Advertisement

“ಬದುಕಿನ ರಂಗ ಪರದೆ ಎಳೆಯುವವ ಕಾಯುತ್ತಿದ್ದಾನೆ’ !

05:40 PM Jul 11, 2018 | Harsha Rao |

ಮಂಗಳೂರು: “ಬದುಕಿನ ಎಲ್ಲ ಆಟಗಳು ಮುಗಿಯುತ್ತಾ ಬಂತು. ಉಳಿದಿರುವುದು ಎಷ್ಟು ದಿನವೋ ಗೊತ್ತಿಲ್ಲ. ನನ್ನ ಬದುಕಿನ ರಂಗಪರದೆ ಎಳೆಯಲು ಪರದೆ ಎಳೆಯುವವ ಕಾಯುತ್ತಿದ್ದಾನೆ. ಯಾವುದೇ ಕ್ಷಣದಲ್ಲಿ ಯಾವ ಸುಳಿವೂ ಇಲ್ಲದಂತೆ ಆತ ಎಳೆದು ಬಿಡಬಹುದು. ಅದಕ್ಕಾಗಿ ನಾನು ತಯರಾಗುತ್ತಿದ್ದೇನೆ. ಈ ಜಗತ್ತಿನ ಒಂದು ಸುಂದರ ಬದುಕನ್ನು ಬದುಕಿದೆ ಎಂಬ ತೃಪ್ತಿ ನನಗಿದೆ’.

Advertisement

ಇದು ಬಿಡುಗಡೆಗೆ ಸಿದ್ಧವಾಗುತ್ತಿರುವ ತಮ್ಮ ಆತ್ಮಕಥೆಯಾದ “ನನ್ನೊಳಗಿನ ನಾನು’ ಪುಸ್ತಕದಲ್ಲಿ ಒಂದು ಕಡೆ ಮಾಜಿ ಸಚಿವ ಬಿ.ಎ. ಮೊಹಿದೀನ್‌ ಹೇಳಿಕೊಂಡಿರುವ ಸಾವಿನ ಕುರಿತ ಮಾರ್ಮಿಕ ಮಾತುಗಳಿವು. ದುರಂತ ಅಂದರೆ, ಈ ಕೃತಿ ಬಿಡುಗಡೆಗೆ ಇನ್ನು ಕೆಲವೇ 9 ದಿನಗಳಷ್ಟೇ ಬಾಕಿಯಿರುವಂತೆಯೇ ಮೊಹಿದೀನ್‌ ಅವರು ನಿಧನ ಹೊಂದಿದ್ದಾರೆ.

ರಾಜಕೀಯ ಎಂದರೆ ಪಗಡೆ ಆಟ
ಮೊಹಿದೀನ್‌ ಅವರು ತಮ್ಮ ಸುದೀರ್ಘ‌ ರಾಜಕೀಯ ಜೀವನದಲ್ಲಿ ರಾಜಕೀಯ ಕ್ಷೇತ್ರದಲ್ಲಿನ ಚದುರಂಗದಾಟವನ್ನು ಪುಸ್ತಕದಲ್ಲಿ ಬಿಚ್ಚಿಟ್ಟಿದ್ದು ಹೀಗೆ- “ನನ್ನ ಆತ್ಮಕಥೆಯಲ್ಲಿ ಇಂದಿರಾ ಗಾಂಧಿ, ದೇವರಾಜ ಅರಸು, ರಾಮಕೃಷ್ಣ ಹೆಗೆಡೆ, ಜೆ.ಎಚ್‌. ಪಟೇಲ್‌ ಅವರಂತಹ ಮಹಾನ್‌ ನಾಯಕರ ಬಗ್ಗೆ ಯಾಕೆ ಬರೆದಿದ್ದೇನೆ ಎಂದು ನಿಮಗೆ ಅನ್ನಿಸಬಹುದು. ನಾನು ಯಾಕೆ ಬರೆದಿದ್ದೇನೆ ಎಂದರೆ; ರಾಜಕೀಯ ಒಂದು ಪಗಡೆ ಆಟದ ಹಾಗೆ. ಇಲ್ಲಿ ತಿರುಕ ರಾಜನಾಗಬಹುದು. ರಾಜ ಭಿಕಾರಿಯಾಗಬಹುದು. ಇಲ್ಲಿ ಗೆಲ್ಲಲಿಕ್ಕಾಗಿ ಅಧಿಕಾರಕ್ಕಾಗಿ, ಒಬ್ಬರೊಬ್ಬರು ಕಾಲೆಳೆಯುವುದು, ನಮಗಿಂತ ಮುಂಚೆ ಹೆಜ್ಜೆ ಇಡದಂತೆ, ನಮಗಿಂತ ಮೇಲೆ ಯಾರೂ ಏರದಂತೆ, ನಮಗಿಂತ ಎತ್ತರಕ್ಕೆ ಯಾರೂ ಬೆಳೆಯದಂತೆ ನೋಡಿಕೊಳ್ಳುವುದು, ಸ್ವತಂತ್ರ ಭಾರತದ ರಾಜಕೀಯದಲ್ಲಿ ನಡೆದುಕೊಂಡು ಬಂದಿರುವಂತದ್ದು’ ಎಂದು ಹೇಳಿಕೊಂಡಿದ್ದಾರೆ.

ಆತ್ಮಕಥೆಗೆ ತುಂಬಾ ನಿರೀಕ್ಷೆ ಇತ್ತು
“ಬಿ.ಎ. ಮೊಹಿದೀನ್‌ ಅವರು ಕೂಡ ತಮ್ಮ ಆತ್ಮಕಥನ “ನನ್ನೊಳಗಿನ ನಾನು’ ಕೃತಿಯ ಬಿಡುಗಡೆಯ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಲೇಖಕರು ಪುಸ್ತಕದ ಕರಡು ಪ್ರತಿಯನ್ನು ಕೆಲವು ದಿನಗಳ ಹಿಂದೆ ನೀಡಿದಾಗ ಅದನ್ನು ಓದಿ ಬಹಳ ಖುಷಿಪಟ್ಟಿದ್ದರು ಕೂಡ. “ನಾನು ಜು. 16ಕ್ಕೆ ಮಂಗಳೂರಿಗೆ ಬರುತ್ತೇನೆ. ಜು. 20ರಂದು ನಿಗದಿಯಾಗಿರುವ ಕೃತಿ ಬಿಡುಗಡೆ ಸಮಾರಂಭಕ್ಕೆ ಎಲ್ಲ ಸಿದ್ಧತೆಗಳನ್ನು  ಮಾಡಿಕೊಳ್ಳಿ ಎಂದು ನಮಗೆ ಸೂಚಿಸಿದ್ದರು’ ಎಂದು ಕೃತಿ ನಿರೂಪಕರಲ್ಲಿ ಒಬ್ಬರಾಗಿರುವ ಮುಹಮ್ಮದ್‌ ಕುಳಾç “ಉದಯವಾಣಿ’ಗೆ ತಿಳಿಸಿದ್ದಾರೆ.

“ಮೊಹಿದೀನ್‌ ಅವರು ಆರಂಭದಲ್ಲಿ ಆತ್ಮಕಥೆ ಬರೆಯುವುದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಜತೆಗೆ, ಆ ಬಗ್ಗೆ ಅವರಿಗೆ ಆಸಕ್ತಿಯೂ ಇರಲಿಲ್ಲ. ಆದರೆ ನಾವು 3 ವರ್ಷಗಳಿಂದ ನಿರಂತರವಾಗಿ ಅವರನ್ನು ಒತ್ತಾಯಿಸುತ್ತಲೇ ಬಂದಿದ್ದೆವು. ಮೊಹಿದೀನ್‌ ಅವರ ರಾಜಕೀಯ ಸಿದ್ಧಾಂತ, ಮಾದರಿ ವ್ಯಕ್ತಿತ್ವ ಮತ್ತು ಬದುಕಿನಲ್ಲಿ ಪಾಲಿಸಿಕೊಂಡು ಬಂದಿರುವ ಆದರ್ಶಗಳು ಮುಂದಿನ ಜನಾಂಗಕ್ಕೆ ತಿಳಿಯಬೇಕು ಎಂಬ ನೆಲೆಯಲ್ಲಿ ನಿಮ್ಮ ಆತ್ಮಕಥೆ ಕೃತಿ ಬರಬೇಕು ಎಂಬುದಾಗಿ ಹೇಳಿ ಅವರ ಮನವೊಲಿಸಿದ ಬಳಿಕವಷ್ಟೇ, ಅಂದರೆ ಒಂದು ವರ್ಷಗಳ ಹಿಂದೆ ಆತ್ಮಕಥೆ ಬರೆಯುವುದಕ್ಕೆ ನಮಗೆ ಒಪ್ಪಿಗೆ ನೀಡಿದ್ದರು. ನನಗೆ ಗೊತ್ತಿರುವಂತೆಯೂ ಮೊಹಿದೀನ್‌ ಅವರು ಓರ್ವ ಸರಳ, ಸಜ್ಜನಿಕೆಯ ರಾಜಕಾರಣಿ’ ಎಂದವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next