ಪಾಂಡವಪುರ: ಸಂಬಳ ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಆಸ್ಪತ್ರೆ ಮೇಲ್ವಿಚಾರಕಿ ಶುಭಾ ಹಾಗೂ ಗುತ್ತಿಗೆದಾರರ ವಿರುದ್ಧ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ನಾನ್ ಕ್ಲಿನಿಕ್ ನೌಕರರು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಆಸ್ಪತ್ರೆಯ ನಾನ್ ಕ್ಲಿನಿಕ್ ನೌಕರರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸರ್ಕಾರದಿಂದ ಗುತ್ತಿಗೆ ಪಡೆದುಕೊಂಡಿರುವ ಸ್ಪಟಿಕ ಕಂಪನಿಯವರು ಕಳೆದ 7 ತಿಂಗಳಿನಿಂದ ಸಂಬಳ ನೀಡಿಲ್ಲ. ಅದನ್ನು ಪ್ರಶ್ನಿಸಲು ಹೋದರೆ ಈ ತಿಂಗಳು, ಮುಂದಿನ ತಿಂಗಳು ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ವೇತನ ನೀಡದಿದ್ದರೆ ಸ್ವಚ್ಛ ಮಾಡಲ್ಲ: ನಾನ್ ಕ್ಲಿನಿಕ್ ನೌಕರರು ಸಂಬಳವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಸಂಬಳದಿಂದಲೇ ಮನೆ ಸಂಸಾರ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಇಡಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ನಾವು ಮಾಡಿರುವ ಕೆಲಸಕ್ಕೆ ಸಂಬಳ ಕೇಳಿದರೆ ಗುತ್ತಿಗೆದಾರ ವಾಸು ಸರ್ಕಾರದಲ್ಲಿ ಅನುದಾನದ ಕೊರತೆ ಇದೆ. ಹಾಗಾಗಿ ಇನ್ನೂ ಹಣ ಬಂದಿಲ್ಲ. ಆದ್ದರಿಂದ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಮುಂದಿನ ತಿಂಗಳು ಕೊಡಿಸುತ್ತೇವೆ ಎಂದು ಹರಿಕೆ ಉತ್ತರ ನೀಡುತ್ತಾರೆ. ಈ ಬಗ್ಗೆ ಆಸ್ಪತ್ರೆಯ ಮೇಲಧಿಕಾರಿಗಳು ಕೇಳಿದರೆ ಅವರೂ ಕೂಡ ನಮಗೆ ಸ್ಪಂದಿಸುತ್ತಿಲ್ಲ. ಸಂಬಳ ನೀಡುವವರಿಗೂ ಆಸ್ಪತ್ರೆಯಲ್ಲಿ ಯಾವುದೇ ಸ್ವಚ್ಛತೆ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಸಿದರು.
ಮೇಲ್ವಿಚಾರಕರ ನಿರ್ಲಕ್ಷ್ಯ: ಸಂಬಳದ ಬಗ್ಗೆ ಕೇಳಿದರೆ ಮೇಲ್ವಿಚಾರಕಿ ಶುಭಾ ಅವರು ನೌಕರರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ನಿಮ್ಮ ಸಂಬಳ ನೀಡಲು ನಾನು ನನ್ನ ಆಸ್ತಿ ಮಾರಾಟ ಮಾಡಿಕೊಡ್ಲಾ? ಕೆಲಸ ಮಾಡಿದ್ರೆ ಮಾಡಿ ಇಲ್ಲ ಅಂದ್ರೆ ಬಿಟ್ಟು ಹೋಗಿ ಎಂದು ಉಡಾಫೆಯಾಗಿ ಮಾತನಾಡುತ್ತಾರೆ. ನಮ್ಮ ಕೆಲಸಕ್ಕೆ ಪಡೆಯುವ ಸಂಬಳಕ್ಕೂ ನಾವು ಶುಭಾ ಅವರಿಗೆ ಲಂಚ ಕೊಡಬೇಕಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಆಸ್ಪತ್ರೆಯ ನಾನ್ ಕ್ಲಿನಿಕ್ ನೌಕರರಾದ ರತ್ನಮ್ಮ, ರಾಜಮ್ಮ, ಮಂಗಳಮ್ಮ, ಸಗಾಯಿಮೇರಿ, ಸರೋಜ, ಎಲಿಜಬತ್ ರಾಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ತಾಪಂ ಉಪಾಧ್ಯಕ್ಷೆ ಭೇಟಿ: ಪ್ರತಿಭಟನಾ ಸ್ಥಳಕ್ಕೆ ತಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ರಂಗಸ್ವಾಮಿ ಭೇಟಿ ನೀಡಿ ನೌಕರರ ಸಮಸ್ಯೆ ಆಲಿಸಿದ ಅವರು, ನೌಕರರಿಂದ ದೂರುಗಳನ್ನು ಪಡೆದು ಗುತ್ತಿಗೆ ಪಡೆದ ಕಂಪನಿ ಹಾಗೂ ಮೇಲ್ವಿಚಾರಕಿ ಶುಭಾ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ನಾನ್ ಕ್ಲಿನಿಕ್ ನೌಕರರ ಪ್ರತಿಭಟನೆಗೆ ಬಿಜೆಪಿ ಮುಖಂಡ ನವೀನ್‌ಕುಮಾರ್ ಸಾಥ್ ನೀಡಿದರು.