Advertisement
ಇದರ ಜತೆಗೆ ಮಂತ್ರಿ ಮಾಲ್‌ಗೆ ನೀಡಿದ್ದ “ಸ್ವಾಧೀನಾನುಭವ ಪತ್ರ (ಓಸಿ)’ವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದು,ಮಾಲ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸೋಮವಾರ ಮಧ್ಯಾಹ್ನ ಮಂತ್ರಿಮಾಲ್ ಕಟ್ಟಡದ ಹಿಂಭಾಗದ ನಾಲ್ಕನೇ ಮಹಡಿಯ ಗೋಡೆ ಕಾರಿಡಾರ್ ಸಮೇತ ಕುಸಿದು ಬಿತ್ತು.
Related Articles
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ಕಟ್ಟಡದ ಹಿಂಭಾಗದ ನಾಲ್ಕನೇ ಮಹಡಿಯ ಗೋಡೆ ಕಾರಿಡಾರ್ ಸಮೇತ ಕುಸಿದು ಬಿತ್ತು. 2 ಮತ್ತು 3ನೇ ಮಹಡಿ ಗೋಡೆಗಳೂ ಬಿರುಕು ಬಿಟ್ಟವು. ಸಿಮೆಂಟ್ ಇಟ್ಟಿಗೆಗಳು ಕೆಳಗೆ ಕಾರ್ಯ ನಿರತರಾಗಿದ್ದ ಸಿಬ್ಬಂದಿ ಮೇಲೆ ಬಿದ್ದು ಮೂವರು ಗಾಯಗೊಂಡರು.
Advertisement
ತಪ್ಪಿದ ಭಾರಿ ಅಪಾಯ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಆನಂದ್, ಜೆಡಿಎಸ್ ನಾಯಕಿ ರಮೀಳಾ ಉಮಾಶಂಕರ್ ಜತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆಗಮಿಸಿ, ಸ್ಥಳದ ಪರಿಶೀಲನೆ ನಡೆಸಿದರು. ಶನಿವಾರ ಅಥವಾ ಭಾನುವಾರ ತುಂಬಿ ತುಳುಕುತ್ತಿದ್ದ ಮಾಲ್‌ನಲ್ಲಿ ಸೋಮವಾರವಾಗಿದ್ದರಿಂದ ಜನಸಂದಣಿ ಕಡಿಮೆಯಿತ್ತು. ಇದರಿಂದಾಗಿ ಹೆಚ್ಚು ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದ ಹಿಂಭಾಗದ ಗೋಡೆ ಕುಸಿದಿರುವುದು ಹಾಗೂ ಸಾರ್ವಜನಿಕರ ಓಡಾಟ ಇಲ್ಲದಿರುವ ಕಡೆ ಗೋಡೆ ಕುಸಿದಿರುವ ಕಾರಣ ಹೆಚ್ಚು ಅಪಾಯ ಸಂಭವಿಸಿಲ್ಲ. ಆದರೂ, ನಿತ್ಯ ಸಾವಿರಾರು ಮಂದಿ ಮಾಲ್‌ಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಗ್ರಾಹಕರ ಕ್ಷೇಮವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಮಾಲ್ ಮುಚ್ಚುವಂತೆ ಬಿಬಿಎಂಪಿ ಆಯುಕ್ತರು ಆದೇಶಿಸಿದ್ದಾರೆ. ನಿತ್ಯ ಸಾವಿರಾರು ಜನ ಮಾಲ್‌ಗೆ ಬರುತ್ತಾರೆ.
ಅಲ್ಲದೆ, ಘಟನೆ ವೇಳೆ ಹಿಂಭಾಗದ ಕಟ್ಟಡದ ಕಂಬಗಳು ಹಾಗೂ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಕಟ್ಟಡಕ್ಕೆ ನೀಡಲಾಗಿದ್ದ ಸ್ವಾಧೀನ ಪ್ರಮಾಣ ಪತ್ರವನ್ನು ಕೂಡಲೇ ರದ್ದು ಪಡಿಸಲಾಗಿದೆ. ಅಲ್ಲದೆ, ಗೋಡೆಯ ಗುಣಮಟ್ಟ ಪರಿಶೀಲನೆಗೆ ಬಳಕೆ ಮಾಡಿರುವ ಮರಳು, ಸಿಮೆಂಟ್, ಕಬ್ಬಿಣಗಳನ್ನು ಪರೀಕ್ಷೆಗೆ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಮಾಲ್‌ನಲ್ಲಿ ವಾಣಿಜ್ಯ ವಹಿವಾಟು ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ. ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ: ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆ ಅಮಾರಿನ್ ಎಂಬುವರ ಹೇಳಿಕೆ ಪಡೆಯಲಾಗಿದೆ. ಹೇಳಿಕೆಯ ಆಧಾರದ ಮೇಲೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಐಪಿಸಿ 337 ಸೆಕ್ಷನ್ ಅಡಿ ಕಟ್ಟಡದ ಮಾಲೀಕ ಮತ್ತು ಗುತ್ತಿಗೆದಾರನ ವಿರುದ್ಧ ನಿರ್ಲಕ್ಷ್ಯ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯ ಮುಂದಿನ ಕ್ರಮಪಾಲಿಕೆಯ ಆಯುಕ್ತರು ಈಗಾಗಲೇ ಕಟ್ಟಡದ ಓಸಿ ಹಿಂಪಡೆದಿರುವ ಹಿನ್ನೆಲೆಯಲ್ಲಿ ಪಾಲಿಕೆ ಅನುಮತಿ ನೀಡುವವರೆಗೂ ಮಂತ್ರಿಮಾಲ್ ಮುಚ್ಚಿರುತ್ತದೆ. ಕಟ್ಟಡದ ಸುರಕ್ಷತೆ ಕುರಿತು ಮೂರನೇ ವ್ಯಕ್ತಿ (ತಜ್ಞ) ಅಥವಾ ಸಮಿತಿಯಿಂದ ತನಿಖೆ ನಡೆಸುವಂತೆ ಪಾಲಿಕೆಯ ಅಧಿಕಾರಿಗಳು ಮಂತ್ರಿಮಾಲ್ ಆಡಳಿತಕ್ಕೆ ಸೂಚಿಸಿದ್ದಾರೆ. ಜತೆಗೆ, ಪಾಲಿಕೆಯ ಎಂಜಿನಿಯರ್‌ಗಳ ತಂಡವೂ ಪರಿಶೀಲನೆ ಕಾರ್ಯ ನಡೆಸಿ, ವರದಿ ನೀಡಲಿದೆ. ಕಟ್ಟಡ ಸಾರ್ವಜನಿಕರ ಬಳಕೆಗೆ ಸುರಕ್ಷಿತ ಎಂಬ ಅಂಶ ಎರಡೂ ವರದಿಗಳಿಂದ ಬಂದರೆ, ಆಯುಕ್ತರು ಕಟ್ಟಡಕ್ಕೆ ಮತ್ತೆ ಓಸಿ ಮಂಜೂರು ಮಾಡಲಿದ್ದಾರೆ. ನಕ್ಷೆ ಮಂಜೂರು ಪರಿಶೀಲನೆ
ಪಾಲಿಕೆಯಿಂದ ಯಾವುದೇ ಕಟ್ಟಡಕ್ಕೆ ಓಸಿ ನೀಡುವ ವೇಳೆ ಕಟ್ಟಡದ ಗುಣಮಟ್ಟ ಕಾಯ್ದುಕೊಳ್ಳುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ ಎಂಬ ಅಂಶವನ್ನು ಉಲ್ಲೇಖೀಸಲಾಗಿರುತ್ತದೆ. ಜತೆಗೆ, ನಕ್ಷೆ ಮಂಜೂರಾತಿ ನಿಯಮ ಉಲ್ಲಂ ಸಿ ಸೆಟ್‌ಬ್ಯಾಕ್ ಬಿಡದೆ ಕಟ್ಟಡ ನಿರ್ಮಿಸುವುದು, ಹೆಚ್ಚುವರಿ ಅಂತಸ್ತು ನಿರ್ಮಾಣದಂತಹ ಉಲ್ಲಂಘನೆ ಮಾಡಿರಬಾರದು. ಹೀಗಾಗಿ ನಕ್ಷೆ ಮಂಜೂರಾತಿಯನ್ನೂ ಮತ್ತೂಮ್ಮೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ನಿರ್ವಹಣೆಯಲ್ಲಿನ ನಿರ್ಲಕ್ಷ್ಯ?
ಮಂತ್ರಿ ಮಾಲ್ ಕಟ್ಟಡದ ಹಿಂಭಾಗದಲ್ಲಿ ಸದ್ಯ ಕುಸಿದಿರುವ ಗೋಡೆಯ ಬಳಿ ಅಳವಡಿಕೆ ಮಾಡಲಾಗಿದ್ದ ಹವಾ ನಿಯಂತ್ರಿತ(ಎಸಿ) ಯಂತ್ರದಿಂದ ನೀರು ಸೋರಿಕೆಯಾಗುತ್ತಿತ್ತು. ಇದರಿಂದ ನೀರು ನಿಂತು ಗೋಡೆ ಶಿಥಿಲಗೊಂಡಿದೆ. ಆದರೂ ಮಾಲ್ ಸಿಬ್ಬಂದಿ ಎಸಿ ದುರಸ್ತಿಗೆ ಮುಂದಾಗದ ಹಿನ್ನೆಲೆಯಲ್ಲಿ ಸೋಮವಾರ ಘಟನೆ ಸಂಭವಿಸಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಘಟನೆಗೆ ನಿರ್ವಹಣೆಯಲ್ಲಿನ ನಿರ್ಲಕ್ಷ್ಯವೇ ಕಾರಣ ಎಂಬ ಅನುಮಾನ ಮೂಡಿದೆ. ದುರ್ಘಟನೆ ಹಿನ್ನೆಲೆಯಲ್ಲಿ ಸ್ಥಳದ ಪರಿಶೀಲನೆ ನಡೆಸಿದ್ದು, ತಾತ್ಕಾಲಿಕವಾಗಿ ಮಂತ್ರಿ ಮಾಲ್‌ನ ಸ್ವಾಧೀನಾನುಭವ ಪತ್ರ ಹಿಂಪಡೆದು ಆದೇಶ ಹೊರಡಿಸಿದ್ದೇನೆ. ದುರಸ್ಥಿ ಕಾರ್ಯದ ಬಳಿಕ ಮಾಲ್‌ನ ಸುರಕ್ಷತೆ ಪರಿಶೀಲಿಸಿ, ಅನುಮತಿ ನೀಡುವವರೆಗೂ ಮಾಲ್ ಮುಚ್ಚುವಂತೆ ಸೂಚಿಸಲಾಗಿದೆ.
-ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ. ಸೋಮವಾರವಾದ ಕಾರಣ ಮಾಲ್‌ನಲ್ಲಿ ಕಡಿಮೆ ಜನರಿದ್ದರು. ಹೀಗಾಗಿ, ಘಟನೆ ನಡೆದ ತಕ್ಷಣ ಯಾರಿಗೂ ತೊಂದರೆಯಾಗದಂತೆ ಹೊರಗೆ ಕಳುಹಿಸಲಾಗಿದೆ. ಕಟ್ಟಡದ ಹಿಂಭಾಗದ ಗೋಡೆ ಕುಸಿಯಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಬಿಬಿಎಂಪಿ ಸೂಚನೆಯಂತೆ ಮಾಲ್‌ನ್ನು ಸಂಪೂರ್ಣವಾಗಿ ಮುಚ್ಚಲಾಗುವುದು.
-ಆದಿತ್ಯ ಸಿಕ್ರಿ, ಮಂತ್ರಿಮಾಲ್ ಸಿಇಓ. ಕಟ್ಟಡ ನಿರ್ಮಾಣವಾಗಿ 15 ವರ್ಷ ಕಳೆದಿ ರುವುದರಿಂದ ಹಲವು ಕಡೆ ಬಿರುಕು ಬಿಟ್ಟಿದೆ. ಇದಕ್ಕೆ ಹೊಂದಿಕೊಂಡಂತೆ 7 ವರ್ಷದ ಹಿಂದೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಹೀಗಾಗಿ, ಮಾಲ್‌ನ ಓಸಿ ಹಿಂಪಡೆದು ಮಾಲ್‌ನಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಸೂಚಿಸಲಾಗಿದೆ.
-ಜಿ. ಪದ್ಮಾವತಿ, ಬಿಬಿಎಂಪಿ ಮೇಯರ್. ದುರ್ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕಟ್ಟಡದ ಗೋಡೆ ಕುಸಿಯಲು ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಿ, ವರದಿ ನೀಡುವಂತೆ ಆದೇಶಿಸಲಾಗಿದೆ. ವರದಿ ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ.