ಪ್ರಕೃತಿಗೆ ನಾವು ಏನು ನೀಡುತ್ತೇವೆಯೋ ಅದುವೇ ನಮಗೆ ಮರಳಿ ಸಿಗುತ್ತದೆ. ಇದುವೇ ಕರ್ಮ ಸಿದ್ಧಾಂತ. ಮಾನವನ ನಿರಂತರ ಶೋಷಣೆಯಿಂದಾಗಿ ಪ್ರಕೃತಿಯ ಮಡಿಲು, ಒಡಲು ನಿರಂತರ ಏಳುಬೀಳನ್ನು ಎದುರಿಸುತ್ತಿದೆ. ಮನುಷ್ಯನ ಉಪಟಳವನ್ನು ತಡೆದುಕೊಳ್ಳುವ ಶಕ್ತಿ ಇನ್ನು ಪ್ರಕೃತಿಗಿಲ್ಲ. ಅದೀಗ ಕೆರಳುವುದು ಸಹಜವೇ!
ಅತಿವೃಷ್ಟಿ- ಅನಾವೃಷ್ಟಿ ಎನ್ನುವ ಎರಡು ಪ್ರಬಲ ಅಸ್ತ್ರಳು ಪ್ರಕೃತಿ ಮಾತೆಯ ಬತ್ತಳಿಕೆಯಲ್ಲಿವೆ. ಅದನ್ನು ಬಳಸಿದ್ದೆ ಆದಲ್ಲಿ, ನೈಸರ್ಗಿಕ ವಿಕೋಪದ ಕಡೆಗೆ ನಡಿಗೆ ಹಾಕಿದ್ದೆ ಆದಲ್ಲಿ, ಗಗನಚುಂಬಿ ಕಟ್ಟಡವಾಗಲಿ, ಗುಡ್ಡ ಸಮತಟ್ಟು ಮಾಡಿ ಕಟ್ಟಿದ ಮನೆಗಳು, ಯಾವುದೇ ಕನಸಿನ ಯೋಚನೆಯಾಗಲಿ ಉಳಿಯದು. ಇದು ತಿಳಿದಿದ್ದರೂ, ಮಾನವ ಹಳೆಯ ಚಾಳಿಯನ್ನೇ ಮುಂದುವರಿಸುತ್ತಿದ್ದಾನೆ. ಯಾಕೆಂದರೆ ಅತಿಯಾಸೆಗೆ ಆತ ಬಲಿಯಾಗಿದ್ದಾನೆ.
ಹಚ್ಚ ಹಸುರುನಿಂದ ಕಂಗೊಳಿಸುತ್ತಿದ್ದ ಮಲೆಗಳು ಇಂದು ನಿರಂತರ ಮಳೆಗೆ ಜರಿಯುತ್ತಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಬೆಳವಣಿಗೆ ಹೆಚ್ಚಿದೆ. ಇದಕ್ಕೆ ಕಾರಣ ಮಾನವನ ಪ್ರಕೃತಿ ಮೇಲಿನ ಅತಿಯಾದ ಮಮಕಾರ, ಪ್ರೀತಿ. ಈ ಪ್ರೀತಿ ತಮ್ಮ ನೆಲೆಯನ್ನೇ ಕೆಡಿಸುವಷ್ಟು, ನದಿಯ ದಿಕ್ಕನ್ನೇ ಬದಲಾಯಿಸುವಷ್ಟು, ಸಾವನ್ನು ಇನ್ನಷ್ಟು ಹತ್ತಿರಕ್ಕೆ ತರುವಷ್ಟು. ಇದುವೇ ಮಾನವನಿಗೆ ಪ್ರಕೃತಿ ಮೇಲಿನ ಅಭಿಮಾನ.
ಶಿರೂರು ಮತ್ತು ವಯನಾಡಿನಲ್ಲಿ ಸಂಭವಿಸಿದ ಘಟನೆಗಳು ಎಷ್ಟೇ ನಡೆದರೂ ಪ್ರಕೃತಿ ಪೀಡಕರಿಗೆ ಮಾತ್ರ ಬುದ್ಧಿ ಬರದು. ಕಾಡನ್ನು ನಾಡಾಗಿ ಮಾಡುವ ಅವಸರ ಅವರನ್ನು ಸರಸರನೇ ಪರಲೋಕಕ್ಕೆ ಕೊಂಡೊಯ್ಯುತ್ತದೆ ಎನ್ನುವ ಸತ್ಯ ಅವರ ಅರಿವಿಗೆ ಬರುವುದು ಯಾವತ್ತೋ?
ಪ್ರತೀ ಮಳೆ ಬಂದಾಗಲೂ ಪ್ರೇ ಫಾರ್ ಕೇರಳ, ಪ್ರೇ ಫಾರ್ ವಯನಾಡು ಎನ್ನುವ ಸ್ಟೇಟಸ್ ಎಲ್ಲರ ಮೊಬೈಲ್ ನಲ್ಲೂ ಹರಿದಾಡುತ್ತದೆ. ಮಾನವ ಮಾಡಿದ ತಪ್ಪಿಗೆ ದೇವರಲ್ಲಿ ಕ್ಷಮೆ ಕೋರಿದರೆ ಏನು ಫಲ? ಅತಿಯಾಸೆ ಗತಿಗೇಡು ಮಾಡುವ ಚಿಂತೆಯನ್ನು ಆತ ಈ ಮೊದಲೇ ಕೈ ಬಿಟ್ಟಿದ್ದರೆ ಈ ಗತಿ ಬರುತ್ತಿತ್ತಾ. ಈ ರೀತಿಯ ಸರಣಿ ಘಟನೆಗಳು ನಡೆಯುತ್ತಿತ್ತಾ? ಖಂಡಿತವಾಗಿಯೂ ಇಲ್ಲ.
ಇನ್ನಾದರೂ ಎಚ್ಚೆತ್ತುಕೋ ಮಾನವ ನಿನ್ನ ಬಳಿ ಇರುವುದು ಇನ್ನು ಕೆಲವೇ ದಿನಗಳು ಮಾತ್ರ. ನಮ್ಮನ್ನು ಸಲಹುವ ಪರಿಸರದ ಒಡಲನ್ನು ಬರಿದು ಮಾಡಬೇಡ. ನಿನ್ನ ಮುಂದಿನ ತಲೆಮಾರು ಬೆಳಕು ಕಾಣಲು ಪರಿಸರ ಬೇಕೆಂಬುದನ್ನು ಮರೆಯಬೇಡ. ನಾನು ಏನೇ ಮಾಡಿದರು ಏನು ಆಗದೆಂದು ಮೆರೆಯಬೇಡ. ಕರ್ಮ ಯಾರನ್ನೂ ಬಿಡುವುದಿಲ್ಲ.
- ಗಿರೀಶ್ ಪಿ.ಎಂ.
ಕಾಸರಗೋಡು