ವಾಡಿ: ಭಾರತದಲ್ಲಿ ಯೋಗ ಶಿಕ್ಷಣ ಕುರಿತು ಜಾಗೃತಿ ಮೂಡಿಸಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಲಡಾಖ್ ವರೆಗೆ ಸೈಕಲ್ ಯಾತ್ರೆ ಹೊರಟಿರುವ ವಿದೇಶಿ ಮೂಲದ ಇಬ್ಬರು ಯೋಗ ಶಿಕ್ಷಕರು, ತಮಗೆ ಆಹ್ವಾನ ನೀಡುವ ವಿದ್ಯಾ ಸಂಸ್ಥೆಗಳಲ್ಲಿ ವಾಸ್ತವ್ಯ ಹೂಡಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ.
ಗುರುಮಠಕಲ್-ಯಾದಗಿರಿ ಮಾರ್ಗವಾಗಿ ಬಂದಿರುವ ನಾರ್ವೆ ಮೂಲದ ಯೋಗ ಶಿಕ್ಷಕ ಶಿವಾಂಗ್ ಸಾಲ್ಬರ್ಗ್, ಅಮೆರಿಕಾ ಕ್ಯಾಲಿಫೋರ್ನಿಯಾದ ಯೋಗ ಶಿಕ್ಷಕಿ ಅನ್ನೆ ಲೀಬ್ಮ್ಯಾನ್, ಬೆಂಗಳೂರಿನ ಯೋಗ ಶಿಕ್ಷಕ ಪ್ರಮೋದ ನಾರಾಯಣ ಅವರುಗಳು ಕೊಯಿಂಬತ್ತೂರ್‌ನ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ಯೋಗ-ಪರಿಸರ ಜಾಗೃತಿ ಅಭಿಯಾನದಡಿ ಭಾರತದಲ್ಲಿ ಯೋಗ ಜಾಗೃತಿ ಕೈಗೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಾಡಿ ಪಟ್ಟಣದ ಎಸಿಸಿ ಉದ್ಯಾನವನದಲ್ಲಿ ವಾಯುವಿಹಾರಿಗಳಿಗೆ ಯೋಗ ತರಬೇತಿ ನೀಡುವ ಮೂಲಕ ಯೋಗಾಸನದ ಮಹತ್ವ ಮನವರಿಕೆ ಮಾಡುತ್ತಿದ್ದಾರೆ.
‘ಉದಯವಾಣಿ’ಯೊಂದಿಗೆ ಮಾತನಾಡಿದ ನಾರ್ವೆ ಯೋಗ ಶಿಕ್ಷಕ ಶಿವಾಂಗ್ ಸಾಲ್ಬರ್ಗ್, ಮಾನವನ ಏಳ್ಗೆಗಾಗಿ ಇಶಾ ಫೌಂಡೇಶನ್ ದೇಶದಲ್ಲಿ ಆಧ್ಯಾತ್ಮ ಮತ್ತು ಪರಿಸರ ಜಾಗೃತಿಗಾಗಿ ಯೋಜನೆ ರೂಪಿಸಿದೆ. ಕಾವೇರಿ ನದಿ ದಂಡೆಯಲ್ಲಿ 240 ಕೋಟಿ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. 12 ವರ್ಷದ ಯೋಜನೆ ಇದಾಗಿದ್ದು, ಜನರ ಸಹಭಾಗಿತ್ವದಡಿ ಯೋಜನೆ ಸಾಕಾರಗೊಳ್ಳಲಿದೆ.
ಸೆ.3ರಂದು ಕನ್ಯಾಕುಮಾರಿಯಲ್ಲಿ ಆರಂಭಗೊಂಡಿರುವ ನಮ್ಮ ಸೈಕಲ್ ಯಾತ್ರೆ, ಜಮ್ಮು ಕಶ್ಮೀರದ ಲಡಾಖ್ ತಲುಪಿ ಸಮಾರೋಪಗೊಳ್ಳಲಿದೆ. ಈ ಮಧ್ಯೆ ಸುಮಾರು 26000 ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಹೇಳಿಕೊಡಲಾಗಿದೆ ಎಂದು ವಿವರಿಸಿದರು.
ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ಏಕಚಿತ್ತದ ಯೋಗಾಭ್ಯಾಸ ಅತ್ಯಗತ್ಯ. ದೇಶದಲ್ಲಿ ಪಾಶ್ಚಿಮಾತ್ಯ ಶಿಕ್ಷಣ ಜಾರಿಯಲ್ಲಿರುವುದರಿಂದ ಯೋಗಕ್ಕೆ ಪ್ರಾಮುಖ್ಯತೆ ಇಲ್ಲವಾಗಿದೆ. ಯೋಗ ಪಠ್ಯಪುಸ್ತಕಗಳ ಒಂದು ಭಾಗವಾಗಬೇಕು. ದೇಶದ ಜನರ ಆರೋಗ್ಯ ರಕ್ಷಣೆ ಮತ್ತು ನದಿಗಳ ಸಂರಕ್ಷಣೆ ಇಶಾ ಫೌಂಡೇಶನ್ ಪ್ರಮುಖ ಧ್ಯೇಯವಾಗಿದೆ.
ಪ್ರಮೋದ ನಾರಾಯಣ,
ಯೋಗ ಶಿಕ್ಷಕ, ಇಶಾ ಫೌಂಡೇಶನ್