ವಾಡಿ: ಮಾರಣಾಂತಿಕ ರೋಗ ಕೊರೊನಾ ಕಟ್ಟಿಹಾಕಲು ಘೋಷಿಸಲಾದ ಲಾಕ್‌ಡೌನ್ ಉಲ್ಲಂಘಿಸಿ ರಥೋತ್ಸವ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿರುವ ರಾವೂರ ಗ್ರಾಮದಲ್ಲೀಗ ಅಕ್ಷರಶಃ ರಣ ಮೌನ ಆವರಿಸಿದೆ. ಎಲ್ಲ ಒಳ ರಸ್ತೆಗಳಿಗೆ ಮುಳ್ಳುಕಂಟಿ ಬೇಲಿ ಹಾಕಿ, ಗ್ರಾಮ ಪ್ರವೇಶ ನಿರ್ಬಂ ಧಿಸಲಾಗಿದೆ.
ಜಾತ್ರೆ ಮತ್ತು ರಥೋತ್ಸವ ನಡೆಸುವುದಿಲ್ಲ ಎಂದು ಪೊಲೀಸ್ ಇಲಾಖೆಗೆ ಮತ್ತು ತಾಲೂಕು ದಂಡಾಧಿ ಕಾರಿಗಳಿಗೆ ಲಿಖೀತ ರೂಪದಲ್ಲಿ ಭರವಸೆ ನೀಡಿದ್ದ ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಆಡಳಿತ ಮಂಡಳಿ ಸದಸ್ಯರು, ಏ.16ರಂದು ಸೂರ್ಯ ಹೊರ ಬರುವ ಮುಂಚೆಯೇ ನೂರಾರು ಜನ ಭಕ್ತರ ಸಮ್ಮುಖದಲ್ಲಿ ತೇರು ಸಾಗಿಸಿ ಸಂಭ್ರಮಿಸಿದರು.
ಕೊಟ್ಟ ಮಾತಿಗೆ ಬದ್ಧವಾಗಿರದೇ, ಮಾರಣಾಂತಿಕ ರೋಗದ ಅರಿವಿಲ್ಲದೇ ಮಠದ ಸಂಪ್ರದಾಯವನ್ನೇ ಮುಖ್ಯವೆಂದು ಭಾವಿಸಿದ ಮುಖಂಡರು, ಪಿಎಸ್‌ಐ ವಿಜಯಕುಮರ ಭಾವಗಿ ಹಾಗೂ ಸಿಡಿಪಿಒ ರಾಜಕುಮಾರ ರಾಠೊಡ ಅವರ ತಲೆದಂಡಕ್ಕೆ ಕಾರಣವಾಗಿದ್ದರು. ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ಎಸ್‌ಪಿ ಯಡಾ ಮಾರ್ಟಿನ್, ಕೊರೊನಾ ವೈರಸ್ ಪಸರಿಸುವ ಕೃತ್ಯಕ್ಕೆ ಕೈಹಾಕಿದ ಗ್ರಾಮಸ್ಥರು ಗೃಹಬಂಧನದಿಂದ ಹೊರಬರದಂತೆ ಎಚ್ಚರಿಕೆ ರವಾನಿಸಿದರು. ಗ್ರಾ.ಪಂ ಪಿಡಿಒ ಕಾವೇರಿ ರಾಠೊಡ ಅವರ ಮೂಲಕ ಎಲ್ಲ ಬಡಾವಣೆಗಳಿಗೂ ಮುಳ್ಳಿನ ಬೇಲಿ ಹಾಕಿಸಿದರು.
ಕೊರೊನಾ ಪ್ರಕರಣ ದೃಢಪಟ್ಟ ನಗರದ ಪಿಲಕಮ್ಮಾ ಬಡಾವಣೆಯಿಂದ ಕೇವಲ 3 ಕಿ.ಮೀ ಅಂತರದಲ್ಲಿರುವ ರಾವೂರ ಗ್ರಾಮವನ್ನು ಕಂಪ್ಲೀಟ್ ಸೀಲ್‌ಡೌನ್ ಮಾಡುವ ಮೂಲಕ ಗ್ರಾಮ ಪ್ರವೇಶವನ್ನೇ ನಿರ್ಬಂಧಿ ಸಿದ್ದಾರೆ. ಕಾನೂನು ಉಲ್ಲಂಘಿಸಿ ರಥೋತ್ಸವ ನಡೆಸಿದ ಆರೋಪಿ ಭಕ್ತರೆಲ್ಲರೂ ಮನೆ ಸೇರಿಕೊಂಡಿದ್ದು, ಗ್ರಾಮದಲ್ಲಿ ಸೃಷ್ಟಿಯಾದ ಆತಂಕದ ವಾತವರಣ, ಇಡೀ ಗ್ರಾಮವನ್ನೆ ಸ್ಮಶಾನ ಮೌನಕ್ಕೆ ನೂಕಿದೆ.
ಸಿದ್ಧಲಿಂಗೇಶ್ವರ ಮಠದ ಆವರಣದಲ್ಲಿ ಪೊಲೀಸ್ ವ್ಯಾನ್ ನಿಲ್ಲಿಸಲಾಗಿದ್ದು, ಪ್ರತಿಯೊಬ್ಬರೂ ಮನೆಯ ಬಾಗಿಲು ಮುಚ್ಚಿಕೊಂಡಿರುವ ದೃಶ್ಯಗಳು ಕಂಡುಬಂದಿವೆ. ತಾ.ಪಂ ಸಿಇಒ ಅನಿತಾ ಪೂಜಾರಿ, ಡಿವೈಎಸ್‌ಪಿ ವೆಂಕನಗೌಡ ಪಾಟೀಲ ಇದ್ದರು. ಸಿಪಿಐ ಪಂಚಾಕ್ಷರಿ ಸಾಲಿಮಠ ಹಾಗೂ ಪಿಎಸ್‌ಐ ದಿವ್ಯಾ ಮಹಾದೇವ್ ಗ್ರಾಮಕ್ಕೆ ಬಿಗಿ ಬಂದೋಬಸ್ತ್ ಒದಗಿಸಿದರು.