ನಾನು ಇಲ್ಲಿ ಒಬ್ಬಂಟಿಯಾಗಿ ಕಾಯ್ತಿದೀನಿ ಅಂತ ಅಂದ್ಕೋಬೇಡ, ನೀನು ಬಿಟ್ಟು ಹೋಗಿರೋ ನೆನಪುಗಳು ಸದಾ ನನ್ನ ಜೊತೆ ಇರುತ್ತವೆ. ಅವು ನನ್ನತ್ರ ಮಾತಾಡ್ತವೆ. ಈ ನೆನಪು ಅನ್ನೋ ಇಂಧನ ಅಷ್ಟೇ ಸಾಕು ಜೀವನ ಅನ್ನೋ ಗಾಡಿ ಓಡೋಕೆ. ನೀನು ಬರೋತನಕ ಈ ಓಟ ನಿಲ್ಲೋದಿಲ್ಲ,
ಯಾರಾದರೂ ನಾಳೆ ಅಲ್ಲಿಗೆ ಬರ್ತೀನಿ ಕಾಯ್ತಾ ಇರು ಅಂತ ಹೇಳಿದ್ರೆ, ಅವರಿಗೋಸ್ಕರ ಕಾಯೋದರಲ್ಲೇನೋ ಅರ್ಥ ಇದೆ. ಯಾಕಂದ್ರೆ, ಅವರು ಬರ್ತಾರೆ ಅನ್ನೊ ನಂಬಿಕೆ ಇರುತ್ತೆ. ಅದೇ ಥರ ನಾನೂ ಕೂಡ ಕಾಯ್ತಿದೀನಿ, ಆದ್ರೆ ಈ ಕಾಯುವಿಕೆಗೆ ಅರ್ಥ ಇದೆಯೋ ಇಲ್ವೋ ಗೊತ್ತಿಲ್ಲ. ನೀನು ಬರ್ತಿಯೊ ಇಲ್ವೋ ಅಂತಾನೇ ಗೊತ್ತಿಲ್ಲ. ಆದರೂ ಕಾಯ್ತಿದೀನಿ. ನಾನು ನನ್ನ ಜೀವನದಲ್ಲೇ ಇಷ್ಟು ಯಾರಿಗೂ ಕಾದಿಲ್ಲ. ಮೇಲಾಗಿ, ನಂಗೆ ಒಂದಿಷ್ಟೂ ತಾಳ್ಮೆ ಇದ್ದಿಲ್ಲ. ಇಂಥವನನ್ನು ತಾಳ್ಮೆಯ ಮೂರ್ತಿಯನ್ನಾಗಿಸಿದ್ದು ನೀನು. ಕಾಯುವಿಕೆಯಲ್ಲಿಯೂ ಅಷ್ಟು ಹಿತವಿರುತ್ತದೆ ಎಂದು ಕಲಿಸಿಕೊಟ್ಟವಳು ನೀನು. ನನಗೂ ಕೂಡ ಇಷ್ಟು ತಾಳ್ಮೆ ಇದೆ ಎಂದು ತೋರಿಸಿಕೊಟ್ಟಿದ್ದು ನೀನು.
ನಾನು ನಿನ್ನನ್ನ ಪ್ರೀತಿಸ್ತಿದ್ದೀನಿ ಅಂತ ಹೇಳಿದ್ದಕ್ಕೆ, ನಾಳೆ ಸಿಗುವಾ ಅಂದಿದ್ದೆ. ಜ್ಞಾಪಕ ಇದೆಯಾ? ಅಷ್ಟೇ ಸಾಕಿತ್ತು ಈ ಜೀವಕ್ಕೆ, ಅವತ್ತು ಮನಸು ಆಗ ತಾನೇ ಹಾರಾಡೋದು ಕಲಿತ ಪಕ್ಷಿಯ ಹಾಗೆ ಆಕಾಶದ ತುಂಬೆಲ್ಲ ಹಾರಾಡ್ತಾ ಇತ್ತು. ರಾತ್ರಿಯಿಡೀ ನೀನು ನಾಳೆ ಏನು ಹೇಳ್ತಿಯೋ ಅನ್ನೋ ಯೋಚನೆಯಲ್ಲೇ ನಿದ್ದೆಗೂ ಕೂಡ ಬ್ರೇಕ್ ಬಿತ್ತು. ನೀನು ಹೇಳಿದ ಜಾಗದಲ್ಲಿ ಸೂರ್ಯ ಹುಟ್ಟಿ, ತಿರುಗಿ ಅವನು ಸಾಯೋವರೆಗೂ ಕಾದೆ. ಆದರೆ, ನೀನು ಬರಲೇ ಇಲ್ಲ. ನಾನು ಅಲ್ಲಿಯರೆಗೂ, ಯಾರಿಗೂ ಅಷ್ಟು ಕಾದದ್ದಿಲ್ಲ. ನಂಗೆ ಕಾಯೋ ಬೇಸರಕ್ಕಿಂತ ನೀನು ಬರ್ತೀಯ ಅನ್ನೋ ಖುಷಿನೇ ಜಾಸ್ತಿ ಇತ್ತು.
ಮರುದಿನ ಕೂಡ ಅದೇ ಖುಷಿಲೇ ಕಾಯ್ತಿದ್ದೆ. ಆ ದಿನ ನೀನು ಬಂದೆ. ನಿನ್ನೆ ಯಾಕೆ ಬರಲಿಲ್ಲ ಅಂತ ಕೇಳಬೇಕು ಅನ್ಕೊಂಡೆ, ಅಷ್ಟರಲ್ಲಿ ನೀನೇ, “ಸಾರಿ, ನಿನ್ನೆ ದೇವಸ್ಥಾನಕ್ಕೆ ಹೋಗಿದ್ವಿ. ಅದಕ್ಕೇ ಬರೋಕೆ ಆಗಲಿಲ್ಲ ‘ ಅಂತ ಒಂದೇ ಉಸಿರಲ್ಲಿ ಹೇಳಿದೆ. ನನ್ನ ಪ್ರೀತಿಯನ್ನೂ ಸ್ವೀಕರಿಸಿದೆ. ಆಗಿನಿಂದ ನಿನ್ನ ಕಾಯೋದೇ ಒಂದು ಕೆಲಸ ಆಗಿತ್ತು.
ಆದರೆ, ನೀನು ಹೀಗೆ ನನಗೆ ಶಾಶ್ವತವಾಗಿ ಕಾಯೋ ಕೆಲಸ ಕೊಟ್ಟು ಹೋಗ್ತಿಯ ಅಂತ ಅನ್ಕೊಂಡಿದ್ದಿಲ್ಲ. ನೀನು ಬರುವುದಕ್ಕೆ ನೂರೆಂಟು ವಿಘ್ನಗಳು ಎದುರಾಗುತ್ತವೆ ಅಂತ ನನಗೆ ಚೆನ್ನಾಗಿ ಗೊತ್ತು. ಅದ್ಯಾವ ವಿಘ್ನ ನಿನ್ನನ್ನು ಯಾವತ್ತೂ ಬರದೆ ಇರೋ ಹಾಗೆ ತಡೆದಿದ್ದು? ನಿನ್ನ ಬಗ್ಗೆ ವಿಚಾರಿಸೋಣ ಎಂದರೆ, ನಿನ್ನ ಸ್ನೇಹಿತರು ನನಗೆ ತಿಳಿದಿಲ್ಲ, ನಿನ್ನ ಮೊಬೈಲ್ ಸ್ವಿಚ್ ಆಫ್ ಆಗಿ ಯಾವುದೋ ಕಾಲವಾಗಿದೆ. ನಿನ್ನ ಮನೆ ವಿಳಾಸ ಗೊತ್ತಿಲ್ಲ. ನಾನು ಇಲ್ಲಿ ಒಬ್ಬಂಟಿಯಾಗಿ ಕಾಯ್ತಿದೀನಿ ಅಂತ ಅಂದ್ಕೋಬೇಡ, ನೀನು ಬಿಟ್ಟು ಹೋಗಿರೋ ನೆನಪುಗಳು ಸದಾ ನನ್ನ ಜೊತೆ ಇರುತ್ತವೆ. ಅವು ನನ್ನತ್ರ ಮಾತಾಡ್ತವೆ. ಈ ನೆನಪು ಅನ್ನೋ ಇಂಧನ ಅಷ್ಟೇ ಸಾಕು ಜೀವನ ಅನ್ನೋ ಗಾಡಿ ಓಡೋಕೆ. ನೀನು ಬರೋತನಕ ಈ ಓಟ ನಿಲ್ಲೋದಿಲ್ಲ, ಈ ನೆನಪು ಅನ್ನೋ ಇಂಧನ ಎಂದೂ ಖಾಲಿಯಾಗಲ್ಲ. ನಾನು ಈಗಲೂ ಸಹ ನಮ್ಮ ಮೊದಲ ಭೇಟಿಗೆ ಹೇಗೆ ಕಾಯ್ತಾ ಇದ್ದೆನೋ ಹಾಗೇ ಕಾಯ್ತಿದೀನಿ. ನೀನು ಯಾವಾತ್ತಾದರೂ ಒಂದು ದಿನ ಬರ್ತಿಯ ಅಂತ ಬರ್ತೀಯ ಅಲ್ವಾ…!?
– ಈರಯ್ಯ ಉಡೇಜಲ್ಲಿ.