Advertisement

ಎಚ್ಚೆತ್ತ ಪುರಸಭೆ: ಘನತ್ಯಾಜ್ಯ ಘಟಕಕ್ಕೆ ವಿದ್ಯುತ್‌ ಸಂಪರ್ಕ

11:26 AM Mar 04, 2018 | Team Udayavani |

ವಾಡಿ: ಪಟ್ಟಣದ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊನೆಗೂ ವಿದ್ಯುತ್‌ ಸಂಪರ್ಕ ನೀಡಲಾಗಿದ್ದು, ಕಸದ
ರಾಶಿಯನ್ನು ವಿಂಗಡಿಸಿ ಗೊಬ್ಬರವನ್ನಾಗಿ ಪರಿವರ್ತಿಸುವ ಕಾರ್ಯ ನಡೆದಿದೆ. ಕಳೆದ ಎರಡು ವರ್ಷದಿಂದ ವಿದ್ಯುತ್‌ ಸಂಪರ್ಕವಿಲ್ಲದೆ ಗೊಬ್ಬರ ತಯಾರಿಕಾ ಯಂತ್ರ ತುಕ್ಕು ಹಿಡಿದಿದೆ. ಘಟಕದ ಅಪೂರ್ಣ ಕಾಮಗಾರಿ ಗಮನಿಸದೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತರಾತುರಿಯಲ್ಲಿ ಉದ್ಘಾಟಿಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ಇತ್ತೀಚೆಗಷ್ಟೆ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ ಅವರು ಗಂಭೀರ ಆರೋಪ ಮಾಡಿದ್ದರು. ಈ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಪುರಸಭೆ ಆಡಳಿತ ಘಟಕಕ್ಕೆ ವಿದ್ಯುತ್‌ ಸಂಪರ್ಕ ಒದಗಿಸುವ ಮೂಲಕ ಗೊಬ್ಬರ ಯಂತ್ರ ದುರಸ್ತಿಗೊಳಿಸಿ ಕಾರ್ಯಾರಂಭ ಮಾಡಿದೆ.

Advertisement

ಘನತ್ಯಾಜ್ಯ ಘಟಕಕ್ಕೆ ಒಟ್ಟು ಐವರು ಪೌರಕಾರ್ಮಿಕರನ್ನು ನೇಮಿಸಿರುವ ಪುರಸಭೆ ಮುಖ್ಯಾಧಿಕಾರಿ ಕೆ.ಮಲ್ಲೇಶ, ಕಸದ ರಾಶಿಯಲ್ಲಿ ಮಿಶ್ರಣಗೊಂಡ ಪ್ಲ್ಯಾಸ್ಟಿಕ್‌ ಚೀಲ, ಗಾಜು, ಬಾಟಲಿ, ಬಟ್ಟೆ, ಕಬ್ಬಿಣ ಸೇರಿದಂತೆ ಇತರ ಘನತ್ಯಾಜ್ಯ ವಿಂಗಡಿಸಲು ಆದೇಶ ನೀಡಿದ್ದಾರೆ. ಒಣ ಕಸ, ಹಸಿ ಕಸ ಹಾಗೂ ಘನ ಕಸ ಬೇರ್ಪಡಿಸಿ ಸಂಗ್ರಹ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಕಸವನ್ನು ಘಟಕದ ನಿಗದಿತ ತೊಟ್ಟಿಗಳಲ್ಲಿ ಸಂಗ್ರಹಿಸಿ ರಾಸಾಯನಿಕ ಸಿಂಪರಣೆ ಮಾಡಲಾಗುತ್ತಿದೆ. ಕಸವು ಸಂಪೂರ್ಣ ಕೊಳೆತ ನಂತರ ಯಂತ್ರದ ಸಹಾಯದಿಂದ ಗೊಬ್ಬರವನ್ನಾಗಿ ಸಿದ್ಧಪಡಿಸಲಾಗುವುದು ಎಂದು ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ ತಿಳಿಸಿದ್ದಾರೆ. ಕಿರಿಯ ಅಭಿಯಂತರ
ಅಶೋಕ ಪುಟ್‌ಪಾಕ್‌, ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ನೋಡಲ್‌ ಅಭಿಯಂತರ ಮನೋಜಕುಮಾರ
ಹಿರೋಳಿ, ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸದಸ್ಯರಾದ ಶರಣು ನಾಟೀಕಾರ, ದೇವಿಂದ್ರ ಕರದಳ್ಳಿ ಇದ್ದರು.

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಬೇಕಿದ್ದ ವಿದ್ಯುತ್‌ ಸಂಪರ್ಕ ವಿಳಂಬಕ್ಕೆ ನಿರ್ಲಕ್ಷ್ಯ ಕಾರಣವಲ್ಲ. ಆಡಳಿತಾತ್ಮಕ ಸಮಸ್ಯೆಗಳಿಂದ ವಿಳಂಬವಾಗಿದೆ. ನಗರೋತ್ಥಾನ ಅನುದಾನದಡಿ 32 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್‌ 22ರ ರೈಲ್ವೆ ಕಾಲೋನಿಯಲ್ಲಿ ಕೈಗೊಳ್ಳಬೇಕಿದ್ದ ರಸ್ತೆ
ಅಭಿವೃದ್ಧಿಗೆ ವಿರೋಧ ವ್ಯಕ್ತವಾದ ಪರಿಣಾಮ ಅದನ್ನು ಕೈಬಿಡಲಾಗಿದೆ. ನಗರೋತ್ಥಾನದ ಅಧ್ಯಕ್ಷರಾಗಿರುವ ಸಚಿವ ಪ್ರಿಯಾಂಕ್‌ ಖರ್ಗೆ
ಅವರ ಆದೇಶದಂತೆ ಕಾಮಗಾರಿ ಸ್ಥಳ ಬದಲಾವಣೆ ಮಾಡಲಾಗಿದೆ. ಅಲ್ಲದೆ ಘನತ್ಯಾಜ್ಯ ಘಟಕದಲ್ಲಿ ಕುಡಿಯುವ ನೀರು, ನೆರಳು ಹಾಗೂ ಹಸಿರು ಪರಿಸರದ ಸೌಲಭ್ಯ ಒದಗಿಸಲು ಚಿಂತಿಸಲಾಗಿದೆ.
ಕೆ.ಮಲ್ಲೇಶ. ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next