Advertisement

ಗೋಡೆ ಕುಸಿತ:15 ಬಲಿ

02:44 AM Jun 30, 2019 | Team Udayavani |

ಪುಣೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 22 ಅಡಿ ಎತ್ತರದ ಕಾಂಪೌಂಡ್‌ ಗೋಡೆಯೊಂದು ಕುಸಿದುಬಿದ್ದ ಪರಿಣಾಮ, ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ.


Advertisement

ಇಲ್ಲಿನ ಕೊಂಧ್ವಾ ಎಂಬ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ 1.45ರ ವೇಳೆಗೆ ಹೌಸಿಂಗ್‌ ಸೊಸೈಟಿಯೊಂದರ ಕಾಂಪೌಂಡ್‌ ಗೋಡೆಯು ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಗೋಡೆಯ ಪಕ್ಕದಲ್ಲೇ ಕಾರ್ಮಿಕರಿಗೆಂದು ನಿರ್ಮಿಸಲಾಗಿದ್ದ ತಾತ್ಕಾಲಿಕ ಗುಡಿಸಲುಗಳ ಮೇಲೆಯೇ ಗೋಡೆ ಕುಸಿದುಬಿದ್ದಿದೆ.

ಮಧ್ಯರಾತ್ರಿಯಾದ ಕಾರಣ, ಎಲ್ಲ ಕುಟುಂಬಗಳೂ ನಿದ್ದೆಗೆ ಜಾರಿದ್ದವು. ಈ ಸಮಯದಲ್ಲೇ ದುರಂತ ಸಂಭವಿಸಿದ ಕಾರಣ, ಬಹುತೇಕ ಮಂದಿ ಅವಶೇಷಗಳಡಿ ಸಿಲುಕಿ ಸಾವು-ನೋವು ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತರಲ್ಲಿ ಹೆಚ್ಚಿನವರು ಬಿಹಾರ ಮೂಲದ ಕಾರ್ಮಿಕರಾಗಿದ್ದು, ನಿರ್ಮಾಣಹಂತದಲ್ಲಿದ್ದ ವಸತಿ ಸಮುಚ್ಚಯದಲ್ಲಿ ಕೆಲಸಕ್ಕೆಂದು ಬಂದಿದ್ದರು.

ಕಾರುಗಳೂ ಬಿದ್ದವು: ಹೌಸಿಂಗ್‌ ಸೊಸೈಟಿಯ ಒಳಭಾಗದಲ್ಲಿ ಗೋಡೆಯ ಪಕ್ಕದಲ್ಲೇ ಕಾರುಗಳನ್ನು ನಿಲ್ಲಿಸಲಾಗಿತ್ತು. ಗೋಡೆ ಕುಸಿತದ ತೀವ್ರತೆಗೆ ಈ ಕಾರುಗಳೂ ಕುಸಿದು, ಗುಡಿಸಲುಗಳ ಮೇಲೆ ಬಿದ್ದಿರುವ ಕಾರಣ ಹೆಚ್ಚಿನ ಪ್ರಾಣಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳದಿಂದ ಮೂವರನ್ನು ರಕ್ಷಿಸಲಾಗಿದ್ದು, ಈ ಪೈಕಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌, ನೊಂದವರಿಗೆ ಸಾಂತ್ವನ ಹೇಳಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ, ಘಟನೆ ಕುರಿತು ತನಿಖೆಗೆ ಐವರು ಸದಸ್ಯರ ಸಮಿತಿಯನ್ನೂ ರಚಿಸಿದ್ದಾರೆ.

Advertisement

ಘಟನೆಗೆ ಕಾರಣವೇನು?
ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ, ಗೋಡೆಯಡಿಯ ಮಣ್ಣು ಸಡಿಲಗೊಂಡಿತ್ತು. ಜತೆಗೆ ಪಕ್ಕದಲ್ಲೇ ನಿರ್ಮಾಣ ಕಾಮಗಾರಿಗಾಗಿ ಭೂಮಿಯನ್ನು ಅಗೆಯಲಾಗಿತ್ತು. ಹೀಗಾಗಿ, ಗೋಡೆ ದುರ್ಬಲಗೊಂಡು ಬಿದ್ದಿರಬಹುದು ಎಂದು ಪುಣೆ ಮಹಾನಗರಪಾಲಿಕೆ ಆಯುಕ್ತ ಸೌರಭ್‌ ರಾವ್‌ ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next