ವಾಡಿ: ನಾನು ಕ್ಷೇತ್ರಕ್ಕೆ ಬಂದಿಲ್ಲ ಎಂದು ಆರೋಪ ಮಾಡುವವರು ಬಜೆಟ್ ಅಧಿವೇಶನ ಯಾವಾಗಿತ್ತು? ಸಂವಿಧಾನದ ಕುರಿತು ಚರ್ಚೆ ಯಾವಾಗ ಆಗಿತ್ತು? ಎಷ್ಟು ದಿನಗಳ ವರೆಗೆ ಸದನ ನಡೆಯಿತು? ಎದುರಾಗಲಿರುವ ಕೋವಿಡ್ ಸಂಕಟದ ಕುರಿತು ಅಲ್ಲಿ ನಾನೇನು ಮಾತಾಡಿದ್ದಿನಿ ಎನ್ನುವ ಅರಿವು ಇರಬೇಕು ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಾಹೇಬ ಫಂಕ್ಷನ್‌ಹಾಲ್‌ನಲ್ಲಿ ಗುರುವಾರ ವಿವಿಧ ಬಡಾವಣೆಯ 1500 ಪಡಿತರ ಚೀಟಿ ವಂಚಿತ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ರೇಷನ್ ಕಿಟ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚುನಾವಣೆ ವೇಳೆ ಮುಂಬೈ ಮತ್ತು ಪುಣೆ ನಗರದಲ್ಲಿದ್ದ ಬಂಜಾರಾ ಮತದಾರರನ್ನು ಕರೆತರಲು ಬಸ್ ಕಳಿಸುತ್ತಿದ್ದರು. ಈಗೇಕೆ ಕೋವಿಡ್ ಸಂಕಟದಲ್ಲಿ ಸಿಕ್ಕ ತಮ್ಮ ಸಮುದಾಯದವರನ್ನೆ ಸಂಸದರು ಕರೆಸುತ್ತಿಲ್ಲ? ಯಡಿಯೂರಪ್ಪ ಅವರಿಗೆ ಒಂದು ಪತ್ರನಾದರೂ ಬರೆದಿದ್ದಾರಾ? ಎಂದು ಪ್ರಶ್ನಿಸಿದರು.
ಲಾಕ್‌ಡೌನ್ ಘೋಷಣೆಯಿಂದ ಬೆಂಗಳೂರಿನಲ್ಲಿ ತೊಂದರೆಗೊಳಗಾದ ಕಲಬುರಗಿಯ 2400 ಕುಟುಂಬಗಳಿಗೆ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ, ಮುಂಬೈನಲ್ಲಿರುವ 400 ಕುಟುಂಬಗಳಿಗೆ
ರೇಷನ್ ಕಿಟ್ ಕೊಟ್ಟಿರೋದು ನಾನು. ಚಿತ್ತಾಪುರ ತಾಲೂಕಿನಲ್ಲಿ 3000 ಕಿಟ್ ಕೊಡುತ್ತಿರೋದು ನಾನು. 24 ತಾಸು ವಾಡಿ ನಗರದಲ್ಲೇ ಇರುವ ಮಾಜಿ ಶಾಸಕ ವಾಲ್ಮೀಕಿ ನಾಯಕ ಪಕ್ಕದಲ್ಲೇ
ಸೀಲ್‌ಡೌನ್ ಬಡಾವಣೆಗಳಿವೆ ಹೋಗಿ ನೋಡಿದ್ದಾರಾ? ಎಂದು ಪ್ರಶ್ನಿಸಿದರು.