Advertisement

ಅನಾಹುತ ಸಂಭವಿಸಿದ ನಂತರವೇ ಎಚ್ಚರಾಗೋದಾ?

12:49 PM Nov 22, 2017 | Team Udayavani |

ಹುಬ್ಬಳ್ಳಿ: ಅದು ಸರಿಸುಮಾರು ಒಂದುವರೆ ಶತಮಾನದ ಇತಿಹಾಸ ಹೊಂದಿದ ಶಾಲೆ. ಕಟ್ಟಡ ಶಿಥಿಲಗೊಂಡು ಯಾವಾಗ ಏನು ಅನಾಹುತ ಕಾದಿದೆಯೋ ಎಂಬ ಆತಂಕದಲ್ಲೇ ವಿದ್ಯಾರ್ಥಿಗಳು, ಶಿಕ್ಷಕರು ದಿನದೂಡಬೇಕಾಗಿದೆ. ಕಟ್ಟಡ ಅಪಾಯಕರ ಸ್ಥಿತಿಯಲ್ಲಿದ್ದರೂ ಇದರ ತೆರವಿಗೆ ಶಿಕ್ಷಣ ಇಲಾಖೆ ಇನ್ನೂ ಮನಸ್ಸು ಮಾಡಿಲ್ಲ. 

Advertisement

ಏನಾದರೂ ಅನಾಹುತವಾದ ಮೇಲೆ ನೋಡಿದರಾಯಿತು ಎಂದು ಕುಳಿತಿದೆಯೋ ಏನೋ. -ಇದು, ಇಲ್ಲಿನ ಪೆಂಡರಾಗಲ್ಲಿಯ  ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 2ರ ದುಸ್ಥಿತಿ. 1861ರಲ್ಲಿ ಆರಂಭವಾದ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವೇದಿಕೆಯಾಗಿದೆ.

ಇದೇ ಶಾಲೆಯಲ್ಲಿ ಕಲಿತ ಅನೇಕರು ಉತ್ತಮ ಸ್ಥಾನದಲ್ಲಿಯೂ ಇದ್ದಾರೆ. ಕಟ್ಟಡ ಶಿಥಿಲಗೊಂಡಿದೆ ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಶಿಕ್ಷಣ ಇಲಾಖೆ ತನ್ನ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂಬ ಆರೋಪ ಪಾಲಕರದ್ದು.

ಶಾಲೆಯ ಹೊರಭಾಗದ   ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು, ಕಟ್ಟಡದ ಸುತ್ತಲು ಇರುವ ಸಜ್ಜಾ ಕಿತ್ತು ಹೋಗಿದೆ. ಒಳಭಾಗದಲ್ಲಿರುವ ಕಟ್ಟಡ ಗೋಡೆಗೆ ಹೊಂದಿಕೊಂಡು ಸೋರುತ್ತಿದೆ. ಮಳೆ ಬಂದರೆ ಮಕ್ಕಳು ಸೋರಿಕೆ ಕಟ್ಟಡದಲ್ಲೇ ಪಾಠ ಕೇಳಬೇಕು.

ಶೌಚಾಲಯದ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಇಂದೋ ನಾಳೆಯೋ ಬೀಳುವಂತಿದೆ. ಈ ಹಿಂದೆ ಇದೇ ಕಟ್ಟಡದಲ್ಲಿದ್ದ ಪ್ರೌಢಶಾಲೆಯ ಮುಖ್ಯಾಧ್ಯಾಪಕರ ಕೊಠಡಿಯಲ್ಲಿ ಮೇಲ್ಭಾಗದ ಸಜ್ಜಾ ಕುಸಿದು ಬಿದ್ದಿದ್ದು, ಕಬ್ಬಿಣದ ಸರಳುಗಳು ಕಾಣುತ್ತಿವೆ.

Advertisement

ಮೇಲ್ಛಾವಣಿ ಕುಸಿದು ಬಿದ್ದಾಗ ಮಕ್ಕಳು ಹಾಗೂ ಸಿಬ್ಬಂದಿ ಗಾಯಗೊಂಡಿದ್ದರು. ನ. 20ರಂದು ಶಾಲೆಯ ಗೋಡೆಯ ಭಾಗ ಕುಸಿದು ಬಿದ್ದು ಇಬ್ಬರು ಆಯಾಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಕ್ಕಳ ಮೇಲೆ ಗೋಡೆ ಬಿದ್ದರೆ ಗತಿ ಏನು ಎಂಬುದು ಶಿಕ್ಷಕರು ಹಾಗೂ ಪಾಲಕರ ಆತಂಕವಾಗಿದೆ.

ಕಟ್ಟಡದಲ್ಲಿ ಒಟ್ಟು 17 ಕೊಠಡಿಗಳಿದ್ದು ಸುಮಾರು 7 ಶಿಕ್ಷಕರು ಹಾಗೂ 128 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರೌಢಶಾಲೆಯ ಕಟ್ಟಡ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಪ್ರಾಥಮಿಕ ಶಾಲೆ ಮಾತ್ರ ಹಳೇ ಕಟ್ಟಡದಲ್ಲಿಯೇ ಮುಂದುವರಿದಿದೆ.

ಹಲವು ಬಾರಿ ಮನವಿ: ಶಾಲೆ ಕಟ್ಟಡ ನವೀಕರಣಕ್ಕೆ 2012 ಹಾಗೂ 2014ರಲ್ಲಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲವಾಗಿದೆ. ಸೋಮವಾರ ಬೆಳಗ್ಗೆ ಎಂದಿನಂತೆ ಶಾಲೆ ಕೆಲಸಕ್ಕೆ ಹಾಜರಾಗಿ ಮೇಲ್ಭಾಗ ಕೊಠಡಿ ಸ್ವತ್ಛತೆಗೆ ತೆರಳಿದ್ದಾಗ ಕಟ್ಟಡ ಗೋಡೆ ಕುಸಿದು ಬಿತ್ತು.

ಗೋಡೆಯ ಸಿಮೆಂಟ್‌ ಗಿಲಾವ್‌ ಮಾಡಿರುವ ಪದರುಗಳು ಮೈ ಮೇಲೆಲ್ಲಾ ಬಿದ್ದವು. ನಮಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಕ್ಕಳಿದ್ದರೆ ಏನು ಗತಿ ಎಂಬುದು ಶಾಲೆಯ ಆಯಾಗಳಾದ ವಿದ್ಯಾ ನಾಶಿಪುಡಿ ಹಾಗೂ ಶೋಭಾ ಹಡಪದ ಅವರ ಮಾತು. 

* ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next