ಹುಬ್ಬಳ್ಳಿ: ದೂರದ ಮಾರ್ಗಗಳಿಗೆ ರೈಲಿನ ಮೂಲಕ ಪ್ರಯಾಣಿಸುವವರು ಆರಾಮದಾಯಕ ಪ್ರಯಾಣದ ದೃಷ್ಟಿಯಿಂದ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ.
ಆದರೆ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮುಂಗಡ ಟಿಕೆಟ್‌ಗಾಗಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿಯಿದೆ. ನೈಋತ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಮುಂಗಡ (ಆರಕ್ಷಣ) ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ಪ್ರತಿದಿನ ಪರಿತಪಿಸುತ್ತಿದ್ದಾರೆ. ಅದರಲ್ಲೂ ಸಾಲು ಸಾಲು ಸರಕಾರಿ ರಜೆಗಳ ದಿನಗಳಲ್ಲಿ ಹಾಗೂ ಶಾಲಾ ಮಕ್ಕಳ ಬೇಸಿಗೆ ಮತ್ತು ದಸರಾ ಹಬ್ಬದ ರಜೆ ಸಂದರ್ಭದಲ್ಲಂತೂ ದಿನಗಟ್ಟಲೇ ಸಾಲುಗಟ್ಟಿ ನಿಂತು ಮುಂಗಡ ಟಿಕೆಟ್ ಪಡೆಯುವಂತಾಗಿದೆ.
ರೈಲ್ವೆಗಳಲ್ಲಿ ಪ್ರಯಾಣಿಸುವವರ ಸಂಖ್ಯೆ, ಜೊತೆಗೆ ರೈಲುಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಲಾಖೆಯು ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಯಾಣಿಕರಿಗೆ ಹೆಚ್ಚೆಚ್ಚು ಸೌಲಭ್ಯ ಕಲ್ಪಿಸಬೇಕಾಗುತ್ತದೆ. ಆದರೆ ಹುಬ್ಬಳ್ಳಿಯ ರೈಲ್ವೆ ಆರಕ್ಷಣ ಕೇಂದ್ರದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. 6 ಕೌಂಟರ್‌ಗಳಿದ್ದರೂ ಕಾರ್ಯನಿರ್ವಹಿಸುತ್ತಿರುವುದು ಮಾತ್ರ 3 ಇಲ್ಲವೆ 4 ಮಾತ್ರ ಎಂಬ ಆರೋಪ ಕೇಳಿಬರುತ್ತಿದೆ.
ಹುಬ್ಬಳ್ಳಿ ನಿಲ್ದಾಣವು ದೇಶದ ಪ್ರಮುಖ ನಗರ, ಪ್ರವಾಸಿತಾಣಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಜಂಕ್ಷನ್ ಆಗಿದೆ. ಇಲ್ಲಿಂದ ಬೆಂಗಳೂರು, ಮೈಸೂರು, ಮುಂಬಯಿ, ದೆಹಲಿ, ಜೋಧಪುರ, ಗೋವಾ, ಹೈದರಾಬಾದ್, ತಿರುಪತಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳು ಸಂಚರಿಸುತ್ತವೆ. ಆದರೆ ಪ್ರಯಾಣಿಕರು ಆರಕ್ಷಣ (ಮುಂಗಡ) ಟಿಕೆಟ್ ಕಾಯ್ದಿರಿಸಬೇಕೆಂದರೆ ಪರದಾಡಬೇಕಾಗಿದೆ.
ಕೆಲಸ ನಿರ್ವಹಣೆ 3ರಲ್ಲಿ ಮಾತ್ರ: ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರದಲ್ಲಿ ಒಟ್ಟು ಆರು ಕೌಂಟರ್ ಗಳಿವೆ. ಇವು ರಜೆದಿನ ಹೊರತು ಪಡಿಸಿ ಇನ್ನುಳಿದ ದಿನಗಳಂದು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆ ವರೆಗೆ ಹಾಗೂ ರಜೆ ದಿನದಂದು ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಕಾರ್ಯನಿರ್ವಹಿಸುತ್ತವೆ. 6 ಕೌಂಟರ್ ಗಳಲ್ಲಿ ಒಂದು ವಿಚಾರಣೆಗಾಗಿ, ಇನ್ನೊಂದು ಅಂಗವಿಕಲರು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಇನ್ನುಳಿದ ನಾಲ್ಕು ಸಾಮಾನ್ಯ ಕೌಂಟರ್‌ಗಳಲ್ಲಿ ಎರಡು ಕೌಂಟರ್ ಗಳಲ್ಲಿ ಮಾತ್ರ ಆರಕ್ಷಣ ಟಿಕೆಟ್ ಕೊಡಲಾಗುತ್ತದೆ. ಬಾಕಿ ಎರಡು ಕೌಂಟರ್‌ಗಳು ತೆರೆಯುವುದೇ ಇಲ್ಲ. ಸಾಮಾನ್ಯ ಎರಡು ಕೌಂಟರ್‌ಗಳಲ್ಲಿ ಬೆಳಗ್ಗೆ ಒಂದು ತಾಸು ತತ್ಕಾಲ್ ಟಿಕೆಟ್ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮುಂಗಡ ಟಿಕೆಟ್ ನೀಡುವುದನ್ನು ಸ್ಥಗಿತಗೊಳಿಸಲಾಗಿರುತ್ತದೆ. ಒಮ್ಮೊಮ್ಮೆ ಆರಕ್ಷಣ ಕೇಂದ್ರದ ಸಿಬ್ಬಂದಿ ರಜೆಯಲ್ಲಿದ್ದರೆ ಒಂದೇ ಕೌಂಟರ್ ತೆರೆದಿರುತ್ತದೆ. ಹೀಗಾಗಿ ಮುಂಗಡ ಟಿಕೆಟ್ ಕಾಯ್ದಿರಿಸಲು ಜನರು ಸಾಲುಗಟ್ಟಿ 3-4 ತಾಸುಗಟ್ಟಲೇ ಕಾಯುತ್ತ ನಿಲ್ಲಬೇಕಾಗಿದೆ. ಅದರಲ್ಲೂ ಹಬ್ಬದ ದಿನಗಳು, ರಜೆಯ ದಿನಗಳಂತೂ ಹೇಳತೀರದು. ದಿನಪೂರ್ತಿ ಟಿಕೆಟ್‌ಗಾಗಿ ಕಾಯುತ್ತ ನಿಲ್ಲಬೇಕು. ಅದರಲ್ಲೂ ಪೀಕ್ ಸಮಯದಲ್ಲೇ ಬಹಳಷ್ಟು ಸಮಸ್ಯೆ ಆಗುತ್ತಿದೆ ಎಂಬುದು ಪ್ರಯಾಣಿಕರ ಆರೋಪವಾಗಿದೆ.
ಸಮಸ್ಯೆಗೆ ಮೂಲ ಕಾರಣ : ಆರಕ್ಷಣ ಕೇಂದ್ರ ನಿರ್ವಹಣೆ ಮಾಡುತ್ತಿರುವ ಇಲಾಖೆಯ ಅಧಿಕಾರಿಗಳು ಬೇರೆ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಆದಾಗ ಆರಕ್ಷಣ ಕೇಂದ್ರದಲ್ಲಿರುವ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸುತ್ತಾರೆ. ಹೀಗಾಗಿ ಆರಕ್ಷಣ ಕೇಂದ್ರದಲ್ಲಿ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯು ಸಮಸ್ಯೆ ಆಗುತ್ತಿದೆ. ಆರಕ್ಷಣ ಕೇಂದ್ರದಲ್ಲಿನ ಎಲ್ಲ ಕೌಂಟರ್ ಗಳಿಗೆ ಸಮರ್ಪಕ ಸಿಬ್ಬಂದಿ ನಿಯೋಜಿಸಿದರೆ ಪ್ರಯಾಣಿಕರಿಗೆ ಯಾವ ಸಮಸ್ಯೆಗಳು ಆಗುವುದಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.
ನಗರದ ರೈಲ್ವೆ ಆರಕ್ಷಣ (ಮುಂಗಡ) ಟಿಕೆಟ್ ಕಾಯ್ದಿರಿಸುವ ಕೇಂದ್ರದಲ್ಲಿ ಆರು ಕೌಂಟರ್‌ಗಳಲ್ಲಿ ಪ್ರತಿದಿನ ನಾಲ್ಕು ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿ ರಜೆ ಮೇಲೆ ಇದ್ದಾಗ ಕೆಲವೊಮ್ಮೆ ಸಮಸ್ಯೆ ಆಗಬಹುದು. ಆದರೆ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಕೊಡಲು ಯಾವುದೇ ಸಮಸ್ಯೆ ಆಗುತ್ತಿಲ್ಲ. ತತ್ಕಾಲ್ ಟಿಕೆಟ್ ನೀಡುವ ಸಮಯದಲ್ಲೂ ಸಾಮಾನ್ಯ ಎರಡು ಕೌಂಟರ್‌ಗಳು ಸಹ ಕಾರ್ಯನಿರ್ವಹಿಸುತ್ತಿವೆ.
–ಸೆಂಥಿಲ್ ಕುಮಾರ, ಹಿರಿಯ ಉಪ ಮುಖ್ಯ ವ್ಯವಸ್ಥಾಪಕ, ರೈಲ್ವೆ ವಾಣಿಜ್ಯ ವಿಭಾಗ, ಹುಬ್ಬಳ್ಳಿ
-ಶಿವಶಂಕರ ಕಂಠಿ