Advertisement
ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಹರಿದಾಡಿರುವ ಧಾರ್ಮಿಕ ಮುಖಂಡರೊಬ್ಬರ ಆಡಿಯೋ ತುಣುಕು ಮಂಗಳೂರಿನ ಬಂಟ್ವಾಳದ ಸುತ್ತಮುತ್ತ ಗುಪ್ತವಾಗಿ ಐಸಿಸ್ ಚಟುವಟಿಕೆಗಳು ನಡೆಯುತ್ತಿರುವ ಶಂಕೆ ಮೂಡಿಸಿದೆ. ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಎಂಬ ಧಾರ್ಮಿಕ ಸಂಘಟನೆಯ ಮುಖ್ಯಸ್ಥರಾಗಿರುವ ಇಸ್ಮಾಯಿಲ್ ಶಾಫಿ ಆಡಿಯೊ ತುಣುಕು ತನ್ನದೇ ಮತ್ತು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಾನೇ ಯುವಕರಿಗೆ ಐಸಿಸ್ ಆಕರ್ಷಣೆಗೆ ಒಳಗಾಗದಂತೆ ಎಚ್ಚರಿಕೆ ನೀಡಿದ್ದೆ ಎಂದು ಒಪ್ಪಿಕೊಂಡಿರುವುದರಿಂದ ಈ ಶಂಕೆಗೆ ಪುಷ್ಟಿ ಒದಗಿದೆ.
Related Articles
Advertisement
ಐಸಿಸ್ ಉಳಿದ ಉಗ್ರ ಸಂಘಟನೆಗಳಿಗಿಂತ ಭಿನ್ನವಾಗಿ ಹೊಸಬರನ್ನು ಸೇರಿಸಿಕೊಳ್ಳಲು ತನ್ನದೇ ಆದ ವಿಧಾನವನ್ನು ಅನುಸರಿಸುತ್ತಿದೆ. ಸೋಷಿಯಲ್ ಮೀಡಿಯಾಗಳನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡು ಮೊದಲು ಬ್ರೈನ್‌ವಾಶ್ ಮಾಡಿ ಸೇರಿಸಿಕೊಳ್ಳುವ ವ್ಯವಸ್ಥಿತ ಕಾರ್ಯತಂತ್ರ ಐಸಿಸ್‌ನದ್ದು. ಕೇರಳದಲ್ಲಿ ಅನೇಕ ವಿದ್ಯಾವಂತ ಯುವಕರು ಐಸಿಸ್ ಪ್ರತಿಪಾದಿಸುವ ಪವಿತ್ರ ಜೀವನದ ಆಕರ್ಷಣೆಗೆ ಬಿದ್ದಿರುವುದು ಪದೇ ಪದೇ ವರದಿಯಾಗುತ್ತಿದೆ. ಎರಡು ರೀತಿಯ ಉಗ್ರರನ್ನು ಐಸಿಸ್ ತಯಾರು ಮಾಡುತ್ತಿದೆ. ಸಿರಿಯಾ ಅಥವಾ ಇರಾಕ್‌ಗೆ ಹೋಗಿ ಕಾಲಾಳುಗಳಾಗಿ ಹೋರಾಡಲು ಪ್ರೇರೇಪಿಸುವುದು, ಇಲ್ಲವೇ ಇಲ್ಲಿಯೇ ಇದ್ದುಕೊಂಡು ಸಮಯ ನೋಡಿ ದಾಳಿ ಮಾಡಲು ತಯಾರಾಗಿರುವುದು.
ಲಂಡನ್ ಮತ್ತು ಪ್ಯಾರಿಸ್‌ನಲ್ಲಿ ಇತ್ತೀಚೆಗೆ ದಾಳಿ ಮಾಡಿರುವುದು ಎರಡನೇ ಮಾದರಿಯ ಉಗ್ರರು. ಇವರನ್ನು ಒಂಟಿ ತೋಳಗಳೆಂದು ಕರೆಯುತ್ತಾರೆ. ಅಂದರೆ ಏಕಾಂಗಿಯಾಗಿ ಹೋಗಿ ದಾಳಿ ಮಾಡುವವರು.
ಕರಾವಳಿ ಭಾಗದಲ್ಲಿ ಕಳೆದ ಕೆಲ ಸಮಯಗಳಿಂದ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ಸ್ವರೂಪ ಮಾಮೂಲಿಯಾಗಿಲ್ಲ ಎನ್ನುವುದು ಅರಿವಾಗುತ್ತದೆ. ಚಿಕ್ಕಪುಟ್ಟ ವಿಷಯಗಳೂ ಕೋಮು ಸ್ವರೂಪ ಪಡೆದುಕೊಂಡು ಮಾರಾಮಾರಿಯಾಗುವ ಗಂಭೀರ ಸ್ಥಿತಿಗೆ ಪದೇ ಪದೇ ಕರಾವಳಿ ಸಾಕ್ಷಿಯಾಗುತ್ತಿದೆ. ಯುವ ಜನತೆ ಧಾರ್ಮಿಕ ಮೂಲಭೂತವಾದದತ್ತ ಆಕರ್ಷಿತರಾಗುತ್ತಿರುವುದು ಢಾಳಾಗಿ ಕಾಣಿಸುತ್ತಿದೆ. ಹೀಗಾಗಿ ಈ ಶಂಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಐಸಿಸ್‌ಗೆ ಸೇರಿಸಿಕೊಳ್ಳುವವರು, ಹಣಕಾಸಿನ ಸಹಾಯ ಮಾಡುವವರು, ಪ್ರಚಾರ ಮಾಡುವವರು ಮತ್ತು ಸಂಚು ಮಾಡುವವರ ಮೇಲೂ ಕಣ್ಣಿಡುವ ಅಗತ್ಯವಿದೆ. ಗುಪ್ತಚರ ಪಡೆಯನ್ನು ಚುರುಕುಗೊಳಿಸುವುದರಿಂದ ಪೊಲೀಸರು ಇನ್ನಷ್ಟು ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸಿದರೆ ಐಸಿಸ್ ಪ್ರಭಾವವನ್ನು ಕೊಂಚ ಮಟ್ಟಿಗೆ ತಡೆಯಬಹುದು. ಇದಕ್ಕೂ ಮೊದಲು ಎಲ್ಲ ಧಾರ್ಮಿಕ ಮುಖಂಡರು ತಮ್ಮ ತಮ್ಮ ಧರ್ಮಗಳ ಮೂಲಭೂತವಾದದತ್ತ ಯುವಕರ ಮನಸ್ಸು ತಿರುಗದಂತೆ ಮಾಡಬೇಕು. ಅನಾಹುತವಾಗುವ ಮೊದಲು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.