Advertisement

ವಕ್ಫ್ ಆಸ್ತಿ ಕಬಳಿಕೆ: ಸರ್ಕಾರದ ಅರ್ಜಿ ವಜಾ

02:56 PM Dec 13, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋಟ್ಯಂತರ ರೂ. ಮೌಲ್ಯದ ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಸಲ್ಲಿಸಿದ್ದ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಈ ಕರಿತಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಬಿ.ವಿ. ನಾಗರತ್ನ ಹಾಗೂ ನ್ಯಾ. ಬಿ.ಎ ಪಾಟೀಲ್‌ ಅವರಿದ್ದ ನ್ಯಾಯಪೀಠ, ಪ್ರಸಕ್ತ ವಿಧಾನಮಂಡಲ ಅಧಿವೇಶನ ಅಥವಾ 2019ರ ಅಧಿವೇಶನದಲ್ಲಿ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸುವಂತೆ ಹೇಳಿದೆ. 

Advertisement

ವರದಿಯನ್ನು ಸದನದಲ್ಲಿ ಮಂಡಿಸುವಂತೆ ಈ ಹಿಂದೆ ಹೈಕೋರ್ಟ್‌ ಆದೇಶ ಮಾಡಿತ್ತು. ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠ, ಈಗ ತೀರ್ಪು ಪ್ರಕಟಿಸಿದೆ.

ವರದಿಯನ್ನು 2016ರ ಫೆಬ್ರವರಿ ಅಧಿವೇಶನದಲ್ಲಿ ಸದನದಲ್ಲಿ ಮಂಡಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಇನ್ನೂ ಮಂಡಿಸಿಲ್ಲ ಎಂದು ಮಾಜಿ ಸಚಿವ ಎಸ್‌.ಕೆ. ಕಾಂತಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. 

ಈ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ, ಅಲ್ಪಸಂಖ್ಯಾತರ ಆಯೋಗದ ಕಾಯ್ದೆ-1994ರ ಸೆಕ್ಷನ್‌ 10(2) ಪ್ರಕಾರ ಆಯೋಗದ ವರದಿಯಲ್ಲ, ಅದರ ಶಿಫಾರಸುಗಳನ್ನು ಮತ್ತು ಕ್ರಮ ಜಾರಿ ವರದಿಯನ್ನು ಸದನಕ್ಕೆ ಮಂಡಿಸಬೇಕು. ಅದರಂತೆ, ಶಿಫಾರಸುಗಳನ್ನು ಸದನದಲ್ಲಿ ಮಂಡಿಸಿದ್ದು, ಅವುಗಳನ್ನು ಸರ್ಕಾರ ತಿರಸ್ಕರಿಸಿದೆ. ಹಾಗಾಗಿ, ವರದಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ, ಮೂಲ ತಕಾರು ಅರ್ಜಿಯಲ್ಲಿ ಅರ್ಜಿದಾರರು ವರದಿ ಮಂಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದ್ದರು. ಆ ಕಾರಣದಿಂದ ಹೈಕೋರ್ಟ್‌ ಆದೇಶದಲ್ಲೂ ವರದಿ ಮಂಡಿಸುವಂತೆಯೇ ಉಲ್ಲೇಖೀಸಲಾಗಿದೆ. ಆದ್ದರಿಂದ ಆದೇಶ ಮರುಪರಿಶೀಲಿಸಬೇಕು ಎಂದು ಸರ್ಕಾರ ಪುನರ್‌ಪರಿಶೀಲನಾ ಅರ್ಜಿಯಲ್ಲಿ ಕೇಳಿಕೊಂಡಿತ್ತು.

ಇದೀಗ ಸರ್ಕಾರದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, ಪ್ರಕರಣದ ಮೆರಿಟ್‌ ಆಧಾರದ ಮೇಲೆ ಈ ಅರ್ಜಿಯ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. 

Advertisement

 ಏನಿದು ಪ್ರಕರಣ?: ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ 2012ರ ಮಾ.26ಕ್ಕೆ ಅಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿಯವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ 2015ರಲ್ಲಿ ಎಸ್‌.ಕೆ. ಕಾಂತಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸದನದಲ್ಲಿ ವರದಿ ಮಂಡಿಸುವಂತೆ ಹೈಕೋರ್ಟ್‌ ನಿರ್ದೇಶನ ಕೊಟ್ಟಿತ್ತು. ವರದಿ ಮಂಡಿಸುವುದಾಗಿ 2016ರಲ್ಲಿ ಸರ್ಕಾರ ಮುಚ್ಚಳಿಕೆ ಸಹ ಬರೆದುಕೊಟ್ಟಿತ್ತು. ಆದರೆ, ವರದಿಯ ಶಿಫಾರಸುಗಳನ್ನು
ಮಾತ್ರ ಮಂಡಿಸಿತ್ತು.

ಇದನ್ನು ಆಕ್ಷೇಪಿಸಿ ಎಸ್‌.ಕೆ. ಕಾಂತಾ ಅವರು 2016ರ ಮಾರ್ಚ್‌ನಲ್ಲಿ ಸರ್ಕಾರದ ವಿರುದ್ಧ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವರದಿ ಮಂಡಿಸುವಂತೆ ಹೈಕೋರ್ಟ್‌ ನಿರ್ದೇಶನ ಕೊಟ್ಟಿದೆ. ಅಲ್ಲದೇ ವರದಿ ಮಂಡಿಸುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. ಆದರೆ, ಸಂಪೂರ್ಣ ವರದಿ ಮಂಡಿಸುವ ಬದಲು ಕೇವಲ ಶಿಫಾರಸುಗಳನ್ನು ಮಂಡಿಸಲಾಗಿದೆ. ಸರ್ಕಾರದ ಈ ಕ್ರಮ ನ್ಯಾಯಾಲಯದ ಘನತೆಗೆ ಧಕ್ಕೆ ತರುವಂತಹದ್ದು ಮತ್ತು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದರು.

ಕಾಂಗೆ‹ಸ್‌-ಬಿಜೆಪಿ ನಡುವೆ ನಡೆದಿತ್ತು ಸಂಘರ್ಷ ವರದಿಯಲ್ಲಿ ಕಾಂಗ್ರೆಸ್‌ ಪಕ್ಷದ ಘಟಾನುಘಟಿ ನಾಯಕರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಈ ವರದಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಸದನದಲ್ಲಿ ಸಾಕಷ್ಟು ಸಂಘರ್ಷ ನಡೆದಿತ್ತು. ವರದಿಯ ಶಿಫಾರಸುಗಳು ಹಾಗೂ ಕ್ರಮ ಜಾರಿ ವರದಿ (ಎಟಿಆರ್‌) ಮಾತ್ರ ಸರ್ಕಾರ ಸದನದಲ್ಲಿ ಮಂಡಿಸಿತ್ತು. ಈ ನಡುವೆ ವರದಿಯ ಬಗ್ಗೆ ಹಾಗೂ ಅದನ್ನು ಸದನದಲ್ಲಿ ಮಂಡಿಸುವ ಕುರಿತಂತೆ ಆಗ ವಕ್ಫ್ಸ ಚಿವರಾಗಿದ್ದ ದಿವಂಗತ ಖಮರುಲ್‌ ಇಸ್ಲಾಂ ಆವರು ಸದನದಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ಮಂಡಿಸಿತ್ತು. ಈ ನಡುವೆ ಸದನಕ್ಕೆ ಕೊಟ್ಟ ಭರವಸೆಯಂತೆ ವರದಿ ಮಂಡಿಸುವಂತೆ ಆಗಿನ ಸಭಾಪತಿ ಡಿ.ಎಚ್‌. ಶಂಕರಮೂರ್ತಿ “ರೂಲಿಂಗ್‌’ ಸಹ ಕೊಟ್ಟಿದ್ದರು. ಆದರೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆಯ ಆಧಾರ ಕೊಟ್ಟು ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next