ರಾಯಚೂರು: ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳುವಲ್ಲಿ ನಿರತವಾಗಿದೆ. 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಅದಕ್ಕೆ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಹೊಂದಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ.
ಕಳೆದ ವರ್ಷ ತೊಗರಿ ಮತ್ತು ಹತ್ತಿ ಬಿತ್ತನೆ ಜೋರಾಗಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಹತ್ತಿ ಬಿತ್ತನೆ ಕ್ಷೇತ್ರ ಹೆಚ್ಚಾಗಿ, ತೊಗರಿ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಮಳೆ ಅಭಾವ, ಕಾಲುವೆ ನೀರಿನ ಕೊರತೆಯಿಂದ ಬಿತ್ತನೆ ಕ್ಷೇತ್ರದ ಗುರಿ ತಲುಪಿದರೂ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ತರುವಲ್ಲಿ ಸಾಧ್ಯವಾಗಿರಲಿಲ್ಲ. ಹಿಂಗಾರಿನಲ್ಲಂತೂ ಬೆಳೆ ಬೆಳೆಯುವುದೇ ಕಷ್ಟ ಎನ್ನುವಂಥ ವಾತಾವರಣ ಸೃಷ್ಟಿಯಾಗಿ ರೈತರು ಕೋಟ್ಯಂತರ ರೂ. ನಷ್ಟಕ್ಕೆ ತುತ್ತಾಗಿದ್ದರು.
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 3,50,551 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 85,090 ಹೆಕ್ಟೇರ್ ನೀರಾವರಿ, ಒಣ ಭೂಮಿಯಲ್ಲಿ ಹತ್ತಿ ಬಿತ್ತನೆ, 1,37,550 ಹೆಕ್ಟೇರ್ ಭತ್ತ, 47,905 ಹೆಕ್ಟೇರ್‌ನಲ್ಲಿ ತೊಗರಿ, 45,295 ಹೆಕ್ಟೇರ್‌ನಲ್ಲಿ ಸಜ್ಜೆ, 17,865 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 500 ಹೆಕ್ಟೇರ್‌ನಲ್ಲಿ ನವಣೆ, 1,210 ಹೆಕ್ಟೇರ್‌ನಲ್ಲಿ ಔಡಲ, 170 ಹೆಕ್ಟೇರ್‌ನಲ್ಲಿ ಹೆಸರು, 5,237 ಹೆಕ್ಟೇರ್‌ನಲ್ಲಿ ಶೇಂಗಾ ಸೇರಿ ಒಟ್ಟು 3,50,551 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದಲ್ಲದೇ ಏಕದಳ, ಎಣ್ಣೆಕಾಳು, ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
38,859 ಕ್ವಿಂಟಲ್ ಬೀಜ ಬೇಡಿಕೆ: ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಲು ಬೀಜ ನಿಗಮಕ್ಕೆ 38,859 ಕ್ವಿಂಟಲ್ ವಿವಿಧ ಬೀಜಗಳ ಬೇಡಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಿಯಾಯಿತಿ ದರದಲ್ಲೂ ರೈತರಿಗೆ ವಿತರಿಸಲು ಆಯಾ ರೈತ ಸಂಪರ್ಕ ಕೇಂದ್ರಕ್ಕೆ ನಿಗದಿಪಡಿಸಿದ ಬೀಜ ದಾಸ್ತಾನು ಕಾರ್ಯ ಪ್ರಗತಿಯಲ್ಲಿದೆ. ಈ ಬಾರಿ ಹತ್ತಿ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ 30 ಅನುಮೋದಿತ ಸರಬರಾಜು ಸಂಸ್ಥೆಗಳೊಂದಿಗೆ ಚರ್ಚಿಸಿದ್ದು, 3,40,000 ಹತ್ತಿ ಬೀಜದ ಪ್ಯಾಕೇಟ್‌ಗಳನ್ನು ಪೂರೈಸುವಂತೆ ಸೂಚಿಸಲಾಗಿದೆ.
ಮಳೆಯಾದರೆ ಗುರಿ ಹೆಚ್ಚಳ ಸಾಧ್ಯತೆ ಕಳೆದ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಬಿತ್ತನೆ ಪ್ರಮಾಣ ಕುಂಠಿತಗೊಂಡಿತ್ತು. ಈ ಬಾರಿ ಇಲಾಖೆ ಅಧಿಕಾರಿಗಳು ನಿರೀಕ್ಷೆಗಿಂತ ಹೆಚ್ಚು ಮಳೆ ಬಂದಲ್ಲಿ ಬಿತ್ತನೆ ಪ್ರಮಾಣವೂ ಹೆಚ್ಚಾಗುವ ನಿರೀಕ್ಷೆಯಿದೆ. ಒಟ್ಟು 1,45,525 ಹೆಕ್ಟೇರ್‌ನಲ್ಲಿ ಭತ್ತ, 59,455 ಹೆಕ್ಟೇರ್‌ನಲ್ಲಿ ಸಜ್ಜೆ, 3,070 ಹೆಕ್ಟೇರ್‌ನಲ್ಲಿ ಹೆಸರು, 78,356 ಹೆಕ್ಟೇರ್‌ನಲ್ಲಿ ತೊಗರಿ, 55 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, 20 ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 1,500 ಹೆಕ್ಟೇರ್‌ನಲ್ಲಿ ನವಣೆ, 1,750 ಹೆಕ್ಟೇರ್‌ನಲ್ಲಿ ಔಡಲ ಬೆಳೆಯುವ ಸಾಧ್ಯತೆಗಳಿವೆ.
ರೈತರ ಬೇಡಿಕೆಗನುಸಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಹತ್ತಿ ಬಿತ್ತನೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು, ಕಾಯಿಕೊರಕ ರೋಗದ ಬಗ್ಗೆಯೂ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ಮುಂಗಾರು ಮಳೆ ಕೂಡ ಉತ್ತಮವಾಗಿ ಬರಲಿದೆ ಎನ್ನುವ ಮಾಹಿತಿ ಇದೆ. ಅಧಿಕೃತ ಸಂಸ್ಥೆಗಳಿಗೆ ಬೀಜ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಡಾ| ಚೇತನಾ ಪಾಟೀಲ್, ಜಂಟಿ ಕೃಷಿ ನಿರ್ದೇಶಕರು ರಾಯಚೂರು