ಮಡಿವಾಳಪ್ಪಹೇರೂರ
ವಾಡಿ: ಸರ್ಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಐತಿಹಾಸಿಕ ಬೌದ್ಧ ತಾಣ ಸನ್ನತಿಯಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. 2009ರಲ್ಲಿ ಉತ್ಖನನ ಮಾಡಲಾದ ಎರಡು ಎಕರೆ ಜಾಗದಲ್ಲಿ ಬೌದ್ಧ ವಿಹಾರ, ಎತ್ತರದ ಬುದ್ಧನ ಮೂರ್ತಿಗಳು, ತಾಮ್ರದ ಆಭರಣಗಳು, ಶಾತವಾಹನ ಕಾಲದ ನಾಣ್ಯಗಳು, ಧ್ವಸಂಗೊಂಡ ಇಟ್ಟಿಗೆ ಮನೆಗಳು ಸೇರಿದಂತೆ ಹಲವು ಶಿಲೆಗಳು ಪತ್ತೆಯಾಗಿದ್ದವು.
ದುರಂತವೆಂದರೆ 11 ವರ್ಷಗಳ ಹಿಂದೆ ಪರಿಸ್ಥಿತಿ ಹೇಗಿತ್ತೋ ಇಂದಿಗೂ ಹಾಗೇ ಇದೆ. ಪುರಾತನ ಬುದ್ಧವಿಹಾರ, ಭಗ್ನಾವೇಶದಲ್ಲಿ ಪತ್ತೆಯಾಗಿರುವ ನೂರಾರು ಬೌದ್ಧ ಶಿಲ್ಪಗಳು, ಬುದ್ಧನ ಮೂರ್ತಿಗಳು, ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ರೇಖಾಚಿತ್ರದ ಶಿಲೆ, ಬ್ರಾಹ್ಮಿ ಲಿಪಿ ಶಾಸನ ಹೀಗೆ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಬೌದ್ಧ ಪರಂಪರೆಯನ್ನು ಇಡೀ ಜಗತ್ತೇ ತಲೆ ಎತ್ತಿ ನೋಡುವಂತೆ ಮಾಡಿರುವ ಸನ್ನತಿ ಸಂರಕ್ಷಣೆಗೆ ಗಮನ ಹರಿಸಬೇಕಿದೆ.
ವಿಶಾಲವಾದ ಕನಗನಹಳ್ಳಿ ಪ್ರದೇಶದ ಜಮೀನಿನಲ್ಲಿರುವ ಈ ಬೌದ್ಧ ಶಿಲೆಗಳನ್ನು ರಕ್ಷಣೆ ಮಾಡಲು ರಾತ್ರಿ ಮೂವರು, ಬೆಳಿಗ್ಗೆ ಮೂವರು ಜನ ಇಬ್ಬರು ಸೆಕ್ಯೂರಿಟಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನೆಲದಡಿ ಹರಡಿರುವ ಮತ್ತು ತಗಡಿನ ಶೆಡ್‌ಗಳಲ್ಲಿ ಜೋಡಿಸಿಡಲಾದ ಬುದ್ಧನ ಶಿಲ್ಪಕಲೆಗಳ ಭಗ್ನಾವಶೇಷಗಳ ಕೆಳಗೆ ಹಾವು, ಚೇಳು ಸೇರಿದಂತೆ ವಿಷಜಂತುಗಳು ಆಶ್ರಯ ಪಡೆದಿವೆ. ಇಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಹಾವು-ಚೇಳುಗಳಿಂದ ಹುಷಾರಾಗಿರಿ ಎಂದು ಸೆಕ್ಯೂರಿಟಿ ಸಿಬ್ಬಂದಿ ಹೇಳುತ್ತಾರೆ.
ಸನ್ನತಿ ಬೌದ್ಧ ತಾಣ ಅಭಿವೃದ್ಧಿ ಹೊಂದುವಲ್ಲಿ ಹಿನ್ನಡೆಯಾಗಿದೆ. ಜನಪ್ರತಿನಿಧಿಗಳು, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಬುದ್ಧ, ಸಾಮ್ರಾಟ್ ಅಶೋಕನ ಕಾಲಘಟ್ಟ ನೆನಪಿಸುವ ಐತಿಹಾಸಿಕ ತಾಣ ಪಾಳು ಬಿದ್ದಿರುವುದು ಗಂಭೀರ ವಿಷಯ. ಜಿಲ್ಲಾಧಿಕಾರಿಗಳು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳ ಗಮನ ಸೆಳೆಯುತ್ತೇನೆ.
.
ಡಾ|ವಿಠ್ಠಲ ದೊಡ್ಡಮನಿ,
ಕಲಬುರಗಿ
ಸನ್ನತಿಯಲ್ಲಿ ಉತ್ಖನನಗೊಂಡು ಪತ್ತೆಯಾದ ಬುದ್ಧನ ಮೂರ್ತಿಗಳು ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲವನ್ನು ನೆನಪಿಸುತ್ತದೆ. ಬೌದ್ಧ ಧರ್ಮದ ಐತಿಹಾಸಿಕ ಕುರುಹು ಪತ್ತೆಯಾಗಿರುವುದು ಕಲಬುರಗಿ ನೆಲದ ಮಹತ್ವ ಹೆಚ್ಚಿಸಿದೆ. ಇದರ ರಕ್ಷಣೆ ಮಾಡುವ ಜತೆಗೆ ಅಭಿವೃದ್ಧಿಗೆ ಮುಂದಾಗಬೇಕಿದ್ದ ಭಾರತೀಯ ಪ್ರಾಚ್ಯವಸ್ತು ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ.
.
ಬಿ.ಎಂ. ರಾವೂರ,
ಹಿರಿಯ ಪ್ರವಾಸಿ ಮಾರ್ಗದರ್ಶಿ, ಕಲಬುರಗಿ