Advertisement

ಹತ್ತು ತಾಸು ಕಾಯ್ದರೂ ವಿಶೇಷ ರೈಲಲ್ಲಿ ಬರಲಿಲ್ಲ ಒಬ್ಬರೂ!

11:45 AM May 18, 2020 | Naveen |

ವಾಡಿ: ದೆಹಲಿಯಿಂದ ವಲಸಿಗರನ್ನು ಕರೆದು ಕೊಂಡು ವಿಶೇಷ ರೈಲು ಬರಲಿದೆ ಎನ್ನುವ ಮಾಹಿತಿ ಆಧರಿಸಿ ಚಿತ್ತಾಪುರ ತಾಲೂಕಾಡಳಿತ ಪೊಲೀಸ್‌ ಭದ್ರತೆಯೊಂದಿಗೆ ಸುಮಾರು ಹತ್ತು ತಾಸು ಇಲ್ಲಿನ ರೈಲು ನಿಲ್ದಾಣದಲ್ಲಿ ಕಾಯ್ದರೂ ಒಬ್ಬರೂ ಬಂದಿಳಿಯದ ಪ್ರಸಂಗ ಶನಿವಾರ ಸಂಜೆ ನಡೆದಿದೆ.

Advertisement

ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ಚಿತ್ತಾಪುರ ತಹಶೀಲ್ದಾರ್‌ ಉಮಾಕಾಂತ ಹಳ್ಳೆ, ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ನಗರ ಠಾಣೆ ಪಿಎಸ್‌ಐ ದಿವ್ಯಾ ಮಹಾದೇವ, ರೈಲು ನಿಲ್ದಾಣ ಠಾಣೆ ಪಿಎಸ್‌ಐ ವೀರಭಧ್ರಪ್ಪ, ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಡಾ| ಅಮೃತಾ ಕುಲಕರ್ಣಿ ಹಾಗೂ ಆರೋಗ್ಯ, ಪುರಸಭೆ, ಪೊಲೀಸ್‌ ಸಿಬ್ಬಂದಿ, ಪೌರಕಾರ್ಮಿಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ತಾಲೂಕು ಆಡಳಿತದ ತಂಡ ವಲಸಿಗರ ಬರುವಿಕೆಗೆ ಕಾಯ್ದು-ಕಾಯ್ದು ಸುಸ್ತಾಗಿತ್ತು. ಇಷ್ಟೆ ಅಲ್ಲದೇ  ಲಸಿಗರ ಆರೋಗ್ಯ ತಪಾಸಣೆಗೆ ಆರೋಗ್ಯ ಸಿಬ್ಬಂದಿಯ ಮೂರು ಕೌಂಟರ್‌, ವೈದ್ಯರ ತಂಡ, ಕಾರ್ಮಿಕರ ಮಾಹಿತಿ ಸಂಗ್ರಹಕ್ಕಾಗಿ ಕೌಂಟರ್‌, ಊಟ ಮತ್ತು ನೀರಿನ ಬಾಟಲಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಶನಿವಾರ ಮಧ್ಯಾಹ್ನ 1ಗಂಟೆಗೆ ನಿಲ್ದಾಣ ಪ್ರವೇಶ ಪಡೆಯಲಿದೆ ಎನ್ನಲಾದ ವಲಸಿಗರ ರೈಲು, ರಾತ್ರಿ 10:30ಕ್ಕೆ ವಾಡಿ ನಿಲ್ದಾಣ ತಲುಪಿತು. ಹೀಗಾಗಿ ಕೊರೊನಾ ಸೋಂಕಿತರ ರಕ್ಷಣೆಗಾಗಿ ಸಕಲ ಸುರಕ್ಷಾ ಕಿಟ್‌ ಧರಿಸಿ ನಿಂತಿದ್ದ ಇಬ್ಬರು ಆರೋಗ್ಯ ಸಿಬ್ಬಂದಿಯಂತೂ ಧಗೆಯಿಂದ ಬೆವೆತು ಹೋಗಿದ್ದರು. ಅಲ್ಲದೇ ಮಾಜಿ ಶಾಸಕ ವಾಲ್ಮೀಕಿ ನಾಯಕ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಕಾರ್ಯದರ್ಶಿ ವೀರಣ್ಣ ಯಾರಿ, ಪುರಸಭೆ ಸದಸ್ಯ ಕಾಂಗ್ರೆಸ್‌ನ ಶರಣು ನಾಟೀಕಾರ ಅವರು ತಮ್ಮೂರಿನ ಕಾರ್ಮಿಕರ ಸಹಾಯಕ್ಕೆ ಕಾಯ್ದು ನಿಂತಿದ್ದರು.

ಆತಂಕ ಮೂಡಿಸಿದ ಯುವಕ: ಕೊನೆಗಳಿಗೆಯಲ್ಲಿ ಬಂದ ರೈಲು ಹೊರಡುತ್ತಿದ್ದಂತೆ ಯುವಕನೊಬ್ಬ ರೈಲಿನ ಶೌಚಾಲಯಗಳಲ್ಲಿ ನೀರಿಲ್ಲ. ನಾನು ಎಲ್ಲ ನಿಲ್ದಾಣಗಳಲ್ಲಿ ದೂರು ನೀಡುತ್ತಿದ್ದರೂ ಯಾರು ಕೇಳುತ್ತಿಲ್ಲ ಎಂದು ಅಧಿಕಾರಿಗಳಿ ಹೇಳತೊಡಗಿದ. ಈ ವೇಳೆ ರೈಲು ಹೊರಟೇ ಬಿಟ್ಟಿತು. ತಕ್ಷಣವೇ ಸಿಬ್ಬಂದಿ ಸಹಾಯದಿಂದ ರೈಲು ನಿಲ್ಲಿಸಿ ಆತನನ್ನು ಪೊಲೀಸರು ರೈಲಿನೊಳಕ್ಕೆ ತಳ್ಳಿದರು.

ದೆಹಲಿಯಿಂದ ಬೆಂಗಳೂರಿಗೆ ರೈಲು ಹೊರಡುತ್ತಿದೆ. ಅದು ವಾಡಿ ನಿಲ್ದಾಣದಲ್ಲಿ ನಿಲುಗಡೆ ಆಗುತ್ತಿದೆ ಎನ್ನುವ ಮಾಹಿತಿಯಷ್ಟೇ ನಮಗೆ ಸಿಕ್ಕಿತ್ತು. ಎಷ್ಟು ಜನ ವಲಸಿಗರು ಇಳಿಯಲಿದ್ದಾರೆ ಎನ್ನುವ ಮಾಹಿತಿ ಇರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ನಾವು ಸಕಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಯಾರೂ ರೈಲಿನಿಂದ ಇಳಿಯಲಿಲ್ಲ.
ರಮೇಶ ಕೋಲಾರ,
ಸಹಾಯಕ ಆಯುಕ್ತ, ಸೇಡಂ

Advertisement

Udayavani is now on Telegram. Click here to join our channel and stay updated with the latest news.

Next