಿಯಾನ, ಶಾಲಾ ಮಕ್ಕಳಿಗೆ ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಗಳ ಪೈಕಿ ಮೊದಲಿಗೆ ವರ್ಣರಂಜಿತ ಗೋಡೆ ಬರಹ ಗಳಿಗೆ ಚಾಲನೆ ನೀಡಲಾಗಿದ್ದು, ಹಂತ ಹಂತವಾಗಿ ಇನ್ನುಳಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಗ್ರೀನ್ ಗ್ರಾಮೀಣ: ಈಗಾಗಲೇ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಮಿಷನ್ ಐಇಸಿ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿರುವ ಗ್ರೀನ್ ಗ್ರಾಮೀಣ ಸ್ವಯಂಸೇವಾ ಸಂಸ್ಥೆಯು ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಐಇಸಿ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿದೆ. ಈ ಸಂಸ್ಥೆಯು ಈಗಾಗಲೇ ಮೈಸೂರು, ಚಾಮರಾಜನಗರ, ಮಂಡ್ಯ, ಮಳವಳ್ಳಿ ಮತ್ತಿತರ ಕಡೆಗಳಲ್ಲಿ ಇದೇ ರೀತಿಯ ಸ್ವಚ್ಛ ಭಾರತ ಮಿಷನ್ ಐಇಸಿ ಕಾರ್ಯಕ್ರಮ ಆಯೋಜಿಸಿರುವ ಅನುಭವ ಹೊಂದಿದೆ. ಕೋಲಾರದಲ್ಲಿ ಈ ಎನ್‌ಜಿಒ ಪರವಾಗಿ ಮಹದೇವ್ ಹಾಗೂ ಶಿವರಾಂ ಕಾರ್ಯಕ್ರಮದ ಸಂಚಾಲಕ ಅನುಷ್ಠಾನಾಧಿಕಾರಿಗಳಾಗಿದ್ದಾರೆ.
ಈವರೆಗೂ ಕೋಲಾರ ನಗರದ ಬಹುತೇಕ ಗೋಡೆಗಳು ಸಂಘ ಸಂಸ್ಥೆಗಳ ಬರವಣಿಗೆಗಳು, ಬಣ್ಣ ಗೆಟ್ಟಿರುವಂತದ್ದು, ಬೇಕಾಬಿಟ್ಟಿಯಾಗಿ ಪೋಸ್ಟರ್ ಮೆತ್ತಿಸುವಂತದ್ದು ಕಾಣಿಸುತ್ತಿತ್ತು. ಇದೀಗ ನಗರಸಭೆಯ ಸ್ವತ್ಛ ಭಾರತ ಮಿಷನ್ ಯೋಜನೆಯಡಿ ವರ್ಣರಂಜಿತ ಸ್ವಚ್ಛತೆಯ ಅರಿವು ಮೂಡಿಸುವ ಅರ್ಥಪೂರ್ಣ ಚಿತ್ತಾರ ಬಿಡಿಸಲು ಮುಂದಾಗಿರುವುದರಿಂದ ನಗರದ ಸೌಂದರ್ಯವೂ ಹೆಚ್ಚಲಿದೆ. ಜೊತೆಗೆ ನಾಗರಿಕರಿಗೆ ಸ್ವತ್ಛತೆಯ ಅರಿವು ಮೂಡಬೇಕೆಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಕೋಲಾರ ನಗರದ ಅಂದವನ್ನು ಹೆಚ್ಚಿಸುವುದು ಹಾಗೂ ಜನರಿಗೆ ಅರಿವು ಮೂಡಿಸುವ ಉದ್ದೇಶ ದಿಂದ ಗೋಡೆಗಳ ಮೇಲೆ ಸ್ವಚ್ಛತೆ ಒಳಗೊಂಡ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ.
– ಶ್ರೀಕಾಂತ್, ಪೌರಾಯುಕ್ತ, ನಗರಸಭೆ
ಐಇಸಿ ಆದ್ಯತೆಗಳೇನು? : ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಬೇಕು, ಒಣ ಹಾಗೂ ಹಸಿ ಕಸವೆಂಬುದಾಗಿ ನಾಗರಿಕರಿಗೆ ಕಸವನ್ನು ವಿಂಗಡಿಸಿ ನಗರಸಭೆ ವಾಹನಕ್ಕೆ ನೀಡಬೇಕು, ಶೌಚಾಲಯ ಕಡ್ಡಾಯವಾಗಿ ಪ್ರತಿಯೊಬ್ಬರೂ ಬಳಸುವ ಮೂಲಕ ಬಹಿರ್ದೆಸೆ ಮುಕ್ತ ಶೌಚಾಲಯಕ್ಕೆ ಒತ್ತು ನೀಡಬೇಕು, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಬೇಕು ಹಾಗೂ ನೀರನ್ನು ಇತಿ ಮಿತಿಯಾಗಿ ಬಳಕೆ ಮಾಡಿಕೊಂಡು ನಿರ್ವಹಣೆ ಮಾಡಬೇಕೆಂಬ ಅಂಶಗಳನ್ನು ಐಇಸಿ ಕಾರ್ಯಕ್ರಮಗಳ ಆದ್ಯತಾ ವಿಷಯಗಳಾಗಿ ಪರಿಗಣಿಸಲಾಗಿದೆ.
ಎಲ್ಲೆಲ್ಲಿ ಗೋಡೆ ಬರಹ? : ಕೋಲಾರ ನಗರಸಭೆ ಕಚೇರಿ ಕಾಂಪೌಂಡ್ ಮೇಲೆ ಸ್ವಚ್ಛತೆ ಅರಿವಿನ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಕೋಲಾರ ನಗರದ ಜನ ನಿಬಿಡ ರಸ್ತೆಗಳಾದ ಮೆಕ್ಕೆ ವೃತ್ತದ ಸುತ್ತಮುತ್ತಲೂ, ಸರ್ಕಾರಿ ಕಚೇರಿಗಳ ಗೋಡೆಗಳು, ಕೋಲಾರ ನಗರವನ್ನು ವಿವಿಧ ದಿಕ್ಕಿನಲ್ಲಿ ಸಂಪರ್ಕಿಸುವ ರಸ್ತೆ ಬದಿಗಳಲ್ಲಿ, ಹೊರ ವಲಯದ ಫ್ಲೈಓವರ್ ಗೋಡೆಗಳ ಮೇಲೆ ಸ್ವತ್ಛ ಭಾರತ ಮಿಷನ್ ವರ್ಣ ಚಿತ್ತಾರಗಳನ್ನು ಬಿಡಿಸಲು ಯೋಜಿಸಲಾಗುತ್ತಿದೆ.
ಕೆ.ಎಸ್.ಗಣೇಶ್