Advertisement
ತುಂಬು ತೋಳಿನ ಷರಟು. ಪಂಚೆ. ತಲೆಯಲ್ಲಿ ಯಾವುದೋ ರಾಗ ಗುಂಯ್ ಅನ್ನುತ್ತಿದ್ದಂತೆ, ತುಟಿಗಳು ಪಿಟಿ ಪಿಟಿ ಅಂದು, ಕೈಯ ಬೆರಳಗಳು ತಾಳಕ್ಕೆ ತಕ್ಕಂತೆ ಕುಣಿಯುವ ಹೊತ್ತಿಗೆ ಉಸ್ತಾದ್ ಫಯಾಜ್‌ಖಾನರು ವಿಲಂಬಿತ ನಡೆಯಲ್ಲಿ ಬಂದು ನಿಂತರು. ಬೆನ್ನಿಗೆ ದೇವರ ಮನೆ. ಹಾಗೇ ತಿರುಗಿ ಕೈ ಮುಗಿದು “ದೇವರು ಇಷ್ಟಾದ್ರೂ ಆರೋಗ್ಯ ಕೊಟ್ಯಾನಲ್ಲ . ಚೂರು ಕಾಲು ನೋವು. ಇನ್ನೊಂದು ಆಪರೇಷನ್ ಆದಮೇಲ ಸರಿಹೋಗತೈತಿ ಅಂತ ಡಾಕ್ಟ್ರು ಹೇಳ್ತಾರ’ ಮಾತನಾಡುತ್ತಾ ಪೀಠಿಕೆಯಂತೆ ಬಂದು ಕೂತರು.
ಫಯಾಜ್ ಖಾನರ ಬದುಕಲ್ಲಿ ಸಂಭವಿಸಿದ ಅಪಘಾತ ಅವರ ಚೈತನ್ಯವನ್ನೇ ಅಡಗಿಸಿತು. “ಇನ್ನು ಮುಗೀತಲಿ ಖಾನ್ ಸಾಹೇಬ್ರ ಸಂಗೀತ ಬದುಕೂ’ ಎಂದೆಲ್ಲಾ ಮಂದಿ ಅಂದಕೊಳ್ಳೋ ಹೊತ್ತಿಗೆ, ಒಳಗಣ ಸಂಗೀತ ಅವರ ಬದುಕನ್ನು ಶೃತಿ ಮಾಡಿಬಿಟ್ಟಿತು. ಈಗ ಫಯಾಜ್‌ಖಾನ್ ತಾಸುಗಟ್ಟಲೆ ಕೂತು, ಮೈಮರೆತು, ಮೈಮರೆಸುವಂತೆ ನುಡಿಸುತ್ತಾರೆ; ಹಾಡುತ್ತಾರೆ. ಹೆಗಲ ಮೇಲೆ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷತೆಯ ಜವಾಬ್ದಾರಿ ಬೇರೆ ಇದೆ. ಸಾರಂಗಿ ಕೇಳ್ಳೋದರಲ್ಲಿ ಇರೋ ಸುಖ, ಅದನ್ನು ನಂಬಿ ಬದುಕೋದರಲ್ಲಿ ಇರಬಹುದಾ? ಅನುಮಾನ ಬಂತು. “ಕಷ್ಟ ಐತ್ರೀ, ಸಾರಂಗಿ ನೋಡಿದರ ಮಂದಿ ಭಯ ಬೀಳ್ತಾರ? ಏಕಪ್ಪಾ ಅಂದರ, ಸಾರಂಗಿ ಸಾತ್ ತಗೊಂಡ್ರೆ ಜನ ಅದನ್ನೇ ಕೇಳ್ತಾರ. ಹಾಡೋರ್ನ, ನುಡಿಸೋರ್ನ ಮರೀತಾರ. ಸರಿಯಪ್ಪಾ, ವಾದ್ಯ ಕಲಿಯೋಣ ಅಂದ್ರ ಶ್ರದ್ಧೆ, ಸಮಯ ಈಗಿನವರಲ್ಲಿ ಇಲಿ. ಕಲರ್‌ಫುಲ್ ಸಂಗೀತ ಇದರೊಳಗ ಐತ್ರಿ. ತೆಗೆಯೋ ತಾಕತ್ತು ಬೇಕ್ರಿ. ಚಾಲೆಂಜ್ ಅಂದರ, ಸಾರಂಗಿಗೆ 37 ತಂತಿ ಐತ್ರಿ.
Related Articles
Advertisement
ಗಿಟಾರ್, ಸರೋದ್, ಹಾರ್ಮೋನಿಯಂ, ತಬಲ…ಇಂಥ ಪಕ್ಕವಾದ್ಯಗಳಿಗೆ ಹೋಲಿಸಿದರೆ ಸಾರಂಗಿ ಸ್ವಲ್ಪ ಕಷ್ಟವಾದ್ಯ. ಕ್ಯಾರಿ ಮಾಡೋದು ಕಷ್ಟವೇ. ನುಡಿಸಾಣಿಕೆಯ ಪೊಜಿಷನ್ ಸಾರಂಗಿಯಷ್ಟು ಬೇರೆ ವಾದ್ಯಗಳು ಕಷ್ಟವಿಲ್ಲ. ಆದರೆ ಮೂರೇ ತಂತಿಯಲ್ಲಿ ನಾಲ್ಕು ಸಪ್ತಕ ನುಡಿಸುವುದು ಸುಲಭದ ಕೆಲಸವಲ್ಲ. ತಂತಿಗಳ ನಡುವಿನ ಅಂತರ ಜಾಸ್ತಿ. ಬೆರಳುಗಳು ಒಂದು ತಂತಿಯಿಂದ ಇನ್ನೊಂದು ತಂತಿಗೆ ಜಿಗಿದಾಗ ಲ್ಯಾಂಡಿಂಗ್ ಕರೆಕ್ಟಾಗಿರಬೇಕು. ಜಿಗಿದಾಣಿಕೆಯನ್ನು ಕಲಿಯೋಕೆ ವರ್ಷಾನುಗಟ್ಟಲೆ ಸಮಯಬೇಕು.
“ತಲೀಗೆ ಬಂದ ವಿಚಾರ ಕೈಗೆ ಬರಬೇಕು. ಕಲ್ಪನೆಗಳೆಲ್ಲವೂ ಬೆರಳಿಗೆ ಕನೆಕ್ಟ್ ಆಗಬೇಕು. ಫಿಸಿಕಲ್ ಕೆಲ್ಸ ಜಾಸ್ತಿ’ ಅಂತಾರೆ ಖಾನ್ ಸಾಹೇಬರು. ಕರ್ನಾಟಕದ ಮಟ್ಟಿಗೆ ಸಾರಂಗಿ ವಾದಕರ ಪಟ್ಟಿ ಹಿಡಿದರೆ ಫಯಾಜ್ ಖಾನರನ್ನು ಬಿಟ್ಟರೆ ಮುಂದಿನ ಹೆಸರುಗಳೆಲ್ಲವೂ ಮಂಜು ಮಂಜು. ಮುಂದೆ ಕಾಣ್ತದೆ ಅನ್ನೋ ಭರವಸೆ ಕೂಡ ಇಲ್ಲ. ಏಕೆಂದರೆ ವಾದ್ಯ ಕಲಿಕೆಯೇ ಕಠಿಣ. ಈ ಜನರೇಷನ್‌ಗೆ ದರ್ಶಿನಿ ತಿಂಡಿಯಂತೆ ಸಡನ್ನಾಗಿ ಸಂಗೀತ ಕೈಗೆ ಸಿಗಬೇಕು, ತಕ್ಷಣ ವೇದಿಕೆ ಹತ್ತಬೇಕು, ಚಪ್ಪಾಳೆ ಗಿಟ್ಟಿಸಬೇಕು.
ಇಂದಿನ ಜನ ಹೀಗೆಲ್ಲಾ ಆಸೆ ಪಡುವ ಕಾರಣದಿಂದಲೇ ಸಾರಂಗಿ ಕಲಿಕೆ ಎಂಬುದು ಎಟುಕದ ದ್ರಾಕ್ಷಿಯಾಗಿ ಪರಿಣಿಮಿಸಿದೆ. ಹಾಗೆ ನೋಡಿದರೆ ಫಯಾಜ್ ಖಾನ್ ಅವರ ಮಗ ಸರಫರಾಜ್ ಸಾರಂಗಿ ಒಲಿಸಿಕೊಂಡಿದ್ದಾರೆ. “ಸಾರಂಗಿ, ಬಹಳ ರಿಯಾಜ್ ಬೇಡ್ತದ. ಶೃತಿ ಮಾಡೋಕೆ ಒಂದು ಗಂಟೆ, ರಿಯಾಜ್‌ಗೆ 3-4 ಗಂಟೆ ಅಂದ್ರ, ಶೇ. 25ರಷ್ಟು ಬದುಕನ್ನು ಇದಕ್ಕೇ ಎತ್ತಿಡಬೇಕ್ರಿ. ಐದು ವರ್ಷದ ಹುಡುಗನಾಗಿಂದ ಕಲಿಯಕ್ಕತ್ತರೆ, 20-22ರ ವಯಸ್ಸಿಗೆ ಕೈ ಕುದರ್ತದ.
ಆಮೇಲೆ ಗಟ್ಟಿಯಾದ ಸಂಗೀತ ನುಡಿಸಬೋದು ನೋಡ್ರಿ. ಆದ್ರ, ಈಗಿನವರಿಗೆ ಇಷ್ಟು ದೊಡ್ಡ ಬದುಕನ್ನು ಸಂಗೀತದ ಮೇಲೆ ಹೂಡಿಕೆ ಮಾಡೋಕೆ ಸಮಯ, ತಾಳ್ಮೆ, ಶ್ರದ್ಧೆ ಎಲ್ಲೆ„ತ್ರೀ? – ಸಾಹೇಬರು ಸಮಸ್ಯೆಯ ಇನ್ನೊಂದು ಮಗ್ಗುಲನ್ನು ತೆರೆದಿಟ್ಟರು. ಸಾರಂಗಿಯ ಇನ್ನೊಂದು ಗುಣ ಎಂದರೆ ಸೂಜಿಗಲ್ಲಿನಂತೆ ಸೆಳೆಯೋದು. ಅದು ವೇದಿಕೆ ಏರಿದರೆ ಇತರೆ ವಾದ್ಯಗಳನ್ನು ಎಷ್ಟೇ ಚೆನ್ನಾಗಿ ನುಡಿಸಿದರೂ, ಹಾಡಿದರೂ ಅವುಗಳ ಮಧ್ಯೆ ಸಾರಂಗಿ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡು ಬಿಡುತ್ತದೆ. ಹೀಗಾಗಿ ಸಾರಂಗಿಯನ್ನು ಪಕ್ಕವಾದ್ಯವಾಗಿಸಿಕೊಳ್ಳೋಕೆ ಹೆದರುವ ಮಂದಿ ಹೆಚ್ಚಿದ್ದಾರಂತೆ.
“ವಾದ್ಯದ ಗುಣ ಧರ್ಮ ಹಿಂಗೇನೆ. ತಂತಿ ಮೀಟಿದ್ರ ಸಾಕು, ಕೇಳ್ಳೋ ಕಿವಿಗಳನ್ನ ತನ್ನೆಡೆ ಎಳೆದುಕೊಳ್ತದ. ಅಷ್ಟು ಸ್ವೀಟ್ ಅನ್ನಿಸೋ ಸಂಗೀತ ಅದರದು. ನುಡಿಸೋ ಮನುಷ್ಯಗ ಒಳ್ಳೇ ಕಲ್ಪನಾ ಶಕ್ತಿ ಇದ್ದು, ಒಳ್ಳೇ ಮೆಹನತ್ತು ಮಾಡಿದನೋ ಹಾಡೋರಿಗೂ ಭಾರ ಆಗ್ತದ. ಇದನ್ನು ಜೀರ್ಣಿಸಿಕೊಂಡು ಹಾಡಬೇಕು. ಅದಕ್ಕ, ರಿಸ್ಕ್ ಯಾಕ ಅಂತ ಕೈಬಿಡೋ ಮಂದಿನೇ ಹೆಚ್ಚು ನೋಡ್ರಿ. ಸಾರಂಗಿನ ನನಗ ಕಾಂಪಿಟೇಟರ್ ಅಂತ ಅಂದುಕೊಂಡ್ರ ಏನು ಮಾಡೋದ್ರೀ? ಅದರ ಮಾಧುರ್ಯ ಅದಕ ಶಾಪವಲ್ಲ.
ನಾನೆಲ್ಲಿ ಅದರ ಮುಂದ ಕಡಿಮೆ ಆಗ್ತಿàನೋ ಅನ್ನೋದು ಹಾಡುಗಾರನ ಇನ್‌ಫಿರಿಯಾರಿಟಿ ಕಾಂಪ್ಲೆಕ್ಸ್. ಸಂಸ್ಕೃತ ಪಂಡಿತರಿಗೆ ಪಾಂಡಿತ್ಯ ಶಾಪ ಆಗ್ತದಾ? ಸಾಧನೆ ಶಾಪ ಆಗ್ತದಾ? ಇಲ್ಲ ತಾನೇ. ಹಾಗೇನೆ ಸಾರಂಗಿ ವಿಚಾರದಲ್ಲೂ. ಅದರ ಮಾಧುರ್ಯದ ಗುಣ ಶಾಪವಲ್ಲ. ಅದರಿಂದ ಹಲವರಿಗೆ ಹೆದರಿಕೆ ಅಂತೂ ಐತ್ರೀ.. ಪ್ರಕೃತಿ ಕೈ ಬಿಡೋಲ್ಲ ಲ್ರೀ. ಚಲೋ ಇರೋದಕ್ಕೆ ಬೆಲೆ ಇರ್ತದ’ ಅಂತಾರೆ ಖಾನ್ ಸಾಹೇಬ್. ಹಾಗೆ ನೋಡಿದರೆ ನಮ್ಮ ಸಂಗೀತಗಳಲ್ಲಿ ಸಾರಂಗಿ ಬಳಸಾಣಿಕೆಯೇ ಕಡಿಮೆ.
ಅಲ್ಲಲ್ಲಿ ಸೋಲೋ ಕಛೇರಿಗಳಲ್ಲಿ ನೋಡಬಹುದು .ಆದರೂ ಸಾರಂಗಿ ನಂಬಿ ಕೊಂಡೇ, ರೊಟ್ಟಿ ಮುರಿಯೋ ಮಂದಿಗೆ ತಿಂಗಳಿಗೆ ಎಷ್ಟು ಅವಕಾಶ ಸಿಗಬಹುದು? ಬೇರೆ ಸಂಗೀತ ಕ್ಷೇತ್ರದವರೇಕೆ ಸಾರಂಗಿಯನ್ನು ಬಳಸೋಲ್ಲ? ಈ ಪ್ರಶ್ನೆಗೂ ಉತ್ತರ ಮುಂದಿಟ್ಟರು ಖಾನ್‌ಸಾಹೇಬರು. “ನಾನು 25 ವರ್ಷದಿಂದ ನುಡಿಸ್ತಾನೆ ಇದ್ದೀನ್ರೀ. ನನ್ನ ಎಷ್ಟು ಜನ ಗಾಯಕರು ಸಾಥಿ ತಗೋತಾರಪ್ಪಾ? ತಗೊಳ್ಳೋದಿಲ್ಲ. ಹಿಂಗಾದರ ನಾವು ಬದುಕೋದು ಹೆಂಗೆ? ಬೇರೆಯವರಿಗೆ ಕಲೀಬೇಕು ಅನ್ನೋ ವಿಶ್ವಾಸ ಹೆಂಗೆ ಹುಟ್ಟತೈತಿ?
ಸಿನಿಮಾ ಕ್ಷೇತ್ರದೊಳಗ ಬಳಕೆ ಕಡಿಮೆ ಆಗದ. ಸುಗಮಸಂಗೀತದಾಗ ರಾಜು ಅನಂತಸ್ವಾಮಿ, ಸಿ. ಅಶ್ವತ್ಥ್, ಅತ್ರಿ ಇದ್ದಾಗೆಲ್ಲ ಬಳಸೋರು. ಈಗಿನ ಜನರೇಷನ್ಗ ಇಂಥ ವಾದ್ಯ ಉಂಟು ಅನ್ನೋದೇ ತಿಳಿದಿಲಿ’ ಬೇಸರದಲ್ಲಿ ಖಾನ್ ಸಾಹೇಬರು ಮಾತು ಮುಗಿಸಿ ವಿಲಂಬಿತ ಚಲನೆಯಲ್ಲಿ ಎದ್ದು ರೂಮಿನ ಕಡೆ ಹೊರಟರು. ಒಳಗಿಂದ ಸೌರಂಗಿಯ ನಾದ ಎದ್ದು ಬಂತು. ಕಣ್ಮುಚ್ಚಿ “ನೋಡ್ರೀ… ಹೇಂಗದ’ ನಾದ ಅಂತ ಮಗ ನುಡಿಸಿದ ಯಾವುದೋ ಆಲಾಪನ ಸವಿದರು.
ದೊಡ್ಡ ಪೆಟ್ಟು: ಆಕಾಶವಾಣಿ, ದೂರದರ್ಶನದೊಳಗ ಯಾರಾದರೂ ಸತ್ತಾಗ ಸಾರಂಗಿ ಹಚ್ಚಿಬಿಡ್ತಾರ. ಇದರಿಂದ ಸಾರಂಗಿ ಶೋಕವಾದ್ಯ ಅನ್ನೋ ರೆಪ್ಯುಟೇಷನ್ ಬಂದದ. ಇದು ದೊಡ್ಡ ಶಾಪ. ಖರೇ ಹೇಳಬೇಕಂದ್ರ, ಸಾರಂಗಿ ಹೆಸರು ಸೌರಂಗಿ ಅಂತ. ನೂರು ಕಲರ್ ಇರೋ ವಾದ್ಯ. ನವರಸಗಳನ್ನು ತೆಗೆಯಬಲ್ಲ ಏಕೈಕ ವಾದ್ಯ. ಎಷ್ಟುಜನಕ್ಕೆ ಇದು ಗೊತ್ತೈತ್ರಿ? ಸಾರಂಗೀನ ಬಳಸದೇ ಇರೋದಕ್ಕ ಇವರೂ ಕಾರಣ.
ಸಾರಂಗಿ ಗಾಯಕರು: ಸಾರಂಗಿ ವಾದಕರು ಬದುಕಬೇಕಾದ್ರ ಇತರೆ ಕಲಾವಿದರ ನೆರವು ಬೇಕಾಗ್ತದ. ಆಯುಶ್ಯ ಅದರಾಕೆ ಹಾಕಿ, ಕಷ್ಟಕ್ಕೆ ಸಿಕ್ಕಿಹಾಕ್ಕೊಂಡ್ರು. ಬಹಳ ಜನ ಸಾರಂಗಿ ನುಡಿಸೋರು ಚಲೋ ಹಾಡೋರಾದರು. ಅವರಿಗೆ ಬೇರೆ ದಾರಿ ಇರ್ತಿರಲಿಲ್ಲ. ತಂತಿ ಜೊತೆಗೆ ಆಟ ಆಡಿ, ಆಡೀ ಸ್ವರದ ಮೇಲೆ ಪಕ್ವತೆ ಬಂದಿರ್ತದ. ಸಾರಂಗಿವಾದನದಿಂದ ಅವಕಾಶ ಸಿಗಲಿಲ್ಲ ಅಂದ್ರ, ಹಾಡೋದಕ್ಕಾದರು ಸಿಗಲಿ ಅಂತ ಹಾಡ್ತಾರ.
ಉಸ್ತಾದ್ ಅಬ್ದುಲ್ ಖರೀಂ ಖಾನ್ ಸಾರಂಗಿ ವಾದಕರು. ಇವರು ಹಾಡಲಿಕ್ಕೆ ಶುರು ಮಾಡಿದ್ದೇ ದೊಡ್ಡ ಘರಾನ ಪರಂಪರೆ ನಿರ್ಮಾಣವಾತು. ಇವರಲ್ಲಿ ಕಲಿತ ಭೀಮಸೇನ್ ಜೋಶಿ ಅವರು ಭಾರತ ರತ್ನ ಪಡೆದರು. ಉಸ್ತಾದ್ ಬಡೇಗುಲಾಂ ಅಲಿಖಾನ್, ಅಮೀರ್‌ಖಾನ್ ಸಾಬ್ ಸಾರಂಗಿ ವಾದಕರು. ಇವತ್ತು ಖಯಾಲ್ ಹಾಡ್ತೀವಿ ಅಂದ್ರ ಈ ಮೂರು ಮಂದಿಯ ಗಾಯನ ಕೇಳಿ ಹಾಡಬೇಕು. ಖಯಾಲ್ ಹುಟ್ಟು ಹಾಕಿದ್ದೇ ಈ ಸಾರಂಗಿ ಮಂದಿ.
* ಕಟ್ಟೆ ಗುರುರಾಜ್