ಪ್ರಕರಣ ಇತ್ಯರ್ಥವಾಗುವವರೆಗೆ ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು
ಸಭಾತ್ಯಾಗ ಮಾಡಿದರು.
Advertisement
ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಕುರಿತು ಪ್ರತಿಪಕ್ಷ ನಾಯಕ ಜಗದೀಶ್ಶೆಟ್ಟರ್ ಮತ್ತಿತರರು ಮಂಡಿಸಿದ ನಿಲುವಳಿ ಸೂಚನೆ ಪ್ರಸ್ತಾಪವನ್ನು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ನಿಯಮ 69ಕ್ಕೆ ಪರಿವರ್ತಿಸಿ
ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರು. ಅದರಂತೆ ಜಗದೀಶ್ ಶೆಟ್ಟರ್ ಚರ್ಚೆ ಆರಂಭಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಕಾನೂನು
ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ದಾಖಲೆಗಳಿದ್ದರೆ ಅದನ್ನು ಆಧರಿಸಿ ಮಾತನಾಡಿದರೆ ಸರ್ಕಾರ
ಬೆಳಕು ಚೆಲ್ಲಲು ಸಾಧ್ಯ. ಐಟಿ ಅಧಿಕಾರಿಗಳು ದಾಖಲೆ ಬಿಡುಗಡೆ ಮಾಡಿದರೆ ಅದರ ಮೇಲೆ ಚರ್ಚೆ ಮಾಡೋಣ. ಸರ್ಕಾರ ಉತ್ತರ
ನೀಡುತ್ತದೆ. ಅದು ಬಿಟ್ಟು ರಾಜಕೀಯ ಕಾರಣಗಳಿಗಾಗಿ ವಿಷಯ ಪ್ರಸ್ತಾಪಿಸಿ ಸದನದ ಸಮಯ ವ್ಯರ್ಥ ಮಾಡುವುದು ಸರಿಯಲ್ಲ
ಎಂದರು. ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ರಮೇಶ್ ಕುಮಾರ್ ಕೂಡ ಇದಕ್ಕೆ ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಆಸ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಸಚಿವರೇ ಒಪ್ಪಿಕೊಂಡ ಕೆಲವು ಅಂಶಗಳ ಆಧಾರದ ಮೇಲೆ ಚರ್ಚಿಸುತ್ತೇನೆ. ಐಟಿ ದಾಳಿ ವೇಳೆ 115 ಕೋಟಿ ರೂ. ಆಸ್ತಿ ಪತ್ತೆಯಾಗಿದ್ದಾಗಿ ಸಚಿವರೇ ಒಪ್ಪಿಕೊಂಡಿದ್ದಾರೆ. ಈ ಆಸ್ತಿ ಕುರಿತು ಅವರು ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಥವಾ ಲೋಕಾಯುಕ್ತರ
ಮುಂದೆ ಪ್ರತಿ ವರ್ಷ ಘೋಷಿಸುವ ಆಸ್ತಿಯಲ್ಲಿ ನಮೂದಿಸಿದ್ದರೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.
ಜಗದೀಶ್ ಶೆಟ್ಟರ್ ಪಟ್ಟು ಬಿಡದೆ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿದಾಗ ಆಡಳಿತ ಪಕ್ಷದ ಸದಸ್ಯರು ಅವರ ವಿರುದ್ಧ ತಿರುಗಿಬಿದ್ದರು. ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಒಬ್ಬರೇ ಅವರಿಗೆ ಪ್ರತ್ಯುತ್ತರ ನೀಡಿದರೇ ಹೊರತು ಬಿಜೆಪಿ ಸದಸ್ಯರು ಅವರಿಗೆ
ಬೆಂಬಲ ವ್ಯಕ್ತಪಡಿಸಲಿಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯರೊಂದಿಗೆ ಏಕಾಂಗಿಯಾಗಿ ವಾದ ಮಂಡಿಸಲು ಸಾಧ್ಯವಾಗದ ಶೆಟ್ಟರ್,
ಸಚಿವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸಭಾತ್ಯಾಗ ಮಾಡುವುದಾಗಿ ಹೇಳಿ ಸದನದಿಂದ ಹೊರನಡೆದರು. ಬಳಿಕ ಬಿಜೆಪಿ ಸದಸ್ಯರು ಅವರ ಹಿಂದೆ ಹೋದರು.