Advertisement

ಕ್ವಾರಂಟೈನ್‌ ಕೇಂದ್ರಗಳು ಈಗ ಸೋಂಕಿತರ ತಾಣ!

11:49 AM May 21, 2020 | Naveen |

ವಾಡಿ: ಹೆಚ್ಚಿನ ಸಂಖ್ಯೆಯಲ್ಲಿ “ಮಹಾ’ ಗುಳೆ ಕಾರ್ಮಿಕರನ್ನು ಹೊಂದಿರುವ ಚಿತ್ತಾಪುರ ತಾಲೂಕಿನ ಕ್ವಾರಂಟೈನ್‌ ಕೇಂದ್ರಗಳು ಈಗ ಕೋವಿಡ್ ಸೋಂಕಿತರ ತಾಣಗಳಾಗಿ ಮಾರ್ಪಡುತ್ತಿವೆ. ಜಿಲ್ಲೆಯ ಕ್ವಾರಂಟೈನ್‌ ಕೇಂದ್ರಗಳಿಂದಲೇ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮಹಾರಾಷ್ಟ್ರದಿಂದ ಕಾರ್ಮಿಕರೊಂದಿಗೆ ಸೋಂಕು ಕೂಡ ಕಲ್ಯಾಣ ನಾಡಿಗೆ ವಲಸೆ ಬಂದಂತಾಗಿದೆ.

Advertisement

ಚಿತ್ತಾಪುರ ತಾಲೂಕಿನಲ್ಲಿ ಮಂಗಳವಾರ ಒಟ್ಟು 7 ಪ್ರಕರಣಗಳು ಪತ್ತೆಯಾಗಿದ್ದವು. ಬುಧವಾರ ಎರಡು ಪ್ರಕರಣ ಬೆಳಕಿಗೆ ಬಂದಿವೆ. ಹಳಕರ್ಟಿ ದರ್ಗ ಕ್ವಾರಂಟೈನ್‌ನಲ್ಲಿ ನಾಲವಾರ ಸ್ಟೇಷನ್‌ ತಾಂಡಾಕ್ಕೆ ಸೇರಿದ ದಂಪತಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅರಣಕಲ್‌ ತಾಂಡಾದಲ್ಲಿ ಮೂರು, ಬುಗಡಿ ತಾಂಡಾದಲ್ಲಿ ಎರಡು ಪ್ರಕರಣಗಳು ಕಾಣಿಸಿಕೊಂಡಿದ್ದವು. ಬುಧವಾರ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಬಳವಡಗಿ ಗ್ರಾಮದ 26 ವರ್ಷದ ಪುರುಷನಿಗೆ ಮತ್ತು ಯಾಗಾಪುರ ಗ್ರಾಮದ 50 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದ ವಲಸಿಗರು ಎಂಬುದು ಖಚಿತವಾಗಿದೆ.

ಕೋವಿಡ್ ಕರಿನೆರಳು: ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರಲ್ಲಿ ಚಿತ್ತಾಪುರ ತಾಲೂಕಿನದ್ದೇ ಸಿಂಹ ಪಾಲು. ತಾಲೂಕಿನ ವಿವಿಧ ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಕ್ವಾರಂಟೈನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 7000ಕ್ಕೂ ಹೆಚ್ಚು ಕಾರ್ಮಿಕರು ತಂಗಿದ್ದಾರೆ. ಇವರಲ್ಲಿ ಶೇ.95 ತಾಂಡಾ ನಿವಾಸಿಗಳಾಗಿದ್ದಾರೆ. ಈ ಭಾಗದ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.

ಥರ್ಮಲ್‌ ಸ್ಕ್ರೀನಿಂಗ್‌: ಜಿಲ್ಲೆಯ ಅತಿ ದೊಡ್ಡ ಕ್ವಾರಂಟೈನ್‌ ಕೇಂದ್ರ ಹಳಕರ್ಟಿಯ ದರ್ಗಾದಲ್ಲಿ ದಂಪತಿಗೆ ಸೋಂಕು ದೃಢಪಡುತ್ತಿದ್ದಂತೆ ಇಲ್ಲಿ ತಂಗಿರುವ 900 ಕಾರ್ಮಿಕರು, ಥರ್ಮಲ್‌ ಸ್ಕ್ರೀನಿಂಗ್‌ಗೆ ಹಣೆಯೊಡ್ಡಲು ಮುಂದೆ ಬಂದಿದ್ದಾರೆ. ಬುಧವಾರ ದರ್ಗಾ ಕ್ವಾರಂಟೈನ್‌ ಕೇಂದ್ರದಲ್ಲಿ ವಾಡಿ ಪುರಸಭೆ ವತಿಯಿಂದ ಕ್ರಿಮಿನಾಶಕ ಸಿಂಪರಣೆ ಮಾಡಲಾಗಿದೆ. ನೂರಾರು ಕಾರ್ಮಿಕರು ಸರತಿ ಸಾಲಿನಲ್ಲಿ ನಿಂತು ದೇಹದ ಉಷ್ಣಾವಂಶ ಪರೀಕ್ಷೆ ಮಾಡಿಸಿಕೊಂಡರು. ಸೋಂಕಿತರು ವಾಸವಿದ್ದ ಕೋಣೆಗೂ ಕ್ರಿಮಿನಾಶ ಸಿಂಪರಣೆ ಮಾಡಿ ಬೀಗ ಹಾಕಲಾಗಿದೆ. ಕರ್ತವ್ಯನಿರತ ಆರೋಗ್ಯ ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಾರ್ಮಿಕರಿಗೆ ತಿಳಿ ಹೇಳುತ್ತಿದ್ದಾರೆ.

ಮಡಿವಾಳಪ್ಪ ಹೇರೂರ

Advertisement
Advertisement

Udayavani is now on Telegram. Click here to join our channel and stay updated with the latest news.

Next