ಹುನಗುಂದ: ಗ್ರಾಮೀಣ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡುವುದು ಮತ್ತು ಎನ್‌ಎಂಆರ್ ಜೀರೋ ಮಾಡಿ ಕಾರ್ಮಿಕರನ್ನು ಸತಾಯಿಸುವ ಕಾರ್ಯ ಪ್ರತಿಯೊಂದು ಗ್ರಾಪಂ ಪಿಡಿಒಗಳು ಮತ್ತು ಅಲ್ಲಿನ ಸಿಬ್ಬಂದಿಯಿಂದ ನಡೆಯುತ್ತಿದೆ. ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಸೋಮವಾರ ತಾಪಂ ಆವರಣದ ಮುಂಭಾಗದಲ್ಲಿ ಗ್ರಾಕೂಸ್ ಸಂಘಟನೆ ಪ್ರತಿಭಟನೆ ನಡೆಸಿತು.
ತಾಪಂ ಇಒ ಸಿ.ಬಿ.ಮೇಗೇರಿ ಮತ್ತು ಎಡಿ ಮಹಾಂತೇಶ ಕೋಟಿ ಅವರನ್ನು ಗ್ರಾಮೀಣ ಕೂಲಿ ಕಾರ್ಮಿಕರು ತರಾಟೆಗೆ ತಗೆದುಕೊಂಡರು. ನರೇಗಾದಲ್ಲಿ ಎನ್‌ಎಂಎಂಎಸ್ ಪದ್ಧತಿ ಸರ್ಕಾರ ಜಾರಿಗೆ ತಂದಿರುವುದು ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಪದ್ದತಿ ನಿಲ್ಲಿಸಬೇಕು. ಇನ್ನು ಜಾತಿ ಆಧಾರದ ಮೇಲೆ ನರೇಗಾದ ಕಾರ್ಮಿಕರ ಬಿಲ್ ಮಾಡುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಹೇಳುತ್ತಿರುವ ಸರ್ಕಾರ ಏಕೆ ಜಾತಿ ಆಧಾರ ಮೇಲೆ ವೇತನ ಮಾಡುತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ಹಾಗೂ ಇತರೆ ಎಂದು ಏಕೆ ತಾರತಮ್ಯ ಮಾಡುತ್ತಿದೆ. ಇದರಿಂದ ತಾಲೂಕಿನ ನೂರಾರು ಕಾರ್ಮಿಕರ ಒಂದು ವರ್ಷದ ಬಿಲ್ ಆಗಿಲ್ಲ. ಒಂದೇ ಬಾರಿ ವೇತನ ಮಾಡುವಂತೆ ತಿಳಿಸಬೇಕೆಂದು ಗ್ರಾಮೀಣ ಕೂಲಿ ಕಾರ್ಮಿಕರು ಸ್ಥಳೀಯ ಪಿಡಿಒಗಳಿಗೆ ಲಿಖೀತವಾಗಿ ಮತ್ತು ತಾಪಂ ಇಒ ಅವರಿಗೆ ಮೌಖೀಕವಾಗಿ ಹೇಳಿದರೂ ಸರ್ಕಾರಕ್ಕೆ ಈ ವಿಷಯದ ಕುರಿತು ಪತ್ರ ವ್ಯವಹಾರ ಸಹ ಮಾಡಿಲ್ಲ. ಗ್ರಾಕೂಸ್ ಮುಖಂಡ ಮಹಾಂತೇಶ ಹೊಸಮನಿ ಮಾತನಾಡಿದರು.
ತಾಲೂಕಿನ ಹಿರೇಮಳಗಾವಿ, ಮೂಗನೂರ, ಹೂವಿನಹಳ್ಳಿ, ಹಾವರಗಿ ಸೇರಿದಂತೆ ಪ್ರತಿಯೊಂದು ಗ್ರಾಪಂಯಲ್ಲಿ ಹೊಸದಾಗಿ ಜಾಬ್ ಕಾರ್ಡ್ ಪಡೆಯಬೇಕಾದರೇ ಪಂಚಾಯಿತಿ ಸಿಬ್ಬಂದಿಗೆ ಹಣ ನೀಡಿದರೇ ಮಾತ್ರ ಜಾಬ್ ಕಾಡ್ ನೀಡುತ್ತಾರೆ. ಇನ್ನು ಮೂಗನೂರ ಗ್ರಾ.ಪಂಯಲ್ಲಿ ಕಾನೂನುಬಾಹಿರವಾಗಿ ಜಾಬ್ ಕಾರ್ಡ್ ವಿತರಣೆ ಮಾಡಿದ್ದಾರೆಂದು ಆರೋಪಿಸಿದರು.
ಹಿರೇಮಳಗಾವಿ, ಮೂಗನೂರ, ಹೂವಿನಹಳ್ಳಿ, ರಕ್ಕಸಗಿ, ಹಿರೇಬಾದವಾಡಗಿ, ಬಿಂಜವಾಡಗಿ, ಹಾವರಗಿ, ಧನ್ನೂರ, ಬೆಳಗಲ್ಲ, ಐಹೊಳೆ ಸೇರಿದಂತೆ ಅನೇಕ ಗ್ರಾಪಂನಲ್ಲಿ ಕೂಲಿ ನೀಡದೇ ಇರೋದು ಮತ್ತು ಮಾಡಿದ ಕೆಲಸಕ್ಕೆ ಕೂಲಿ ನೀಡಿಲ್ಲ, ಇನ್ನು ಕೃಷಿ ಹೊಂಡ ಕೂಲಿ ಬಾಕಿ ಉಳಿದಿದೆ. ಬೇಡಿಕೆ ಈಡೇರುವರಿಗೂ ಪ್ರತಿಭಟನೆ ಮುಂದುವರಿಸಲು ಗ್ರಾಮೀಣ ಕೂಲಿ ಕಾರ್ಮಿಕರು ಬಿಗಿ ಪಟ್ಟು ಹಿಡಿದರು.
ಗ್ರಾಕೂಸ್ ಸಂಘಟನೆಯ ಮುಖಂಡರಾದ ಮಹಾಂತೇಶ ಹೊಸಮನಿ, ಯಮನೂರ ಮಾದರ, ಮಹಾದೇವಿ ಹಡಪದ, ರೇಣುಕಾ ತುಪ್ಪದ, ಎಸ್ .ಬಿ.ವಟವಟಿ, ವಿ.ವಿ.ಜಾಲಿಹಾಳ, ಅನುಸೂಯಾ ನಾಗರಾಳ, ಎನ್.ಎನ್.ಕಟ್ಟಿಮನಿ, ಎಸ್. ಎಂ.ಭದ್ರಶೆಟ್ಟಿ, ಎಸ್.ಬಿ.ಪರನಗೌಡ್ರ, ಅಮರೇಶ ಕುಂಬಾರ, ಕಲ್ಲಪ್ಪ ಆನೇಹೊಸೂರ, ಗ್ಯಾನಪ್ಪ ತಳಗೇರಿ, ಗ್ಯಾನಪ್ಪ ಬೂದಗೂಳಿ, ನಿರ್ಮಲಾ ಬೆಳಗಲ್ಲ, ಮಹಾಂತಪ್ಪ ಚೆಳ್ಳಿಕಟ್ಟಿ, ಪ್ರಭು ಹಳ್ಳೂರ, ಸಂಗನಬಸಮ್ಮ ಪಾಟೀಲ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಾಪಂ ಇಒ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಕಾರ್ಮಿಕರು ಗ್ರಾಮೀಣ ಕೂಲಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಕಾರ್ಮಿಕರು ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದನ್ನು ಅರಿತು ಮಹಿಳಾ ಕಾರ್ಮಿಕರು ಇಒ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.