ವಾಡಿ: ಕೊರೊನಾ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಪ್ರಾಣ ಕಂಟಕವಾಗಿ ಕಾಡುತ್ತಿದ್ದು, 144ನೇ ಕಲಂ ಜಾರಿ ಆಗಿರುವುದರಿಂದ ಸಿಮೆಂಟ್ ನಗರಿ ಸಂಪೂರ್ಣ ಸ್ತಬ್ಧವಾಗಿದೆ.
ದೇಶದ ವಿವಿಧ ರಾಜ್ಯಗಳಿಂದ ಎಸಿಸಿ ಕಾರ್ಖಾನೆಗೆ ಬರುವ ಸಿಮೆಂಟ್ ಸಾಗಾಣಿಕೆ ಲಾರಿಗಳ ಚಾಲಕರು ಅನ್ನ-ನೀರಿಗಾಗಿ ಪರಿತಪಿಸುತ್ತಿದ್ದಾರೆ. ಹೋಟೆಲ್, ಖಾನಾವಳಿ, ದಾಭಾ, ಕ್ಯಾಂಟೀನ್‌ಗಳು ಬಾಗಿಲು ಮುಚ್ಚಿದ್ದರಿಂದ ಹಸಿವು ನೀಗಿಸಿಕೊಳ್ಳಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಪಟ್ಟಣದ ಪ್ರಮುಖ ವೃತ್ತಗಳಲ್ಲಿನ ಗೂಡಂಗಡಿಗಳಿಗೂ ಬೀಗ ಜಡಿದಿರುವ ಕೊರೊನಾ ಭೀತಿ ಕುಡಿಯಲು ಚಹಾ ಮತ್ತು ಬೊಗಸೆ ನೀರು ಸಿಗದಂತ ಪರಿಸ್ಥಿತಿ ಸೃಷ್ಟಿಸಿದೆ. ಹೋಟೆಲ್-ಖಾನಾವಳಿಗಳನ್ನೇ ನಂಬಿ ಬಂದಿರುವ ನೂರಾರು ಸಂಖ್ಯೆಯ ಲಾರಿ ಚಾಲಕರು, ಕ್ಲೀನರ್‌ಗಳು ಉಪಹಾರಕ್ಕಾಗಿ ಪಟ್ಟಣದ ಗಲ್ಲಿ-ಗಲ್ಲಿಗಳಲ್ಲಿ ಓಡಾಡಿ ತಿನ್ನಲು ಏನೂ ಸಿಗದೇ ಪರದಾಡುತ್ತಿದ್ದಾರೆ.
ಕೆಲವರು ಬಾಳೆ ಹಣ್ಣು, ದ್ರಾಕ್ಷಿ, ಟೋಮೋಟೊ ಹಣ್ಣುಗಳನ್ನು ತಿಂದು ದಿನ ದೂಡುತ್ತಿದ್ದಾರೆ. ಇನ್ನು ಕೆಲವರು ನರಕದ ಬದುಕು ಸಹಿಸಲಾಗದೆ ಲಾರಿಗಳನ್ನು ಇಲ್ಲೇ ಬಿಟ್ಟು, ತಮ್ಮೂರಿಗೆ ಪ್ರಯಾಣ ಬೆಳೆಸಿದ್ದಾರೆ. ವಿಶ್ವ ಭೂಪಟದಲ್ಲಿ ಹೆಸರು ನಮೂದಾಗಿರುವ ಸ್ಥಳೀಯ ಎಸಿಸಿ ಸಿಮೆಂಟ್ ಕಂಪನಿ ತನ್ನ ಉತ್ಪದನೆಯನ್ನು ದೇಶದಾದ್ಯಂತ ಸರಬರಾಜು ಮಾಡುವ ಲಾರಿ ಚಾಲಕರ ಕಷ್ಟ ಕೇಳಲು ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.
ವಾಡಿ ನಗರಕ್ಕೆ ಕಾಲಿಟ್ಟ ಗಳಿಗೆಯಿಂದ ಬಂದ್ ಬಿಸಿ ಅನುಭವಿಸುತ್ತಿರುವ ಚಾಲಕರು ಕೊರೊನಾ ಭೀತಿಯ ನಿಷೇಧಾಜ್ಞೆಗೆ ಸಿಲುಕಿ ಫಜೀತಿ ಅನುಭವಿಸುತ್ತಿದ್ದಾರೆ. ಊಟ, ವಸತಿ ಸೌಲಭ್ಯದ ಕೊರತೆಯಿಂದ ಕಂಪನಿಯ ಲಾರಿ ಯಾರ್ಡ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ನೂರಾರು ಲಾರಿಗಳು ಚಾಲಕರಿಲ್ಲದೇ ನಿಂತಿವೆ. ಚಾಲಕರ ಸಮಸ್ಯೆಯಿಂದ ಸಿಮೆಂಟ್ ಚೀಲಗಳನ್ನು ಲೋಡ್ ಮಾಡಲಾಗುತ್ತಿಲ್ಲ. ಇದು ಸಿಮೆಂಟ್ ಉತ್ಪಾದನೆಯ ಆರ್ಥಿಕ ದುಸ್ಥಿತಿಗೂ ಕಾರಣವಾಗಿದೆ. ಲಾರಿ ಮಾಲೀಕರು ವಾಹನ ಬಾಡಿಗೆ ನಷ್ಟ ಅನುಭವಿಸುವಂತಾಗಿದೆ.
ಜಮ್ಮು ಮೂಲದ ಚಾಲಕನಿಗೆ ಮಾಲೀಕನ ಮನೆ ಊಟ: ಸಿಮೆಂಟ್ ಸಾಗಾಣಿಕೆಗಾಗಿ ವಾಡಿ ಎಸಿಸಿ ಕಾರ್ಖಾನೆಗೆ ಬಂದಿರುವ ಜಮ್ಮು-ಕಾಶ್ಮೀರ ಮೂಲದ ಲಾರಿ ಚಾಲಕ ಮಹ್ಮದ್ ಶಕೀಲ್ ಎಂಬಾತ ಕೊರೊನಾ ವೈರಸ್ ಭೀತಿಗೆ ಸಿಲುಕಿ ಊಟ, ವಸತಿ ತೊಂದರೆ ಅನುಭವಿಸಿದ ಪ್ರಸಂಗ ಬೆಳಕಿಗೆ ಬಂದಿದೆ. ಖಾನಾವಳಿ, ಹೋಟೆಲ್, ಅಂಗಡಿಗಳು ಮುಚ್ಚಿದ್ದರಿಂದ ಲಾರಿ ಮಾಲೀಕ ಅನ್ವರ್ ಪಟೇಲ ಕಡಬೂರ ಎನ್ನುವಾತ ತಮ್ಮ ಮನೆಯಿಂದ ಊಟ ಸರಬರಾಜು ಮಾಡುತ್ತಿದ್ದಾರೆ.
ಇನ್ನು ಕೆಲ ಚಾಲಕರು ಕಿರಾಣಿ ಅಂಗಡಿಯಿಂದ ಚುರುಮುರಿ ತಂದು, ಅದಕ್ಕೆ ಖಾರಾ- ಉಪ್ಪು ಬೆರೆಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಹೋಟೆಲ್, ಖಾನಾವಳಿ, ಟ್ರಾನ್ಸ್‌ಫೋರ್ಟ್ ಕಚೇರಿಗಳಲ್ಲಿ ಕೆಲಸ ಮಾಡುವವರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಕೂಲಿಯೂ ಇಲ್ಲ, ಹೊಟ್ಟೆಗೆ ಅನ್ನವೂ ಇಲ್ಲ ಎಂದು ಕಾರ್ಮಿಕರು ಗೋಳಾಡುತ್ತಿದ್ದಾರೆ.
ಮಡಿವಾಳಪ್ಪ ಹೇರೂರ