Advertisement

ಬೆಳೆ ವಿಮೆ ಪರಿಹಾರಕ್ಕೆ ಕಾಯಲೇಬೇಕು

02:13 AM Jun 21, 2019 | sudhir |

ಕುಂದಾಪುರ: ಸಹಕಾರಿ ಸಂಘಗಳಿಂದ ಹಾಗೂ ಬ್ಯಾಂಕ್‌ಗಳಿಂದ ಬೆಳೆ ಸಾಲ ಪಡೆಯುವಾಗ ಪ್ರಧಾನ ಮಂತ್ರಿ ಫ‌ಸಲು ವಿಮಾ ಯೋಜನೆಗೆ ಸೇರ್ಪಡೆ ಕಡ್ಡಾಯ ಮಾಡಿರುವುದು ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಬಾರಿಯ ಬೆಳೆವಿಮೆ ಮಾಡಿಸಿಕೊಳ್ಳಲು ಜೂ. 30 ಗಡುವು ನೀಡಲಾಗಿದ್ದು ಕಳೆದ ವರ್ಷದ ವಿಮಾ ಹಣವೇ ಬಂದಿಲ್ಲ. ಈ ವರ್ಷ ಕಡ್ಡಾಯ ಮಾಡಲಾಗುತ್ತಿದೆ ಎಂಬ ಅಪಸ್ವರ ರೈತರಿಂದ ಕೇಳಿ ಬರುತ್ತಿದೆ. ಆದರೆ ಜು. 1ರಿಂದ ಜೂ. 30 ವಿಮಾ ಅವಧಿಯಾಗಿದ್ದು ಬಳಿಕವಷ್ಟೇ ವಿಮಾ ಹಣ ಪಾವತಿಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಕೇಂದ್ರದ ಯೋಜನೆ

ಪ್ರಧಾನಮಂತ್ರಿ ಫ‌ಸಲು ವಿಮಾ ಕೇಂದ್ರ ಸರಕಾರದ ಯೋಜನೆ. ಪಂಚಾಯತ್‌ಗಳನ್ನು ವಿಮಾ ಘಟಕ ಎಂದು ಪರಿಗಣಿಸಲಾಗಿದ್ದು, ವಿಮೆ ಮಾಡಿಸಿ ಪ್ರಾಕೃತಿಕ ವಿಕೋಪಗಳಿಂದ ಬೆಳೆಹಾನಿ ಉಂಟಾದಾಗ ಪರಿಹಾರ ನೀಡಲಾಗುತ್ತದೆ. ನಿರ್ಧರಿತ ಬೆಳೆಯ ಫ‌ಸಲಿನ ಮೌಲ್ಯದ ಮೇಲೆ ವಿಮೆ ಕಂತು ನಿರ್ಧಾರವಾಗುತ್ತದೆ. ಶೇ.40ರಲ್ಲಿ ಕಂತಿನ ಶೇ.5ನ್ನು ಫ‌ಲಾನುಭವಿ; ಉಳಿದ ಶೇ.35ನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮವಾಗಿ ಭರಿಸುತ್ತವೆ.

ರೈತರಿಗೆ ಏನು ಲಾಭ

ಸರಕಾರ ರೈತರ ಪರವಾಗಿ ವಿಮಾ ಕಂಪೆನಿಗೆ ಹಣ ಪಾವತಿಸುವ ಬದಲು ನೇರ ರೈತರಿಗೇ ಸಬ್ಸಿಡಿ ರೂಪದಲ್ಲಿ ಕೊಡಬಹುದು ಎಂಬ ವಾದವಿದೆ. ಅತಿವೃಷ್ಟಿಯಿಂದಾಗಿ 1 ಹೆಕ್ಟೇರ್‌ ತೋಟ ಸಂಪೂರ್ಣ ನಾಶವಾದರೆ ಪ್ರಾಕೃತಿಕ ವಿಕೋಪ ನಿಧಿಯಿಂದ ಹೆಚ್ಚೆಂದರೆ 15 ಸಾವಿರ ರೂ. ಪರಿಹಾರ ದೊರೆಯುತ್ತದೆ. ಆದರೆ ವಿಮೆ ಮಾಡಿಸಿದರೆ 1.28 ಲಕ್ಷ ರೂ.ವರೆಗೆ ಪರಿಹಾರ ದೊರೆಯುತ್ತದೆ. ಮಳೆಹಾನಿ ಪರಿಹಾರ ಹಾಗೂ ವಿಮಾ ಪರಿಹಾರ ಎರಡನ್ನೂ ಪಡೆದುಕೊಳ್ಳಲು ಅವಕಾಶ ಇದೆ. ಆದ್ದರಿಂದ ಹೆಚ್ಚಿನ ಜನರು ಇದರಲ್ಲಿ ಸ್ವಯಂ ಪ್ರೇರಣೆಯಿಂದ ಭಾಗಿಯಾಗಬೇಕೆಂದೇ ಸರಕಾರ ದೊಡ್ಡ ಮೊತ್ತ ಪಾವತಿಸಿ ರೈತರಿಂದ ಸಣ್ಣ ಮೊತ್ತ ಹಾಕಿಸುತ್ತದೆ.

Advertisement

ಪರಿಹಾರ

2018ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಮಳೆ ಹಾನಿ ಪರಿಹಾರ ಬಾಬ್ತು 7.18 ಕೋ.ರೂ.ಗಳನ್ನು 9 ಸಾವಿರ ಜನರಿಗೆ ವಿತರಿಸಲಾಗಿದೆ. 350 ಜನರಿಗೆ ಸುಮಾರು 15 ಲಕ್ಷ ರೂ.ಗಳಷ್ಟು ಪರಿಹಾರ ತಾಂತ್ರಿಕ ಕಾರಣದಿಂದ ಪಾವತಿಗೆ ಬಾಕಿಯಿದೆ. ಅದೇ ಹವಾಮಾನ ಆಧಾರಿತ ಬೆಳೆ ವಿಮೆಯಾದರೆ ಇದಕ್ಕಿಂತ ಐದಾರು ಪಟ್ಟು ಹೆಚ್ಚು ಮೊತ್ತ ದೊರೆಯುತ್ತದೆ. ದ.ಕ. ಜಿಲ್ಲೆಯಲ್ಲಿ 2018-19ರಲ್ಲಿ ಪ್ರಾಕೃತಿಕ ವಿಕೋಪ ನಿಧಿಯಲ್ಲಿ 50,010 ಜನರಿಗೆ 50.09 ಕೋ.ರೂ. ಪರಿಹಾರ ಬಂದಿದೆ. ಹವಾಮಾನ ಆಧಾರಿತ ಫ‌ಸಲು ವಿಮೆಯಲ್ಲಿ 2017-18ರಲ್ಲಿ 945 ಜನರಿಗೆ 3.5 ಕೋ.ರೂ. ಪರಿಹಾರ ನೀಡಲಾಗಿದೆ. ವಿಮೆಗೆ ಒಟ್ಟು ರೈತರ ಪಾಲು ಇದ್ದುದು 42 ಲಕ್ಷ ರೂ.

ಬೆಳೆವಿಮೆ

2016-17ನೇ ಸಾಲಿನಲ್ಲಿ (ಆವರಣದಲ್ಲಿ 2017-18ನೇ ಸಾಲಿನ ವಿವರ) ಕಾರ್ಕಳ ತಾಲೂಕಿನಲ್ಲಿ ಅಡಿಕೆಗೆ 1,036 (324) ಜನರಿಗೆ 39 ಲಕ್ಷ ರೂ. (32 ಲಕ್ಷ ರೂ.), ಕಾಳುಮೆಣಸಿಗೆ 67 (22) ಜನರಿಗೆ 1.13 ಲಕ್ಷ ರೂ. (42ಸಾವಿರ ರೂ.), ಕುಂದಾಪುರ ತಾಲೂಕಿನಲ್ಲಿ ಅಡಿಕೆಗೆ 2,436 (929) ಜನರಿಗೆ 67.8 ಲಕ್ಷ ರೂ.(68.33 ಲಕ್ಷ ರೂ.), ಕಾಳುಮೆಣಸು 168 (52) ಜನರಿಗೆ 1.43 ಲಕ್ಷ ರೂ.(1.61 ಲಕ್ಷ ರೂ.), ಉಡುಪಿ ತಾಲೂಕಿನಲ್ಲಿ ಅಡಿಕೆಗೆ 1,473 (397) ಜನರಿಗೆ 74.02 ಲಕ್ಷ ರೂ.(8.64 ಲಕ್ಷ ರೂ.), ಕಾಳುಮೆಣಸು 44 (7) ಜನರಿಗೆ 81 ಸಾವಿರ ರೂ. (8 ಸಾವಿರ ರೂ.) ಪರಿಹಾರ ನೀಡಲಾಗಿದೆ. 2018-19ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ ಅಡಿಕೆಗೆ 893, ಕಾಳುಮೆಣಸಿಗೆ 28, ಕುಂದಾಪುರ ತಾಲೂಕಿನಲ್ಲಿ ಅಡಿಕೆಗೆ 1,119 ಮಂದಿಗೆ, ಕಾಳುಮೆಣಸು 48 ರೈತರಿಗೆ, ಉಡುಪಿ ತಾಲೂಕಿನಲ್ಲಿ ಅಡಿಕೆ 957 ರೈತರಿಗೆ, ಕಾಳುಮೆಣಸು ಬೆಳೆದ 23 ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ.ಕ.ದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಪ್ರಕರಣಗಳು ಒಟ್ಟಾಗಿ 8,350 ಇವೆ.

ಗೊಂದಲ ಇದೆ

ಕಳೆದ ವರ್ಷದ ಮಳೆಗಾಲದಲ್ಲಿ ನಾಶವಾದ ಕೃಷಿಗೇ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಬಾರಿ ಮತ್ತೆ ಸಹಕಾರಿ ಬ್ಯಾಂಕ್‌ಗಳ ಮೂಲಕ ಸಾಲದ ಜತೆಗೆ ಬೆಳೆ ವಿಮೆ ಕಡ್ಡಾಯ ಮಾಡಲಾಗುತ್ತಿದೆ ಎನ್ನುವ ಗೊಂದಲ ರೈತರಲ್ಲಿದೆ.
-ಗಜಾನನ ವಝೆ ಮುಂಡಾಜೆ, ಪ್ರಗತಿಪರ ಕೃಷಿಕ
ಜೂ. 30ರ ವರೆಗೆ ಕಾಲಾವಕಾಶ

ಜು. 1ರಿಂದ ಜೂ. 30ರ ವರೆಗೆ ವಿಮಾ ಕಾಲಾವಧಿ ಇದೆ. ಆದ್ದರಿಂದ ಜುಲೈ ತಿಂಗಳಲ್ಲಿ ಎಲ್ಲ ಪರಿಹಾರ ಪ್ರಕ್ರಿಯೆಗಳೂ ವಿಮಾ ಕಂಪೆನಿ ಮೂಲಕ ನಡೆಯಲಿವೆ. ಈ ಕುರಿತು ರೈತರಿಗೆ ಯಾವುದೇ ಗೊಂದಲ ಅನಗತ್ಯ. ಅಡಿಕೆ ಮೊದಲಾದ ಬೆಳೆಗೆ ಮಳೆಗಾಲ ಹಾಗೂ ಬೇಸಗೆ ಎರಡೂ ಅವಧಿಯಲ್ಲಿ ಹಾನಿ ಸಂಭವಿಸುವುದರಿಂದ ಒಮ್ಮೆಲೇ ಪರಿಹಾರ ಸಮಯವನ್ನು ಇಡಲಾಗಿದೆ.
– ನಿಧೀಶ್‌ ಹೊಳ್ಳ, ಸಹಾಯಕ ತೋಟಗಾರಿಕಾ ಅಧಿಕಾರಿ, ಉಡುಪಿ ಜಿಲ್ಲೆ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next