ವಾಡಿ: ಮುಂಬೈ ಹಾಗೂ ಪುಣೆ ನಗರಗಳಿಗೆ ವಲಸೆ ಹೋಗಿದ್ದ ಚಿತ್ತಾಪುರ ತಾಲೂಕಿನ ಸಾವಿರಾರು ಜನ ಗುಳೆ ಕಾರ್ಮಿಕರ ವಿವಿಧ ಗ್ರಾಮಗಳ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿದ ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ ಅವರು, ಕಳಪೆ ಊಟ ಹಾಗೂ ಅವ್ಯವಸ್ಥೆ ಕಂಡು ಗ್ರಾಪಂ ಪಿಡಿಒಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ತಾಪುರ ತಾಲೂಕಿನ ಹಳಕರ್ಟಿ, ಸನ್ನತಿ, ಭಂಕೂರ, ಸಂಕನೂರ, ನಾಲವಾರ, ಕೊಲ್ಲೂರು, ಕೊಂಚೂರು, ರಾವೂರ, ಕೋರವಾರ ಸೇರಿದಂತೆ 30ಕ್ಕೂ ಹೆಚ್ಚು ಕಡೆ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ನಾಲವಾರ ಗ್ರಾಮದ ಸರಕಾರಿ ಪ್ರೌಢಶಾಲೆ, ಸರಕಾರಿ ಉರ್ದು ಶಾಲೆ ಮತ್ತು ವಸತಿ ನಿಲಯ ಹಾಗೂ ಕೋರವಾರ ಗ್ರಾಮದ ನವೋದಯ ಶಾಲೆಯ ಕ್ವಾರಂಟೈನ್ ಕೇಂದ್ರಗಳಲ್ಲಿ ಕಳಪೆ ಊಟ ವಿತರಿಸಲಾಗುತ್ತಿದೆ. ಕುಡಿಯಲು ಶುದ್ಧ ತಂಪು ನೀರಿನ ಬದಲು ಬಿಸಿಯಾದ ನೀರು ಪೂರೈಸಲಾಗುತ್ತಿದೆ. ಆರೋಗ್ಯ ತಪಾಸಣೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಉಲ್ಲಂಘನೆಯಾಗುತ್ತಿದ್ದು, ಕೋವಿಡ್ ಸೋಂಕು ಹರಡುವ ಸಾಧ್ಯತೆಯಿದೆ. ಅಲ್ಲದೆ ಕೆಲವೆಡೆ ವಲಸೆ ಕಾರ್ಮಿಕರನ್ನು ಮನುಷ್ಯರಂತೆ ಕಾಣುತ್ತಿಲ್ಲ. ತಿಳಿ ಸಾರು ಮತ್ತು ಕಳಪೆ ಅಕ್ಕಿಯ ಆಹಾರ ವಿತರಿಸಿ ಭಿಕ್ಷುಕರಂತೆ ಕಾಣಲಾಗುತ್ತಿದೆ. ಉಪಾಹಾರ, ಚಹಾ, ಮಕ್ಕಳಿಗೆ ಹಾಲು, ಬಿಸ್ಕತ್, ಸಿಹಿ ಊಟ, ಕಾಳು ಪಲ್ಲೆ, ರೊಟ್ಟಿ, ಚಪಾತಿ, ಗಟ್ಟಿ ಸಾರು ನೀಡುವಲ್ಲಿ ನಾಲವಾರ ಮತ್ತು ಕೋರವಾರ ಕ್ವಾರಂಟೈನ್ ಕೇಂದ್ರಗಳ ಉಸ್ತುವಾರಿ ಅ ಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಅವ್ಯವಸ್ಥೆ ಸರಿಪಡಿಸದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಎಚ್ಚರಿಸಿದರು.