Advertisement

7th Pay Commission: ಸರಕಾರಕ್ಕೆ ಅಭಿನಂದನೆ; ಆಗಸ್ಟ್‌ 1ರಿಂದಲೇ ಶಿಫಾರಸುಗಳು ಜಾರಿಗೆ

12:48 AM Jul 17, 2024 | Team Udayavani |

ಬೆಂಗಳೂರು: ರಾಜ್ಯ 7ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನವನ್ನು ಶೇ.27.50ರಷ್ಟು ಹೆಚ್ಚಳ ಮಾಡಿದ ರಾಜ್ಯ ಸರ‌ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಸ್ವಾಗತಿಸಿದ್ದಾರೆ.

Advertisement

7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಪ್ರಸಕ್ತ ವರ್ಷದ ಆಗಸ್ಟ್‌ 1ರಿಂದಲೇ ಶಿಫಾರಸುಗಳು ಜಾರಿಗೆ ಬರಲಿವೆ. ಇದರಿಂದ ಲಕ್ಷಾಂತರ ನೌಕರರ ವೇತನವು ಶೇ.27.5ರಷ್ಟು ಏರಿಕೆಯಾಗಲಿದೆ.

ವೇತನ ಹೆಚ್ಚಳದ ನಿರ್ಧಾರವನ್ನು ಸ್ವಾಗತಿಸಿರುವ ಅವರು, ಹಳೆ ಪಿಂಚಣಿ ಯೋಜನೆ (ಒಪಿಎಸ್‌), ಆರೋಗ್ಯ ಯೋಜನೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ.

ವೆೇತನ ಪರಿಷ್ಕರಣೆ ಮಾಡಿದ್ದಕ್ಕೆ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸರಕಾರಿ ನೌಕರರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರಕಾರ ಅನುಮೋದನೆ ನೀಡಿರುವುದು ಸಮಾಧಾನಕರ ಸಂಗತಿಯಾಗಿದೆ. ಇದಕ್ಕಾಗಿ ನೌಕರರ ಸಂಘ ಸೇರಿ ಎಲ್ಲ ಸಂಘಗಳು ಹಾಗೂ ನೌಕರರ ಪರವಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಜುಲೈ 23ರಂದು ಪ್ರಮುಖ ಸಭೆ
7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಇತರ ಬೇಡಿಕೆಗಳ ಈಡೇರಿಕೆಗಾಗಿ ನೌಕರರ ಸಂಘವು ಜುಲೈ 23ರಂದು ಪ್ರಮುಖ ಸಭೆ ನಡೆಸಲು ತೀರ್ಮಾನಿಸಿದೆ.

Advertisement

ಹಳೇ ಪಿಂಚಣಿ ಯೋಜನೆ, ನೌಕರರಿಗೆ ಆರೋಗ್ಯ ಯೋಜನೆ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಬಾಕಿ ಇದೆ. ಇಷ್ಟೆಲ್ಲ ವಿಚಾರಗಳ ಕುರಿತು ಚರ್ಚಿಸಲು ರಾಜ್ಯದ ಸರಕಾರಿ ನೌಕರರ ಸಂಘಗಳ ಎಲ್ಲ ವೃಂದಗಳು, ರಾಜ್ಯ ಕೇಡರ್‌ ಅಸೋಸಿಯೇಶನ್‌ ಹಾಗೂ ಎಕ್ಸಿಕ್ಯೂಟಿವ್‌ ಸಭೆಯನ್ನು ಜುಲೈ 23ರಂದು ಕರೆಯಲಾಗಿದೆ. ಸಭೆಯಲ್ಲಿ ಎಲ್ಲ ವಿಷಯಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿ.ಎಸ್‌ ಷಡಾಕ್ಷರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next