Advertisement

ವಾಡಿಗಲ್ಲಿ ಸೀಲ್‌ಡೌನ್‌: ತಾಂಡಾಗಳಲ್ಲಿ ಆತಂಕ

11:47 AM Jun 05, 2020 | Naveen |

ವಾಡಿ: ಎರಡು ವರ್ಷದ ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟು 21 ದಿನಗಳ ಸೀಲ್‌ಡೌನ್‌ ತೆಕ್ಕೆಗೆ ಜಾರಿದ್ದ ಪಟ್ಟಣಕ್ಕೆ ಮತ್ತೊಮ್ಮೆ ಸೀಲ್‌ಡೌನ್‌ ಸಂಕಟ ಎದುರಾಗಿದೆ.

Advertisement

ಪಟ್ಟಣದ ವಾರ್ಡ್‌ 11ರ ಪಿಲಕಮ್ಮಾ ದೇವಿ ಬಡಾವಣೆಯ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಗುರುವಾರ ಸೆಕ್ಟರ್‌ ಮ್ಯಾಜಿಸ್ಟ್ರೀಟ್‌
ವಿಠ್ಠಲ ಹಾದಿಮನಿ, ಪಿಎಸ್‌ಐ ವಿಜಯಕುಮಾರ ಭಾವಗಿ ಹಾಗೂ ಕಿರಿಯ ಆರೋಗ್ಯ ಸಹಾಯಕಿ ಸಿಬ್ಬಂದಿ ಸಮ್ಮುಖದಲ್ಲಿ ಸೋಂಕಿತರ ನಿವಾಸವಿರುವ ಗಲ್ಲಿಯೊಂದನ್ನು ಸೀಲ್‌ಡೌನ್‌ ಮಾಡಿ ಕಟ್ಟೆಚ್ಚರ ವಹಿಸಲಾಯಿತು.

ನಗರದ ಕಾಮ್ರೇಡ್‌ ಶ್ರೀನಿವಾಸಗುಡಿ ವೃತ್ತದ ಗಣೇಶ ಉಡುಪಿ ಹೋಟೆಲ್‌ ಹಿಂಭಾಗದ ಗಲ್ಲಿಯೊಂದು 14 ದಿನಗಳವರೆಗೆ ಪೊಲೀಸ್‌ ಮತ್ತು ಆರೋಗ್ಯ ಸಿಬ್ಬಂದಿ ನಿಗಾದಲ್ಲಿರಲಿದೆ. ಇಡೀ ಬಡಾವಣೆ ಸೀಲ್‌ ಡೌನ್‌ ಮಾಡದೆ ಕೇವಲ ಸೋಂಕಿತರ ಮನೆಯ ಸುತ್ತಲಿನ ಐದಾರು ಮನೆಗಳಷ್ಟೇ ಸೀಲ್‌ಡೌನ್‌ ಫಜೀತಿಗೆ ಒಳಗಾಗಿದ್ದು, ಪುರಸಭೆ ಸಿಬ್ಬಂದಿ ಕ್ರಿಮಿನಾಶಕ ಸಿಂಪಡಣೆಗೆ ಮುಂದಾಗಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರು ಕಡ್ಡಾಯವಾಗಿ ಏಳು ದಿನಗಳವರೆಗೆ ಹೋಂ ಕ್ವಾರಂಟೈನ್‌ ಅನುಭವಿಸಬೇಕು. ಯಾವೂದೇ ಕಾರಣಕ್ಕೂ ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಾಡಿ ಹಾಗೂ ನಾಲವಾರ ವಲಯದ ವಿವಿಧ ತಾಂಡಾಗಳಿಗೆ ಸೇರಿದ ಮಹಾರಾಷ್ಟ್ರದ ನೂರಾರು ಜನ ವಲಸಿಗರು ಸರಕಾರಿ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿ ಊರು ಸೇರಿಕೊಂಡಿದ್ದಾರೆ. ಇವರು ಊರೆಲ್ಲಾ ಓಡಾಡಿದ ನಂತರ ಪರೀಕ್ಷಾ ವರದಿ ಬಿಡುಗಡೆಯಾಗಿದ್ದು, ಹಲವರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರು ಆಸ್ಪತ್ರೆಗೆ ದಾಖಲಾದ ಬಳಿಕ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದ್ದ ತಾಂಡಾ ನಿವಾಸಿಗಳು, ವಿವಿಧ ಕೆಲಸ ಕಾರ್ಯಗಳಿಗಾಗಿ ನಗರ ಪಟ್ಟಣಗಳಿಗೆ ಹೋಗಿ ಬರುತ್ತಿದ್ದಾರೆ. 20ಕ್ಕೂ ಹೆಚ್ಚು ಪ್ರಕರಣಗಳಿರುವ ತಾಂಡಾಗಳಲ್ಲಿ ಬಿಂದಾಸ್‌ ಆಗಿ ಓಡಾಡಿಕೊಂಡಿದ್ದಾರೆ. ಇದು ಉಳಿದವರ ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next