Advertisement

Crime: ಎಸಿಸಿ ಕಿರುಕುಳ: ಇಂಜಿನಿಯರ್ ಆತ್ಮಹತ್ಯೆ

09:34 AM Dec 07, 2023 | Team Udayavani |

ವಾಡಿ: ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ಅದಾನಿ ಒಡೆತನದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ಇಂಜಿನಿಯರಿಂಗ್‌ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ಪವಾರ್ (45) ಕಂಪನಿ ಆಡಳಿತ ಅಧಿಕಾರಿಗಳು ನೀಡಿದ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.7ರ ಗುರುವಾರ ಬೆಳಗ್ಗೆ ವಾಡಿ ಪಟ್ಟಣದ ಎಸಿಸಿ ಕಾಲೋನಿಯಲ್ಲಿ ನಡೆದಿದೆ.

Advertisement

ಆತ್ಮಹತ್ಯೆಗೆ ಶರಣಾದ ಇಂಜಿನಿಯರ್ ರಮೇಶ್ ಪವಾರ್ ಅವರು ಚಿತ್ತಾಪುರ ಮತಕ್ಷೇತ್ರದ ಮಾಜಿ ಶಾಸಕ ಬಿಜೆಪಿಯ ನಾಯಕ ದಿವಂಗತ ವಾಲ್ಮೀಕಿ ನಾಯಕ ಅವರ ಮಗಳ ಪತಿ. ಎಸಿಸಿಯ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ 26 ವಾರ್ಷಗಳಿಂದ ಎಸಿಸಿ ಕಂಪನಿಯಲ್ಲಿ ಇಂಜಿನಿಯರಿಂಗ್‌ ಆಗಿ ಸೇವೆ ಸಲ್ಲಿಸುತ್ತಿರುವ ರಮೇಶ್ ಪವಾರ್, ಕಾರ್ಮಿಕರ ಸಮಸ್ಯೆಗಳ ವಿರುದ್ಧ ದನಿಯೆತ್ತಿದ್ದರೂ ಎನ್ನಲಾಗಿದೆ.

ಕಂಪನಿಯ ಅಧಿಕಾರಿಗಳು ನಡೆಸುತ್ತಿದ್ದ ಕಾರ್ಮಿಕ ವಿರೋಧಿ ಚಟುವಟಿಕೆಗಳ ವಿರುದ್ಧ ಮಾತನಾಡಿದ್ದೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಲು ಕಾರಣ ಎಂಬುದು ಅಮೃತ ರಮೇಶ್ ಪವಾರ್ ಬರೆದಿಟ್ಟಿರುವ ಡೆತ್ ನೋಟ್ ನಿಂದ ಗೊತ್ತಾಗಿದೆ.

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಎಸಿಸಿ ಆಡಳಿತ ಕಾರ್ಮಿಕರನ್ನು ವಿ ಆರ್ ಎಸ್ (ಸ್ವಯಂ ನಿವೃತ್ತಿ) ಹೆಸರಿನಲ್ಲಿ ಕೆಲಸದಿಂದ ತೆಗೆದ ಹಾಕುತ್ತಿದ್ದು, ಇಂಜಿನಿಯರಗಳೂ ಕೂಡ ಸ್ವಯಂ ನಿವೃತ್ತಿಯ ಕತ್ತಿಗೆ ಬಲಿಯಾಗಿದ್ದಾರೆ.

Advertisement

ಸ್ವಯಂ ನಿವೃತ್ತಿ ಘೋಷಿಸಬೇಕು ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕಲಾಗುವುದು ಎಂಬ ಒತ್ತಡ ಎಸಿಸಿ ಆಡಳಿತ ಮಂಡಳಿಯಿಂದ ಬರುತ್ತಿತ್ತು. ಕೆಲಸ ಕಳೆದು ಕಳೆದುಕೊಳ್ಳುವ ಭೀತಿಯಲ್ಲಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹಾಗೂ ನನ್ನ ಸಾವಿಗೆ ಎಸಿಸಿ ಘಟಕ ವ್ಯವಸ್ಥಾಪಕ ಮತ್ತು ಎಚ್ ಆರ್ ವಿಭಾಗದ ವಿವಿಧ ಅಧಿಕಾರಿಗಳು ಕಾರಣ ಎಂದು ರಮೇಶ್ ಪವಾರ್ ತಮ್ಮ ಡೆತ್ ನೋಟ್ ನಲ್ಲಿ ಹೆಸರುಗಳ ಸಮೇತ ಬರೆದಿಟ್ಟಿದ್ದಾರೆ.

ಅಲ್ಲದೇ ಸಾಯುವ ಮುನ್ನ ವಿಡಿಯೋ ಮಾಡುವ ಮೂಲಕ ಎಸಿಸಿ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕ್ಷೇತ್ರದ ಶಾಸಕ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ.

ವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಎಸಿಸಿ ಕಂಪನಿಯ ನೂರಾರು ಜನ ಕಾರ್ಮಿಕರು ಸೇರಿದ್ದು ಕಂಪನಿಯ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾವಿಗೆ ಕಾರಣರಾದ ಎಸಿಸಿ ಕಂಪೆನಿಯ ಅಧಿಕಾರಿಗಳನ್ನು ಬಂಧಿಸುವವರೆಗೂ ಶವ ಕೆಳಗಿಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪರಿಣಾಮ ವಾಡಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next