Advertisement
ವಾಡಿ ನಗರ ಸೇರಿದಂತೆ ಶಹಾಬಾದ, ರಾವೂರ, ಕುಂದನೂರು, ಹಳಕರ್ಟಿ, ಕಮರವಾಡಿ, ಲಕ್ಷ್ಮೀಪುರವಾಡಿ ಗ್ರಾಮಗಳಿಂದ ಇಂಗಳಗಿಗೆ ಆಗಮಿಸಿದ್ದ ಸಾವಿರಾರು ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಕೆಲವರಂತೂ ಬೆಳಗ್ಗೆ 7 ಗಂಟೆಗೆ ಪಾಳಿ ಹಚ್ಚಿದ್ದರು. ಬೈಕ್ ಮತ್ತು ಕಾರುಗಳಲ್ಲಿ ಬರುತ್ತಿದ್ದ ಯುವಕರ ತೆಕ್ಕೆಯಲ್ಲಿ ಮದ್ಯದ ಬಾಟಲಿಗಳೇ ಕಾಣುತ್ತಿದ್ದವು. ನಮಗೆ ಎಣ್ಣೆ ಸಿಗುತ್ತೋ ಇಲ್ಲವೋ ಎಂಬಂತೆ ಜನರು ಕಿಕ್ಕಿರಿದು ಸೇರಿ ಗದ್ದಲಕ್ಕೆ ಕಾರಣವಾದರು. ಇದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ನಮ್ಮೂರಿನಲ್ಲಿ ಎಂಎಸ್‌ಐಎಲ್ ಮದ್ಯದ ಅಂಗಡಿಯಿದ್ದು, ನಮಗೆ ಮದ್ಯ ಖರೀದಿಸಲು ಅವಕಾಶವಿಲ್ಲದಂತೆ ಆಗಿದೆ. ವಾಡಿ, ಶಹಾಬಾದ ಹಾಗೂ ಇನ್ನಿತರ ಗ್ರಾಮದ ಜನರೇ ಹೆಚ್ಚು ಸೇರಿದ್ದಾರೆ. ಇದು ಗ್ರಾಮದ ಮದ್ಯ ಪ್ರಿಯರಿಗೆ ಅನ್ಯಾಯ ಮಾಡಿದಂತಾಗಿದೆ. ಕೂಡಲೇ ಮದ್ಯ ಖರೀದಿಸಲು ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವಂತೆ ಆದೇಶಿಸಬೇಕು ಎಂದು ಇಂಗಳಗಿಯ ಕೆಲ ಗ್ರಾಮಸ್ಥರು ಪಿಡಿಒ ರೇಶ್ಮಾ ಕೋತ್ವಾಲ್ ಅವರಿಗೆ
ಮೌಖೀಕವಾಗಿ ದೂರು ನೀಡಿದ್ದಾರೆ.