ಜಲಮುನಿಗಳು ಅನ್ನುವ ಒಬ್ಬ ಗುರುಗಳಿದ್ದರು. ಅವರು ನೀರಿನ ಮೇಲೆ ನಡೆದಾಡುವ, ಓಡುವ, ಕುಳಿತುಕೊಳ್ಳುವ, ನಿದ್ದೆ ಮಾಡುವ ಸಿದ್ದಿಯನ್ನು ಗಳಿಸಿಕೊಂಡಿದ್ದರು. ಅದನ್ನು ಕಲಿಯಲು ಅನೇಕ ಶಿಷ್ಯರು ಬರುತ್ತಿದ್ದರು. ಅದು ಕಠಿಣ ವಿದ್ಯೆಯಾದ್ದರಿಂದ ಎಷ್ಟೋ ಹುಡುಗರು ಕಲಿಯಲಾಗದೇ ಸೋತು ಹಿಂದಿರುಗುತ್ತಿದ್ದರು. ಹಾಗೆ ಕಲಿಯುವ ಆಸಕ್ತಿಯಿಂದ ಬಂದ ನಿರೂಪ ಅನ್ನುವ ಹುಡುಗ, ಸೋಲದೆ ಕಲಿಕೆಯನ್ನು ಮುಂದುವರೆಸಿದ. ಗುರುಗಳು ಅವನ ಕಲಿಯುವಿಕೆಯ ಆಸಕ್ತಿ ನೋಡಿ ಖುಷಿಪಟ್ಟರು. ಅವನಿಗೆ ಇನ್ನೂ ಹೆಚ್ಚು ಹೆಚ್ಚು ಹೇಳಿಕೊಡಲು ಆರಂಭಿಸಿದರು. ನಿರೂಪ, ಒಂದು ವರ್ಷದಲ್ಲೇ ಎಲ್ಲಾ ವಿದ್ಯೆಯನ್ನು ಕಲಿತುಬಿಟ್ಟ. ಒಂದು ದಿನ ಅವನು- “ಗುರುಗಳೇ ನಾನು ಎಲ್ಲವನ್ನೂ ಕಲಿತಿದ್ದೇನೆ. ಇನ್ನು ಮನೆಗೆ ಹೋಗಲೇ?’ ಎಂದು ಕೇಳಿದ. ಗುರುಗಳು ಮುಗುಳ್ನಕ್ಕು ಅನುಮತಿ ನೀಡಿದರು. ನಿರೂಪ ಆಶ್ರಮ ಬಿಟ್ಟು ಹೋಗುವ ಮುನ್ನ ಗುರುಗಳು ಅವನಿಗೆ ಒಂದು ಮಾತು ಹೇಳಿದರು-
“ಈ ವಿದ್ಯೆಯಿಂದ, ನೀನು ಯಾರನ್ನು ಬೇಕಾದರೂ ನೀರಿನ ಮೇಲೆ ನಡೆಯುವಂತೆ ಮಾಡಬಹುದು. ನೀನು ಕಲಿತಿರುವ ವಿದ್ಯೆ ಒಳ್ಳೆಯ ಕಾರ್ಯಕ್ಕೆ ಮಾತ್ರ ಬಳಕೆಯಾಗಬೇಕು. ಒಂದು ವೇಳೆ ಅದನ್ನು ದುರುಪಯೋಗ ಪಡಿಸಿಕೊಂಡರೆ ನಾನು ಹೇಳಿಕೊಟ್ಟ ವಿದ್ಯೆ ಮತ್ತೆ ಎಂದೂ ನಿನ್ನ ನೆನಪಿಗೆ ಬರುವುದಿಲ್ಲ.’ ಎಂದು ಉಪದೇಶಿಸಿದರು. ನಿರೂಪ- “ಆಗಲಿ ಗುರುಗಳೇ… ನಿಮ್ಮಿಂದ ಕಲಿತ ವಿದ್ಯೆಯನ್ನು ಜನರ ಒಳಿತಿಗೆ ಮಾತ್ರ ಬಳಸುತ್ತೇನೆ’ ಎಂದು ಆಶ್ವಾಸನೆ ಕೊಟ್ಟು ಆಶ್ರಮದಿಂದ ನಿರ್ಗಮಿಸಿದನು. ಊರು ಸೇರಿದ ನಿರೂಪ, ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತನಾದ. ತಾನು ಕಲಿತ ವಿದ್ಯೆಯನ್ನು ಪರೀಕ್ಷಿಸುವ ಸಲುವಾಗಿ ಆಗಾಗ ತಾನೊಬ್ಬನೇ ನೀರಿನ ಮೇಲೆ ಓಡಾಡಿ ಬರುತ್ತಿದ್ದ.
ಒಂದು ದಿನ ಹೀಗೆ ನೀರಿನ ಮೇಲೆ ನಡೆಯುತ್ತಿದ್ದಾಗ, ದೂರದಲ್ಲಿ ಯಾರೋ ವ್ಯಕ್ತಿ ನೀರಲ್ಲಿ ಮುಳುಗುತ್ತಿರುವುದು ಕಂಡಿತು. ನಿರೂಪ ಅವನಿಗೆ ಸಹಾಯ ಮಾಡುವುದೋ ಬೇಡವೋ ಎಂದು ಯೋಚಿಸುತ್ತಾ ನಿಂತ. ಅವನು ಜೀವನದಲ್ಲಿ ಯಾವ ಪಾಪ ಕರ್ಮಗಳನ್ನು ಮಾಡಿದ್ದಾನೋ? ಯಾವ ಕಾರಣಕ್ಕೆ ನೀರಿಗೆ ಬಿದ್ದಿರಬಹುದು? ಎಂಬಿತ್ಯಾದಿ ಸರಿ ತಪ್ಪುಗಳ ಲೆಕ್ಕಾಚಾರ ಮಾಡತೊಡಗಿದ. ಅವನನ್ನು ರಕ್ಷಿಸಲು ಹೋಗಿ ಏನಾದರೂ ಎಡವಟ್ಟಾಗಿ ಕೊನೆಗೆ ತನ್ನ ವಿದ್ಯೆ ಹೋಗಿ ಬಿಟ್ಟರೆ ಎಂದು ನಿರೂಪ ಸುಮ್ಮನಾದ. ಇದರ ನಂತರ ಇಂಥವೇ ಹಲವಾರು ಘಟನೆಗಳು ನಡೆದಾಗಲೂ, ನಿರೂಪ ತನ್ನ ವಿದ್ಯೆ ಪ್ರಯೋಗಿಸಿ ಸಹಾಯ ಮಾಡದೆ ಸುಮ್ಮನಿದ್ದ. ಒಂದು ದಿನ ಅವನು ತನ್ನ ಗುರುಗಳನ್ನು ಭೇಟಿ ಮಾಡುವ ಸಂದರ್ಭ ಒದಗಿ ಬಂತು.
ಗುರುಗಳು “ನಿರೂಪ, ನೀನು ಕಲಿತ ವಿದ್ಯೆಯಿಂದ ಎಷ್ಟು ಜನರಿಗೆ ಉಪಯೋಗವಾಯಿತು?’ ಎಂದು ಕೇಳಿದರು. ನಿರೂಪನಿಗೆ ಏನು ಉತ್ತರಿಸಬೇಕು ಅಂತ ಗೊತ್ತಾಗಲಿಲ್ಲ. “ಗುರುಗಳೇ ಅದು… ಅದು…’ ಎಂದು ತೊದಲಿದ. ಗುರುಗಳಿಗೆ ಎಲ್ಲವೂ ಅರ್ಥವಾಯಿತು. “ನೋಡು ನಿರೂಪ, ವಿದ್ಯೆ ಕಲಿಯುವುದಷ್ಟೇ ಮುಖ್ಯವಲ್ಲ. ಅದನ್ನು ಯಾವ ರೀತಿ ಪ್ರಯೋಜನ ಪಡೆದುಕೊಳ್ಳಬೇಕು ಅನ್ನುವ ಜ್ಞಾನವೂ ಮುಖ್ಯ. ನಿನಗೆ ವಿದ್ಯೆ ಗೊತ್ತು. ಆದರೆ ಜ್ಞಾನ ಗೊತ್ತಿಲ್ಲ. ಅದನ್ನು ನೀನು ಕಲಿಯಬೇಕು. ಅವಾಗಲೇ ವಿದ್ಯೆ ಪರಿಪೂರ್ಣವಾಗೋದು’ ಅಂದರು. ಆಗ, ನಿರೂಪನಿಗೆ ತಾನೆಷ್ಟು ಅವಿದ್ಯಾವಂತ ಎನ್ನುವುದು ಅರ್ಥವಾಯಿತು. “ಎಲ್ಲವನ್ನೂ ಕಲಿಯುವವರೆಗೂ ನಾನು ಆಶ್ರಮದಿಂದ ಕದಲುವುದಿಲ್ಲ,’ ಎಂದವನು ಗುರುಗಳ ಕಾಲಿಗೆ ಅಡ್ಡಬಿದ್ದನು. ಗುರುಗಳು ಮುಗುಳ್ನಗುತ್ತಾ ನಿರೂಪನನ್ನು ಮೇಲೆತ್ತಿ ಪ್ರೀತಿಯಿಂದ ಆಲಂಗಿಸಿದರು.
ಸದಾಶಿವ ಸೊರಟೂರು