Advertisement

ಕೂಲಿ ಮಾಡಿ ಮಗನನ್ನು ದೇಶಸೇವೆಗೆ ಕಳಿಸಿದರು! 

09:58 AM Feb 16, 2018 | Team Udayavani |

ಮನೆಯಲ್ಲಿ ಬಡತನ. ಆದರೆ ಆತನಿಗೆ ಸೇನೆಗೆ ಸೇರುವ ತುಡಿತ. ಮಗನ ಈ ಕನಸಿಗೆ ಹೆತ್ತವರೂ ನೀರೆರೆದು ಪೋಷಿಸಿದರು, ವಿದ್ಯಾಭ್ಯಾಸ ನೀಡಿ, ಕನಸು ಈಡೇರಿಸಲು ಆಸರೆಯಾದರು. 

Advertisement

ಪುತ್ತೂರು: ಕುಟುಂಬದ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ವಿದ್ಯಾಭ್ಯಾಸ ಮುಗಿದ ಕೂಡಲೇ ಕೆಲಸಕ್ಕೆ ಸೇರಿಕೊಳ್ಳಬೇಕಾದ ಅನಿವಾರ್ಯ. ಆದರೂ ಬಾಲ್ಯದ ಕನಸಿನಂತೆ ಸೇನೆಗೆ ಸೇರಿ ದೇಶಸೇವೆ ಮಾಡಲೇಬೇಕು ಎಂಬ ಆಕಾಂಕ್ಷೆಯನ್ನು ಈಡೇರಿಸಿಕೊಂಡದ್ದು ಸೇನೆಯ ಆರ್ಟಿಲರಿ ವಿಭಾಗದ ಹೆಮ್ಮೆಯ ಸೈನಿಕ, ಕಡಮಜಲು ತ್ಯಾಗರಾಜ ರಸ್ತೆಯ ನಿವಾಸಿ ಲಕ್ಷ್ಮೀಶ ಅವರು.

ಕೇಚು ಪಾಟಾಳಿ ಹಾಗೂ ಸರಸ್ವತಿ ದಂಪತಿಯ ಪುತ್ರ ಲಕ್ಷ್ಮೀಶ ಕಳೆದ 11 ವರ್ಷಗಳಿಂದ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಚೈತ್ರಾ, ಪುತ್ರಿ ಧೃತಿ, ಸಹೋದರ ಹರೀಶ್‌, ಸಹೋದರಿ ರಶ್ಮಿ ಅವರೊಂದಿಗಿನ ಸಂಸಾರ ಅವರದ್ದು. ತಂದೆ ಕೇಚು ಪಾಟಾಳಿ ಅವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಸಹೋದರ ವೃತ್ತಿಯಲ್ಲಿ ಎಲೆಕ್ಟ್ರೀಶನ್‌ ಆಗಿದ್ದಾರೆ.

ಕೂಲಿ ಮಾಡಿ ಮಗನಿಗೆ ವಿದ್ಯಾಭ್ಯಾಸ ನೀಡಿದರು
ಕೇಚು ಪಾಟಾಳಿ ಅವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಸದಾ ಕಾಡುತ್ತಿತ್ತು. ಆದರೆ ಪುತ್ರನ ವಿದ್ಯಾಭ್ಯಾಸಕ್ಕೆ ಅವರು ಕೊರತೆ ಮಾಡಲಿಲ್ಲ. ತಿಂಗಳಾಡಿ ಸರಕಾರಿ ಪ್ರಾಥಮಿಕ ಶಾಲೆ, ಕೆಯ್ಯೂರು ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ಬಳಿಕ ಲಕ್ಷ್ಮೀಶ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿಗೆ ಸೇರಿಕೊಂಡರು. ರಜಾ ದಿನಗಳಲ್ಲಿ ತಾನೂ ಕೂಲಿಗೆ ಹೋದರು.

ಸೇನೆಗೆ ಸೇರುವ ಉತ್ಸಾಹ, ಮನೆಯಲ್ಲೂ ಆರ್ಥಿಕ ಸಂಕಷ್ಟವಿದ್ದುದರಿಂದ ಅವರು ಅದೇ ಸಂದರ್ಭದಲ್ಲಿ ಸೇನಾ ನೇಮಕಾತಿಯಲ್ಲಿ ಭಾಗಿಯಾಗಿದ್ದರು. ಮನೆಯವರು ಲಕ್ಷ್ಮೀಶ ಅವರ ಕನಸಿಗೆ ತಣ್ಣೀರೆರೆಯದೆ ಪ್ರೋತ್ಸಾಹಿಸಿದ್ದಾರೆ. 2007 ಸೆ.17ರಂದು ಸೇನೆಗೆ ಸೇರಿದ ಬಳಿಕ ಲಕ್ಷ್ಮೀಶ ಅವರು ಹೈದರಾಬಾದ್‌, ಜಮ್ಮು, ಉರಿ ಸೆಕ್ಟರ್‌, ಉತ್ತರಾಖಂಡ, ಲಡಾಖ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ಪೂಂಛ್ ನಲ್ಲಿ ನಿಯುಕ್ತಿಗೊಂಡಿದ್ದಾರೆ.

Advertisement

ಉರಿ ಸೆಕ್ಟರ್‌ನ ರೋಚಕ ನೆನಪುಗಳು
ಲಕ್ಷ್ಮೀಶರು ಹೇಳುವಂತೆ ಉರಿ ಸೆಕ್ಟರ್‌ನಲ್ಲಿ ಅವರ ಸೇವೆಯ ದಿನಗಳನ್ನು ಮರೆಯುವಂತೆಯೇ ಇಲ್ಲ. ಗಡಿಭಾಗವಾಗಿರುವುದರಿಂದ, ಪಾಕಿಸ್ಥಾನದ ಉಪಟಳವೂ ಹೆಚ್ಚಿರುವುದರಿಂದ ಯುದ್ಧದ ವಾತಾವರಣ. ದುರ್ಗಮ ಪ್ರದೇಶದಲ್ಲಿ ಹಲವು ದಿನಗಳನ್ನು ಕಳೆಯುವುದು, ಪರಿಸರದ ಮೇಲೆ ಹದ್ದಿನ ಕಣ್ಣಿಡುವುದು, ಕಿರಿಕ್‌ ಮಾಡಿದರೆ ಶತ್ರುವಿನ ಮೇಲೆ ಮಿಂಚಿನ ದಾಳಿ ನಡೆಸಿದ ಅನುಭವಗಳು ಸದಾ ಹಸಿರು. ಶೂನ್ಯ ಉಷ್ಣತೆಯ ಈ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ದಿನಬಳಕೆಗೆ ಬೇಕಾದ ವಸ್ತುಗಳನ್ನು ಹೊತ್ತು ಕೊಂಡು ಹೋಗಬೇಕಾಗಿರುವುದು, ಅದರ ಮಧ್ಯೆ ಆರೋಗ್ಯದ ಸಮಸ್ಯೆಗಳು, ಆದರೂ ದೇಶಸೇವೆಯಲ್ಲಿ ಮುಂದುವರಿಯುವ ಛಲ ಕಷ್ಟಗಳನ್ನು ಮರೆಸುತ್ತವೆ ಎಂದು ಹೇಳುತ್ತಾರೆ. 

ಯಾವುದೇ ಸೌಲಭ್ಯ ಸಿಗುತ್ತಿಲ್ಲ!
ಪುತ್ರ ಸೇನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಯಾವುದೇ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುವುದು ಲಕ್ಷ್ಮೀಶ ಅವರ ತಂದೆಯ ಅಳಲು. ಅವರಿನ್ನೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಮಗನಿಗೆ ಸರಕಾರಿ ನೌಕರಿ ಇದೆ ಎಂದು ಎಪಿಎಲ್‌ ಪಡಿತರ ನೀಡಲಾಗಿದೆ. ಅದೇ ರೀತಿ ಲಕ್ಷ್ಮೀಶ ಅವರಿಗೆ ಕೆಲವೊಂದು ಸೌಲಭ್ಯಗಳಿದ್ದರೂ ಅವರ ಅವಲಂಬಿತರಿಗೆ ಆಸ್ಪತ್ರೆಗಳಲ್ಲಿ ಕೆಲವೊಂದು ಸೌಲಭ್ಯಗಳಿದ್ದರೂ ಅದು ದ.ಕ. ಜಿಲ್ಲೆಯಲ್ಲಿ ಪ್ರಯೋಜನವಾಗುವಂತೆ ಇಲ್ಲ. ಮಿಲಿಟರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ಅಥವಾ ಕಣ್ಣೂರಿಗೆ ಹೋಗಬೇಕು. 

ಇನ್ನು, ಲಕ್ಷ್ಮೀಶ ಅವರು ರೈಲ್ವೇ ವಾರೆಂಟ್‌ ಇ ಟಿಕೆಟ್‌ ಮೂಲಕ ಊರಿಗೆ ಬರುತ್ತಾರೆ. ಹೆಸರು ವೈಟಿಂಗ್‌ ಲಿಸ್ಟ್‌ನಲ್ಲಿದ್ದರೂ ಕೊನೆವರೆಗೂ ಅದು ಕನ್‌ಫ‌ರ್ಮ್ ಆಗುವುದೇ ಇಲ್ಲ ಬಳಿಕ ನಾವೂ ಹಣ ಪಾವತಿಸಿಯೇ ಪ್ರಯಾಣ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸದ್ಯ ಸೈನಿಕರಿಗಿರುವ ಸೌಲಭ್ಯ, ವ್ಯವಸ್ಥೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸುವುದನ್ನು ಮರೆಯುವುದಿಲ್ಲ. 

ಜನ್ಮ ಭೂಮಿ ಶ್ರೇಷ್ಠ
ರಕ್ಷಣಾ ವಿಭಾಗದಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷೆ ಇದ್ದವರಿಗೆ ಇಂದು ಸಾಕಷ್ಟು ಅವಕಾಶಗಳಿವೆ. ಎಲ್ಲಕ್ಕಿಂತಲೂ ಜನ್ಮಭೂಮಿ ದೊಡ್ಡದು. ದೇಶದ ರಕ್ಷಣೆ, ಅದರ ಗೌರವವನ್ನು ಮುಗಿಲೆತ್ತರಕ್ಕೆ ಏರಿಸುವುದು ನಮ್ಮೆಲ್ಲರ ಕರ್ತವ್ಯ. ಯುವ ಸಮುದಾಯ ಸೇನೆಗೆ ಸೇರಿ ಕಾರ್ಯನಿರ್ವಹಿಸಲು ಆಸಕ್ತಿ ತೋರಬೇಕು.
 -ಲಕ್ಷ್ಮೀಶ

ಪುತ್ರ ಸೈನಿಕ ಎನ್ನುವುದೇ ಖುಷಿ
ಮಗ ಸೈನಿಕನಾಗಿ ದೇಶ ಸೇವೆ ಮಾಡುತ್ತಿದ್ದಾನೆ ಎನ್ನುವ ಖುಷಿಯ ಮುಂದೆ ಯಾವುದೂ ಇಲ್ಲ. ಮನೆಯಲ್ಲಿ ಕಷ್ಟದ ವಾತಾವರಣ ಇದ್ದ ಸಂದರ್ಭದಲ್ಲೂ ಸೇನೆಗೆ ಮಗನನ್ನು ಕಳುಹಿಸಿಕೊಟ್ಟ ಹೆಮ್ಮೆ ಇದೆ.
 -ಕೇಚು ಪಾಟಾಳಿ, ಲಕ್ಷ್ಮೀಶರ ತಂದೆ 

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next