ಅಂತೂ ಈ ವರ್ಷದ ಫೆಬ್ರವರಿ 14 ಕಳೆದು ಹೋಯ್ತು. ಪ್ರತಿ ವರ್ಷದ ಹಾಗೆಯೇ ನನ್ನ ನಿರೀಕ್ಷೆ ಮತ್ತೆ ಹುಸಿಯಾಯ್ತು. ಅದೆಷ್ಟು ದಿನಗಳಾದವು ನಿನ್ನ ದನಿ ಕೇಳಿ? ಮೊದಲೆಲ್ಲಾ ಪ್ರೇಮಿಗಳ ದಿನ ಬಂತೆಂದರೆ ಅದೆಷ್ಟು ಸಂತಸದಿಂದ ನನಗೆ ಫೋನ್ ಮಾಡುತ್ತಿದ್ದೆ. ದಿನವೂ “ಐ ಲವ್ ಯೂ’ ಅನ್ನುತ್ತಿದ್ದರೂ, ಆವತ್ತು ಮತ್ತೆ ಮತ್ತೆ ಆ ಮಾತುಗಳನ್ನು ನುಡಿಯದಿದ್ದರೆ ನಿನಗೆ ಸಮಾಧಾನವಾಗುತ್ತಿರಲಿಲ್ಲ. ಅದೆಲ್ಲಾ ಈಗಲೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿವೆ.
ನಾನೋ ಹುಡುಗಿಯರೆಂದರೆ ಮಾರುದ್ದ ದೂರ ಸರಿಯುವ ಆಸಾಮಿ. ಅದು ಹೇಗೋ ನಿನ್ನೊಂದಿಗೆ ಸ್ನೇಹ ಮಾಡಿದ್ದೆ. ಸ್ನೇಹವೆಂದೂ ಪ್ರೇಮಕ್ಕೆ ತಿರುಗಬಾರದೆಂದು ಲಕ್ಷ್ಮಣ ಗೆರೆ ಹಾಕಿದ್ದವಳೇ ನೀನು. ಆದರೆ ನೀನೇ ಆ ಗೆರೆಯನ್ನು ಮೊದಲು ದಾಟಿದವಳು. ಅಲಿಖೀತ ಸಂವಿಧಾನಕ್ಕೆ ಆಗಾಗ ಬೇಕಾದಂತೆ ತಿದ್ದುಪಡಿ ಮಾಡಿದವಳೂ ನೀನೇ. ಕೆಲವೊಮ್ಮೆ ನಿನ್ನ ತುಂಟಾಟಗಳಿಗೆ ನಾನೇ ಮೂಕನಾಗಿಬಿಡುತ್ತಿದ್ದೆ.
ನಿಜ, ನಾನೀಗ ನಿಜವಾಗಿಯೂ ಮೂಕನಾಗಿದ್ದೇನೆ. ಪ್ರತಿ ಬಾರಿ ಈ ಹಾಳು ಮೊಬೈಲ… ರಿಂಗ್ ಆದಾಗೆಲ್ಲ, ನಿನ್ನದೇ ಕರೆ ಎಂದು ಭಾವಿಸುತ್ತೇನೆ. ಮೊಬೈಲ… ಕಂಪನಿಯವರು ಕಳುಹಿಸುವ ಮೆಸೇಜ್‌ಗಳಲ್ಲೂ ನಿನ್ನನ್ನೇ ಹುಡುಕುತ್ತೇನೆ. ಫೆಬ್ರವರಿ 14ಕ್ಕಾದರೂ ನೀನು ಮೆಸೇಜ್ ಮಾಡಬಹುದೆಂದು ಆಸೆಯಿಂದ ಕಾಯುತ್ತಿದ್ದೆ. ಆದರೆ ನನ್ನ ನಿರೀಕ್ಷೆಗಳೆಲ್ಲ ಪ್ರತಿ ಸಾರಿ ಸುಳ್ಳಾಗುತ್ತವೆ. ಪ್ರತಿ ವರ್ಷ ಆ ದಿನದಂದು ನಿನಗೆ ವಿಷ್ ಮಾಡುತ್ತೇನೆಂದು ನೀನು ಆ ದಿನ ಹೇಳಿದ ಮಾತನ್ನು ಕ್ಯಾಲೆಂಡರ್ ನೆನಪಿಸುತ್ತದೆ. ಆದರೆ, ನೀನು ಅದನ್ನು ಮರೆತು ಸುಮಾರು ವರ್ಷಗಳೇ ಕಳೆದವು.
ಅದೆಲ್ಲಾ ಈಗ ಇತಿಹಾಸ. ಹಳೆಯದ್ದನ್ನು ಮತ್ತೆ ಕೆದಕಬಾರದಂತೆ. ಆದರೂ, ಒಂದು ಪ್ರಶ್ನೆ; ನನ್ನನ್ನು ಮರೆಯುವಂಥ ತಪ್ಪನ್ನು ನಾನೇನು ಮಾಡಿದೆ? ಅದನ್ನು ನೀನೇ ಹೇಳಬೇಕು. ಪ್ರೀತಿ ಪ್ರೇಮದ ಮಾಯೆಯಿಂದ ಹೊರಹೋದರೂ, ಸ್ನೇಹಿತರಾಗಿ ಉಳಿಯಬಹುದಲ್ಲಾ? ನಿನ್ನ ಸ್ನೇಹಿತರ ಬಳಗಕ್ಕೆ ಮತ್ತೆ ನನ್ನನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲವೇ?
ವೆಂಕಟೇಶ ಚಾಗಿ